ವಿದ್ಯಾರ್ಥಿ ವೇತನ ನೀಡುವ ಉದ್ದೇಶ ಶಿಕ್ಷಣಕ್ಕೆ ಸ್ಫೂರ್ತಿ ನೀಡುವುದು, ಇದರ ಜತೆಗೆ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವ ಕಾರ್ಯವಾಗಬೇಕು. ಸಮಾಜ ಸುಧಾರಣೆ ಮಾಡುವ ಒಳ್ಳೆಯ ಕಾರ್ಯವನ್ನು ಗುರುಪುರ ಬಂಟರ ಮಾತೃ ಸಂಘ ಮಾಡುತ್ತಿದೆ. ನಕಾರಾತ್ಮಕ ಚಿಂತನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಮಕ್ಕಳಿಗೆ ಮಾರ್ಗದರ್ಶನ, ಸಂಸ್ಕೃತಿಯ ತಿಳುವಳಿಕೆ ನೀಡುವ ಕಾರ್ಯವಾಗಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಹೇಳಿದರು. ಗುರುಪುರ ಬಂಟರ ಮಾತೃ ಸಂಘ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು ಹಾಗೂ ಬೆಂಗಳೂರು ಬಂಟರ ಸಂಘ ಇದರ ಸಹಯೋಗದೊಂದಿಗೆ ವಾಮಂಜೂರು ಚರ್ಚ್ ಹಾಲ್ ನಲ್ಲಿ ನಡೆದ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ಮಹಾಸಭೆ, ಸಾಧಕರಿಗೆ ಸಮ್ಮಾನ, ವಿದ್ಯಾರ್ಥಿವೇತನ ವಿತರಣೆ, ವಿದ್ಯಾರ್ಥಿ ಪುರಸ್ಕಾರ, ಬಂಟ ಯುವತಿಯರ ಸಮಾವೇಶ- ಯುವ ಸಂಗಮ, 2024-27 ರ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಎಲ್ಲಾ ಬಂಟರ ಸಂಘ ಮಾತೃ ಸಂಘದ ಅಂಗವಾಗಿದೆ. ಹಿರಿಯರು ನಡೆಸಿದ ಉತ್ತಮ ಕಾರ್ಯವನ್ನು ಈಗಲೂ ಮಾತೃ ಸಂಘ ಮುಂದುವರೆಸಿಕೊಂಡು ಬರುತ್ತಿದೆ ಎಂದು ಹೇಳಿದರು. ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ, ನಮ್ಮ ನಿರ್ಣಯಗಳು ಕಾರ್ಯರೂಪಕ್ಕೆ ಬರಬೇಕು. ಮುಂದಿನ ಒಂದೂವರೆ ವರ್ಷದಲ್ಲಿ ಬಂಟರ ಭವನ ನಿರ್ಮಾಣವಾಗಬೇಕು. ಬಂಟರಿಗೆ ಯಾರೂ ವೈರಿ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಅವರು ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ರಂಗಕರ್ಮಿ ಪರಮಾನಂದ ಸಾಲ್ಯಾನ್ ಸಸಿಹಿತ್ಲು, ತೇಜಸ್ವಿ ಸಿದ್ಧಾರ್ಥ ರೈ ಶೆಡ್ಡೆ ಹೊಸಮನೆ ಅವರನ್ನು ಸಮ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಬಂಟ ಸಮಾಜ ಹಾಗೂ ಅನ್ಯ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ನಡೆಯಿತು. 2024 – 27ರ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ನಡೆಯಿತು. ಬಿವಂಡಿ ಕಲ್ಯಾಣ್ ಬಂಟರ ಸಂಘದ ಅಧ್ಯಕ್ಷ ಸುಭೋದ್ ಡಿ. ಭಂಡಾರಿ, ಬೋಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ, ಇನ್ಸ್ಪೆಕ್ಟರ್ ಕಾತ್ಯಾಯಿನಿ ಆಳ್ವ, ಬೆಂಗಳೂರು ಬಂಟರ ಸಂಘದ ಶಿಕ್ಷಣ ಸಮಿತಿಯ ಸಂಚಾಲಕ ಸದಾನಂದ ಸುಲಾಯ, ಪುಣೆಯ ಉದ್ಯಮಿ ಪ್ರಭಾಕರ ಶೆಟ್ಟಿ, ರೋಹಿತ್ ಶೆಟ್ಟಿ ನಗ್ರಿಗುತ್ತು ಮುಂತಾದವರು ಉಪಸ್ಥಿತರಿದ್ದರು.
ಜಯರಾಮ್ ರೈ ಪುರಸ್ಕಾರ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವಿಜಯಲಕ್ಷ್ಮೀ, ಸದಾಶಿವ ಶೆಟ್ಟಿ, ಉದಯ ಶೆಟ್ಟಿ, ನಯನಾ ಶೆಟ್ಟಿ, ವಿಜಯಲಕ್ಷ್ಮೀ ಶೆಟ್ಟಿ ನಾರಳ ಸಮ್ಮಾನ ಪತ್ರ ವಾಚಿಸಿದರು. ಸುದರ್ಶನ್ ಶೆಟ್ಟಿ ಪೆರ್ಮಂಕಿ ಸ್ವಾಗತಿಸಿದರು. ಸುರೇಖಾ ಶೆಟ್ಟಿ ಹಾಗೂ ಕಿರಣ್ ಪಕ್ಕಳ ಪೆರ್ಮಂಕಿ ಗುತ್ತು ನಿರೂಪಿಸಿದರು. ವಾರ್ಷಿಕ ಮಹಾಸಭೆ, ವಾರ್ಷಿಕ ಸಮಾವೇಶ ಬಳಿಕ ನೃತ್ಯ ಸಿಂಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.