‘ಭಾರತದ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮುಂಬೈ ವಿಶ್ವವಿದ್ಯಾಲಯದಲ್ಲಿ ಕನ್ನಡ ಕಲಿಕೆಯ ಅವಕಾಶವಿರುವುದು ಹೆಮ್ಮೆಯ ವಿಷಯ. ಹೊರನಾಡು ಮುಂಬೈಯಲ್ಲಿದ್ದುಕೊಂಡು ಕನ್ನಡಿಗರು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ವಿಶ್ವವಿದ್ಯಾಲಯದ ಮೂಲಕ ಕನ್ನಡ ನುಡಿಗೆ ಕೈಲಾದ ಕೊಡುಗೆ ನೀಡಲು ಸಾಧ್ಯವಾಗುತ್ತಿರುವುದು ನಮ್ಮ ಭಾಗ್ಯವೇ ಸರಿ. ಇಲ್ಲಿ ಕಲಿಯಲು ಬರುವ ವಿದ್ಯಾರ್ಥಿಗಳು ಉತ್ತಮ ಲೇಖಕರಾಗಿ ಹೊರಹೊಮ್ಮಬೇಕು, ಮುಂಬೈ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಶಾಶ್ವತವಾಗಿ ದಾಖಲಾಗಿ ಹೆಸರು ಗಳಿಸಬೇಕು’ ಎಂದು ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್. ಉಪಾಧ್ಯ ಅವರು ಕರೆ ನೀಡಿದರು. ಮುಂಬೈ ವಿಶ್ವವಿದ್ಯಾಲಯದ ರಾನಡೆ ಭವನದಲ್ಲಿ ಜೂನ್ 22ರಂದು ನಡೆದ ಎರಡನೆಯ ವರ್ಷದ ಎಂ.ಎ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಹೊಸ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಯಾವುದೇ ವಯೋಮಿತಿಯಿಲ್ಲದೆ, ಯಾವುದೇ ಕ್ಷೇತ್ರದಲ್ಲಿ ಪದವಿ ಪಡೆದ ಅಭ್ಯರ್ಥಿಗಳಿಗೆ ಇಲ್ಲಿ ಕನ್ನಡ ಎಂ. ಎ. ಮಾಡಲು ಅವಕಾಶವಿದೆ. ನಮ್ಮಲ್ಲಿ ಬರುವ ವಯಸ್ಕರಾದ ಪ್ರಬುದ್ಧ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಧನೆ ಬಹು ದೊಡ್ಡದು. ಕಲಿಯುವ ಆಸಕ್ತಿ, ಶ್ರದ್ಧೆ ಇದ್ದು, ಶ್ರಮವಹಿಸಿ ಅಧ್ಯಯನ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಾಧನೆಗೆ ವಯಸ್ಸು ಅಡ್ಡಿಯಲ್ಲ’ ಎಂದು ಅವರು ಹಳೆಯ ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿ, ಹೊಸ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಸಹ ಪ್ರಾಧ್ಯಾಪಕಿಯಾದ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿ ಅವರು ಮಾತನಾಡುತ್ತಾ, ‘ಕನ್ನಡ ವಿಭಾಗ ಒಂದು ಕುಟುಂಬವಿದ್ದಂತೆ, ಇಲ್ಲಿ ಎಲ್ಲರೂ ಒಂದೇ ಪರಿವಾರದ ಸದಸ್ಯರಿದ್ದಂತೆ. ನಮ್ಮ ವಿದ್ಯಾರ್ಥಿಗಳು ಮಾಡುವ ಸಾಧನೆ ನಮಗೆ ಹೆಮ್ಮೆ ತರುತ್ತದೆ. ಅವರ ಯಶಸ್ಸಿಗೆ ಸಂಪೂರ್ಣ ಸಹಕಾರ, ಪ್ರೋತ್ಸಾಹ ಇಲ್ಲಿ ದೊರೆಯುತ್ತವೆ’ ಎಂದು ನುಡಿದರು.
ಮೊದಲನೆಯ ವರ್ಷದ ವಿದ್ಯಾರ್ಥಿಗಳಿಂದ ಆಯೋಜಿತವಾದ ಈ ಕಾರ್ಯಕ್ರಮದಲ್ಲಿ ಅಡ್ವೊಕೇಟ್ ಶೇಖರ್ ಶೆಟ್ಟಿ ಅವರು ಸ್ವಾಗತ ಕೋರಿದರೆ, ಮಹದೇವ್ ಜಾವೇರಿ ಅವರು ನಿರ್ವಹಿಸಿ, ವಿಕ್ರಮ್ ಜೋಶಿಯವರು ವಂದನಾರ್ಪಣೆಗೈದರು. ದ್ವಿತೀಯ ವರ್ಷದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಎರಡು ವರ್ಷಗಳಲ್ಲಿ ತಮಗೆ ಇಲ್ಲಿ ಗುರುಗಳಿಂದ ದೊರೆತ ಪ್ರೋತ್ಸಾಹ, ಮಾರ್ಗದರ್ಶನವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾ, ಎಂ. ಎ. ಕಲಿಕೆಯಿಂದ ತಮಗಾದ ಪ್ರಯೋಜನವನ್ನು. ಅನುಭವಗಳನ್ನು ಹಂಚಿಕೊಂಡರು.