ಭರತನಾಟ್ಯ ಕಲಾವಿದೆ, ರಂಗಭೂಮಿ ಕಲಾವಿದೆ, ಚಿತ್ರನಟಿ, ಕುಂಚ ಕಲಾವಿದೆ, ವ್ಯಕ್ತಿತ್ವ ವಿಕಸನ ಸಂಪನ್ಮೂಲ ವ್ಯಕ್ತಿ, ನೃತ್ಯ ಸಂಯೋಜಕಿ, ಚಿಣ್ಣರ ಶಿಬಿರ ಸಂಘಟಕಿ ತೃಶಾ ಶೆಟ್ಟಿ ನೀನಾಸಂ ರಂಗ ಶಿಕ್ಷಣ ಕೇಂದ್ರಕ್ಕೆ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡದ ಬಂಟ್ವಾಳ ಮೂಲದ ತೃಶಾ ಶೆಟ್ಟಿಯವರು ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತು ಚಂಚಲಾ ಅವರ ಪುತ್ರಿ. ಬಂಟ್ವಾಳದ ಹೋಲಿ ಫ್ಯಾಮಿಲಿ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ತೃಶಾ ಅವರು, ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ) ಮಂಗಳೂರು ಇಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದಾರೆ.
ಭರತನಾಟ್ಯ ಕಲೆಯಲ್ಲಿ ವಿಶೇಷ ಪ್ರಾವೀಣ್ಯತೆ ಪಡೆದಿರುವ ಅವರು ಜನಪದ ನೃತ್ಯ ಹಾಗೂ ಸಮಕಾಲೀನ ನೃತ್ಯ ಪ್ರಕಾರಗಳಲ್ಲಿ ಪ್ರಭುತ್ವ ಹೊಂದಿದ್ದಾರೆ. ಕರಾವಳಿಯ ಸಮೃದ್ಧ ಗಂಡು ಕಲೆಯಾದ ಯಕ್ಷಗಾನದಲ್ಲೂ ತಮ್ಮ ಕಲಾಸಕ್ತಿಯನ್ನು ವಿಸ್ತರಿಸಿದ್ದಾರೆ.
ರಂಗಾಯಣ ಮೈಸೂರು, ರಂಗ ಶಂಕರ ಬೆಂಗಳೂರು, ಶಂಕರ್ನಾಗ್ ಉತ್ಸವ, ವಿದ್ಯಾವರ್ಧಕ ಸಂಘ ಧಾರವಾಡ ಸೇರಿದಂತೆ ಕರ್ನಾಟಕ ವಿವಿಧ ಭಾಗಗಳಲ್ಲಿ ನಡೆದಿರುವ ರಾಷ್ಟ್ರೀಯ ರಂಗೋತ್ಸವಗಳಲ್ಲಿ ಅವರು ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದ್ದಾರೆ. ‘ವಿಕಾಸ 2022’, ‘ಸಂಸ್ಕೃತಿ 2023’ ಚಿಣ್ಣರ ಶಿಬಿರಗಳನ್ನು ಸಂಘಟಿಸಿರುವ ತೃಶಾ ಪ್ರತಿ ವರ್ಷ 90ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನದ ಸಾಧ್ಯತೆಗಳನ್ನು ವಿಸ್ತರಿಸಿದ್ದಾರೆ.
ಚಾಮರ ಫೌಂಡೇಶನ್ ರಿ, ರಂಗ ಸಂಗಾತಿ ರಿ, ಚಿಂತನ ಸಾಂಸ್ಕೃತಿ ಬಳಗ ನಡೆಸುವ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತೃಶಾ ತಮ್ಮ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ರಾಜ್ಯ ಮಟ್ಟದ ನೀನಾಸಂ ಕಲೆಗಳ ಸಂಗಡ ಮತ್ತು ನಿರ್ದಿಗಂತ ರಾಷ್ಟ್ರೀಯ ಕಲಾ ಉತ್ಸವದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರತಿನಿಧಿಯಾಗಿದ್ದು, ಸಕ್ರಿಯವಾಗಿ ಪಾಲ್ಗೊಂಡು ಉತ್ಸವದ ಯಶಸ್ಸಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕಲಾಭಿ (ರಿ ) ಸಂಘಟನೆಯ ಸಂಸ್ಥಾಪಕ ಸದಸ್ಯರಾಗಿರುವ ತೃಶಾ ಶೆಟ್ಟಿ ತುಳುನಾಡಿನ ಮೊದಲ ಸುದ್ದಿ ಹಾಗೂ ಟಿವಿ ಚಾನೆಲ್ “ನಮ್ಮ ಕುಡ್ಲ” ಇದರ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತೃಷಾ ಜನಪದ ಗಾಯಕಿಯಾಗಿಯೂ ಗಮನಸೆಳೆದಿದ್ದಾರೆ. ರಂಗಭೂಮಿ ಪ್ರಸಾದನ ಕಲೆಯಲ್ಲೂ ಪರಿಣತಿ ಹೊಂದಿರುವ ಅವರು ಮೇಕಪ್ ಆರ್ಟಿಸ್ಟ್ ಜೊತೆಗೆ ಗೋಡೆ ಬರಹ ಮತ್ತು ಕಲಾಕೃತಿ ರಚನೆಯಲ್ಲೂ ಗುರುತಿಸಿಕೊಂಡಿದ್ದಾರೆ. ತೃಶಾ ಸಂಯೋಜಿಸಿದ ನೃತ್ಯ ಪ್ರದರ್ಶನಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಮಮತೆಯ ಸುಳಿ, ದ್ವಯ, ಚಾರುವಸಂತ, ನಿನಗೆ ನೀನೇ ಗೆಳತಿ, ಸತ್ಯೊದ ಸಿರಿ (ತುಳು) ಇವು ತೃಶಾ ಅವರು ನಟಿಯಾಗಿ ರಂಗಭೂಮಿಗೆ ನೀಡಿದ ಅದ್ಭುತ ಕೊಡುಗೆಗಳು ಎಂದರೆ ತಪ್ಪಾಗಲಾರದು.
ಕದಂಬ ಕೌಶಿಕೆ ಎಂಬ ತೃಶಾ ಅವರ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನವು ಕನ್ನಡ ಸಾಹಿತ್ಯ ಸಮ್ಮೇಳಣ ಮತ್ತು ದೇರಳಕಟ್ಟೆಯಲ್ಲಿ ನಡೆದ ನಿಕೊ ಆರ್ಟ್ ಫೆಸ್ಟಿವಲ್ ಗೆ ಆಯ್ಕೆಯಾಗಿದ್ದವು. ಸಾಮಾಜಿಕ ಜಾಗೃತಿ ಮೂಡಿಸುವ ತೃಶಾ ನಿರ್ದೇಶಿಸಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ ‘ಸಿರಿ’ ಎಂಬ ಬೀದಿ ನಾಟಕ ಮಂಗಳೂರಿನಲ್ಲಿ 20ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಏಕವ್ಯಕ್ತಿ ಅಭಿವ್ಯಕ್ತಿ ಕಲೆಯನ್ನು ಪ್ರದರ್ಶಿಸುವ ತೃಶಾ ಅವರ ನಟನಾ ಕೌಶಲ್ಯಕ್ಕೆ ಡಾ. ಚಂದ್ರಶೇಖರ ಕಂಬಾರ ಅವರಿಂದ ರಾಜ್ಯ ಮಟ್ಟದ ಪ್ರಶಸ್ತಿಗೆ ಬಾಜನವಾಗಿತ್ತು. 2020 ರಲ್ಲಿ ಜರುಗಿದ ಅಂತಾರಾಷ್ಟ್ರೀಯ ಬಂಟ್ಸ್ ಉತ್ಸವದಲ್ಲಿ ತೃಶಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದು ಕೊಂಡಿರುತ್ತಾರೆ. ತುಳು ಚಿತ್ರರಂಗದ ಮುಂಚೂಣಿ ನಟರು ಅಭಿನಯಿಸಿರುವ ‘ಪಿಲಿ’ ಎಂಬ ತುಳು ಚಿತ್ರದಲ್ಲಿ ಅವರು ಪ್ರಧಾನ ನಟಿ (ಹೀರೋಯಿನ್) ಯಾಗಿ ನಟಿಸಿ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಅವರ ಎರಡನೇ ಚಲನಚಿತ್ರ ‘ನಿರ್ವಾಣ’ ಏಕ ವ್ಯಕ್ತಿ ನಟನೆಯ ವಿಶಿಷ್ಟ ಛಾಪನ್ನು ಹೊಂದಿದ್ದು, 2024ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದೀಗ ತೃಶಾ ಶೆಟ್ಟಿ ನೀನಾಸಂ ರಂಗ ಶಿಕ್ಷಣ ಕೇಂದ್ರಕ್ಕೆ ರಾಜ್ಯದಿಂದ ಆಯ್ಕೆಯಾದ 16 ಮಂದಿ ಕಲಾವಿದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಕಲಾವಿದೆಯಾಗಿದ್ದಾರೆ.