ಬಂಟ ಜನಾಂಗದ ಯುವಕ, ಯುವತಿಯರಿಗೆ ಮಾರ್ಗದರ್ಶನ ನೀಡುವ ಆದರ್ಶ ಕಾರ್ಯಕ್ರಮ ಇದಾಗಿದೆ. ಇದು ಕೇವಲ ಗುರುಪುರ ಬಂಟರ ಮಾತೃ ಸಂಘಕ್ಕೆ ಮಾತ್ರ ಸೀಮಿತವಾಗಿರದೇ ದೇಶ ವಿದೇಶದಲ್ಲಿರುವ ಎಲ್ಲಾ ಮಾತೃ ಸಂಘದವರು ಮಕ್ಕಳಿಗೆ ಸರಿಯಾದ ಮಾಹಿತಿ ಕೊಡುವ ಇಂತಹ ಕಾರ್ಯಕ್ರಮದ ಅನಿವಾರ್ಯತೆ ಇದೆ. ಇದು ಕೇವಲ ಬಂಟ ಸಮಾಜಕ್ಕೆ ಮಾತ್ರವಲ್ಲ ದೇಶದ ಸಮಸ್ತ ಯುವಕ, ಯುವತಿಯರಿಗೆ ಕಾಲಕಾಲಕ್ಕೆ ಸರಿಯಾಗಿ ಮಾರ್ಗದರ್ಶನ ಕೊಡಬೇಕಾದ ಅಗತ್ಯ ಇದೆ. ದೇಶದ ಯುವ ಶಕ್ತಿಯ ಮೇಲೆ ನಂಬಿಕೆ ಇಡಲಾಗಿದೆ. ಯುವ ಶಕ್ತಿ ನಮ್ಮ ದೇಶದ ಸಂಪತ್ತು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಹೇಳಿದರು.
ಅವರು ಗುರುಪುರ ಬಂಟರ ಮಾತೃ ಸಂಘ ಇದರ ಆಶ್ರಯದಲ್ಲಿ ಬಂಟ ಯಾನೆ ನಾಡವರ ಮಾತೃಸಂಘ ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಮಂಗಳೂರು ಹಾಗೂ ಬೆಂಗಳೂರು ಬಂಟರ ಸಂಘ ಇದರ ಸಹಯೋಗದೊಂದಿಗೆ ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕ ಸಮಾವೇಶ, ಮಹಾಸಭೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿವೇತನ ವಿತರಣೆ, ವಿದ್ಯಾರ್ಥಿ ಪುರಸ್ಕಾರ, 2024-27 ರ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದ ಪ್ರಯುಕ್ತ ವಾಮಂಜೂರು ಚರ್ಚ್ ಸಭಾಭವನದಲ್ಲಿ ರವಿವಾರ ನಡೆದ ಬಂಟ ಯುವತಿಯರ ಸಮಾವೇಶ – ಯುವ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ 144 ಕೋಟಿ ಜನಸಂಖ್ಯೆಯಲ್ಲಿ 50 ಕೋಟಿ ಜನಸಂಖ್ಯೆ ಯುವ ಶಕ್ತಿ ಇದೆ. ಇದು ನಮ್ಮ ಸೌಭಾಗ್ಯ. ನಮಗೆ ಹಿರಿಯರು ಒಳ್ಳೆಯ ಜೀವನ ಪದ್ಧತಿ ಕಲಿಸಿಕೊಟ್ಟಿದ್ದಾರೆ. ನಮಗೆ ಒಳ್ಳೆಯ ತುಳು ಭಾಷೆ ನೀಡಿದ್ದಾರೆ. ನಮ್ಮ ಜನಾಂಗಕ್ಕೆ ಇತಿಹಾಸ ಬಗ್ಗೆ ಅರ್ಥೈಸಿಕೊಳ್ಳಬೇಕು. ಹಿರಿಯ ಶ್ರಮದ ಬಗ್ಗೆ ನಾವು ಅರಿಯಬೇಕು, ಮಹಿಳೆಯರಿಗೆ ಪ್ರಾಮುಖ್ಯತೆಯನ್ನು ನಾವು ನೀಡಿದ್ದೇವೆ. ಮನೆ, ಕುಟುಂಬ, ಸಮಾಜ, ಸಾಧನೆ ಒಳ್ಳೆಯದಾಗಬೇಕಾದರೆ ಮಹಿಳೆಯರ ಪಾತ್ರ ಮುಖ್ಯ ಅದು ಶಕ್ತಿಯಾಗಿದೆ. ಅಂತಹ ಸಮಾಜವನ್ನು ಕಟ್ಟುವ ಕಾರ್ಯ ಆಗಬೇಕಾಗಿದೆ ಎಂದು ಡಾ. ಮೋಹನ್ ಆಳ್ವ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಅವರು ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾಕ್ಷಿ ಪಿ.ಶೆಟ್ಟಿ ಯುವ ವಿಭಾಗದ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರು ಗುತ್ತು ಉಪಸ್ಥಿತರಿದ್ದರು. ಸುದರ್ಶನ್ ಶೆಟ್ಟಿ ಪೆರ್ಮಂಕಿ ಸ್ವಾಗತಿಸಿದರು. ಕಿರಣ್ ಪಕ್ಕಳ ಪೆರ್ಮಂಕಿ ಗುತ್ತು, ರಾಜೀವ ಶೆಟ್ಟಿ ಸಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ವಂದಿಸಿದರು.