ತುಳುನಾಡಿನಾದ್ಯಂತ ಕಾರಣಿಕದ ಶಕ್ತಿ ಸ್ವರೂಪನಾಗಿ ನಂಬಿದ ಭಕ್ತರ ಕೈ ಹಿಡಿದು ಪೊರೆವ ದೈವವಾಗಿ, ಭಕ್ತ ಕುಲ ಕೋಟಿ ಜನರನ್ನೂ ಉದ್ದರಿಸುತ್ತಾ, ಇಷ್ಟ ಕಷ್ಟಗಳಿಗೆ ಜೊತೆ ನಿಂತು ರಕ್ಷಾ ಕವಚವಾಗಿ ಕೊರಗಜ್ಜ ದೈವ ಪೊರೆಯುತ್ತಿರುವಾಗ, ಮುಂಬಯಿಯಂತಹ ಮಹಾನಗರವನ್ನು ನಂಬಿ ಅದನ್ನೇ ತಮ್ಮ ಕರ್ಮ ಭೂಮಿಯನ್ನಾಗಿಸಿಕೊಂಡು ದುಡಿಯುತ್ತಿರುವ ಅದೆಷ್ಟೋ ತುಳುನಾಡ ಭಕ್ತ ಜನರ ಆರಾಧ್ಯ ದೈವವಾಗಿ ಇಂದಿಗೂ ನಂಬಿಕೆಯನ್ನು ಮತ್ತಷ್ಟು ಬಲವಾಗಿಸಿಕೊಳ್ಳುತ್ತಿರುವ ಸ್ವಾಮಿ ಕೊರಗಜ್ಜನ ಕುರಿತಾದ ತಾಳಮದ್ದಳೆಯ ಕಾರ್ಯಕ್ರಮ ಆಯೋಜನೆಗೊಳಿಸಿದ ಉದ್ದೇಶ ನಿಜವಾಗಿಯೂ ಭಕ್ತರ ಭಕ್ತಿಗೆ ಪುಷ್ಟಿ ನೀಡಿದಂತಾಗಿದೆ ಎಂದು ರೀಜೆನ್ಸಿ ಬ್ಯಾಂಕ್ವೆಟ್ ಹಾಲ್ ನಾಲಾಸೋಪಾರದಲ್ಲಿ ನಡೆದ ಸ್ವಾಮಿ ಕೊರಗಜ್ಜನ ತಾಳಮದ್ದಳೆ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ನೆರವೇರಿಸುತ್ತಾ ಶಶಿಧರ್ ಕೆ ಶೆಟ್ಟಿ ಇನ್ನಂಜೆಯವರು ಮಾತನಾಡಿದರು.ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಂಕರ್ ಆಳ್ವ ಅವರು ಮಾತನಾಡುತ್ತಾ, ಕಥೆ ಸಂಭಾಷಣೆ ಎಲ್ಲವೂ ಕೂಡಾ ಅರ್ಥಪೂರ್ಣವಾಗಿದ್ದು ತಾಳಮದ್ದಳೆ ವೀಕ್ಷಕರಿಗೆ ಹೊಸ ಅನುಭವದೊಂದಿಗೆ ಕೊರಗಜ್ಜನ ಬಗೆಗಿದ್ದ ಭಕ್ತಿ ಭಾವ ಖಂಡಿತವಾಗಿಯೂ ಮತ್ತಷ್ಟು ವೃದ್ಧಿಯಾಗುತ್ತದೆ. ತಾಳಮದ್ದಳೆಯ ಆಯೋಜನೆಯ ಪಾತ್ರಧಾರಿಗಳಿಗೂ ಸೂತ್ರಧಾರಿಗಳಿಗೂ ನೆರೆದ ಸರ್ವರಿಗೂ ಶುಭವಾಗಲಿ ಎಂದು ಶುಭ ಹಾರೈಸಿದರು. ಭಗವಂತನ ಅನುಗ್ರಹವಿಲ್ಲದೇ ಯಾವ ಕಾರ್ಯವೂ ನೆರವೇರಲು ಸಾಧ್ಯವಿಲ್ಲ. ದೈವ ದೇವರ ಇಚ್ಛೆ ಏನಿದೆಯೋ ಅಂತೆಯೇ ಎಲ್ಲವೂ ನಡೆಯುತ್ತದೆ. ಆ ಇಚ್ಛೆಯ ಸಂಕಲ್ಪ ಸಿದ್ದಿಯಂತೆಯೇ ಇಂದು ಕೊರಗಜ್ಜನ ತಾಳಮದ್ದಳೆಯನ್ನು ಕೇಳುವ ಯೋಗ ಭಾಗ್ಯವನ್ನು ದೈವವೇ ನಮ್ಮೆಲ್ಲರಿಗೂ ಒದಗಿಸಿಕೊಟ್ಟಿದೆ. ಇದು ನಮ್ಮೆಲ್ಲರ ಪುಣ್ಯ ಸುಯೋಗ ಎಂದು ನಾಗರಾಜ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಇಂತಹ ಕಾರ್ಯಕ್ರಮಗಳು ಮುಂಬಯಿ ತುಳುವರಿಗೆ ಸದಾ ಕಾಲ ದೈವ ದೇವರ ಬಗೆಗೆ ಭಕ್ತಿ ಶೃದ್ದೆ ನಂಬಿಕೆಗಳನ್ನು ಉಳಿಸಿಕೊಳ್ಳುವಲ್ಲಿ ಚೆತೋಹಾರಿಯಾಗಿದೆ. ಈ ದಿಸೆಯಲ್ಲಾದರೂ ಇಂತಹ ಬಹು ಸಂಖ್ಯಾ ಕಾರ್ಯಕ್ರಮಗಳು ಮುಂಬಯಿಯಲ್ಲಿ ಆಯೋಜನೆಯಗುತ್ತಿರಲಿ. ಆ ಮೂಲಕ ಮುಂಬಯಿ ತುಳುವರು ದೈವ ದೇವರ ಮೇಲಿನ ನಂಬಿಕೆಯೊಂದಿಗೆ ಪರಿಪೂರ್ಣ ಜೀವನವನ್ನು ನಡೆಸುವ ಯೋಗ ಪಡೆಯಲಿ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಓ ಪಿ ಪೂಜಾರಿಯವರು ತಿಳಿಸಿದರು.ಮತ್ತೊರ್ವ ಗಣ್ಯರಾದ ಮಂಜುನಾಥ್ ಶೆಟ್ಟಿ ಕೊಡ್ಲಾಡಿಯವರು ಮಾತನಾಡುತ್ತಾ, ಇಂದಿನ ಕಾರ್ಯ ಒತ್ತಡಗಳ ಜೀವನ ಶೈಲಿಯಲ್ಲಿ ಧರ್ಮ, ಆಚಾರ ವಿಚಾರಗಳನ್ನು ಮರೆತು ಬದುಕುತ್ತಿರುವ ಮನುಷ್ಯನಿಗೆ ಇಂತಹ ಕಾರ್ಯಕ್ರಮಗಳು ಸ್ವಲ್ಪ ಮಟ್ಟಿಗಾದರೂ ಮಾನಸಿಕ ನೆಮ್ಮದಿಯನ್ನು, ಒತ್ತಡ ರಹಿತ ಜೀವನವನ್ನು ನಡೆಸುವಲ್ಲಿ ಸಹಕಾರಿಯಾಗಿದೆ ಎಂದು ಅಭಿಪ್ರಾಯ ಮಂಡಿಸಿದರು. ತಾಳಮದ್ದಳೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರುವಲ್ಲಿ ಸಹಕಾರವಿತ್ತು, ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀನಿವಾಸ ಬಳ್ಳಮಂಜ, ಡಾ.ಪ್ರಖ್ಯಾತ್ ಶೆಟ್ಟಿ, ಚೆಂಡೆ ಮತ್ತು ಮದ್ದಳೆಯಲ್ಲಿ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ರೋಹಿತ್ ಉಚ್ಚಿಲ, ಮುಮ್ಮೇಳದಲ್ಲಿ ಶಿವಯೋಗಿ, ಅರಸು ಅಣ್ಣ ದೈವದ ಪಾತ್ರವನ್ನು ನವನೀತ್ ಶೆಟ್ಟಿ ಕದ್ರಿ, ಗುರುವನ ಪಾತ್ರವನ್ನು ವಿಜಯ್ ಕುಮಾರ್ ಶೆಟ್ಟಿ ಮೈಲೊಟ್ಟು, ಅಂಗರನ ಪಾತ್ರವನ್ನು ರವಿ ಭಟ್ ಪಡುಬಿದ್ರಿ, ಭೈರಕ್ಕೆ ಬೈದೆದಿ ಪಾತ್ರವನ್ನು ಸಂಜಯ್ ಕುಮಾರ್ ಶೆಟ್ಟಿ ಗೋಣಿ ಬೀಡು , ಕೊರಗ ತನಿಯ ಪಾತ್ರವನ್ನು ಸದಾಶಿವ ಆಳ್ವ ತಲಪಾಡಿ, ಪಂಜಾದಾಯೆನ ಪಾತ್ರವನ್ನು ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಓಡಿ ಮೈಸಂದಾಯ, ಎಲ್ಯಣ್ಣ ದೈವದ ಪಾತ್ರವನ್ನು ಪ್ರಸನ್ನ ಶೆಟ್ಟಿ ಅತ್ತೂರು ತಮ್ಮ ತಮ್ಮ ಅರ್ಥಗಾರಿಕೆಯ ಮೂಲಕ ಪರಿಪೂರ್ಣವಾಗಿ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಗಣ್ಯರುಗಳಾದ ದೇವೇಂದ್ರ ಬುನ್ನನ್, ಪಾಂಡು ಎಲ್ ಶೆಟ್ಟಿ, ಶಂಕರ್ ಆಳ್ವ, ವೀರೇಂದ್ರ ಶೆಟ್ಟಿ ಗೋರೆಗಾವ್, ಉದ್ಯಮಿ ಜಗನಾಥ್ ಡಿ ಶೆಟ್ಟಿ ಪಳ್ಳಿ, ರಾಜ್ ಶೆಟ್ಟಿ ನಾಲಾಸೋಪರ, ವಿಜಯ್ ಎಮ್ ಶೆಟ್ಟಿ, ಮೋಹನ್ ಬಿ ಶೆಟ್ಟಿ, ಉದ್ಯಮಿ ವಸಂತ್ ಶೆಟ್ಟಿ, ಶನಿ ಮಂದಿರ, ಗಣೇಶ್ ಸುವರ್ಣ ನಾಲಾಸೋಪಾರ, ಉಮಾ ಸತೀಶ್ ಶೆಟ್ಟಿ ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜನೆಯನ್ನು ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು ನೆರವೇರಿಸಿದರು. ಮುಂಬಯಿ ತುಳುವರು, ಕೊರಗಜ್ಜ ದೈವದ ಭಗವದ್ಭಕ್ತರು, ಕಲಾ ಅಭಿಮಾನಿಗಳು, ಕಲಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಆಗಮಿಸಿದ ಸರ್ವರಿಗೂ ಉಟೋಪಚಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಚಾರ ಕಾರ್ಯವನ್ನು ಪ್ರವೀಣ್ ಶೆಟ್ಟಿ ಕಣಂಜಾರು ನಿರ್ವಹಿಸಿದ್ದರು.