ಮೂಡುಬಿದಿರೆ: ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪದಕ ವಿಜೇತ, ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್ನ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮಂಗಳವಾರ ವಿದ್ಯಾಗಿರಿಯಲ್ಲಿ ಅಭಿನಂದಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್ನ ಗೌರವಾಧ್ಯಕ್ಷ ಡಾ ಎಂ ಮೋಹನ್ ಆಳ್ವ ಮಾತನಾಡಿ, ನಮ್ಮ ದೇಶದಲ್ಲಿ ಪರಿಚಿತ ಆಟವಾಗಿ, ಆದರೆ ಈ ಭಾಗದಲ್ಲಿ ಅಷ್ಟೊಂದು ಖ್ಯಾತಿಗೆ ಬಾರದ ಕ್ರೀಡೆಯನ್ನು, ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್, ಕಳೆದ ಐದು ವರ್ಷಗಳ ಸತತ ಪರಿಶ್ರಮದಿಂದಾಗಿ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನಿರ್ಮಾಣ ಮಾಡಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಮಾನವ ಸಂಪತ್ತಿನ ಸರಿಯಾದ ಬಳಕೆಯಿಂದ ದೇಶದ ಸಮೃದ್ಧಿ ಸಾಧ್ಯ. ಮುಂದುವರಿದ ಯಾವ ದೇಶದಲ್ಲೂ ನಮ್ಮಲ್ಲಿರುವಷ್ಟು ಯುವ ಶಕ್ತಿಯಿಲ್ಲ. ಈ ಯುವ ಶಕ್ತಿಯ ಸರಿಯಾದ ಸದ್ಭಳಕೆ ಮುಖ್ಯ. ನಮ್ಮನ್ನಾಳುವ ಸರ್ಕಾರಗಳು ಇದರೆಡೆಗೆ ಗಮನವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಜೋಡಿಸಿಕೊಳ್ಳಬೇಕು. ಇವುಗಳ ನಡವಿನ ಸಮತೋಲಿತ ನಡಿಗೆ ಎರಡು ಕ್ಷೇತ್ರದಲ್ಲಿ ಉನ್ನತಿ ಹೊಂದಲು ಸಹಕಾರಿ. ಆದರೆ ಕ್ರೀಡೆಯ ಹೆಸರಿನಲ್ಲಿ ಶಿಕ್ಷಣವನ್ನು ಕುಂಠಿತಗೊಳಿಸುವುದು ಸಾಧುವಲ್ಲ ಎಂದರು. ಆರೋಗ್ಯ, ಮನೋನಿಶ್ಚಯ, ಕ್ರೀಡಾ ಮನೋಭಾವ ಹಾಗೂ ಸೌಹಾರ್ದತೆಯಂತಹ ಗುಣಗಳು ನಾವು ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ನಮ್ಮಲ್ಲಿ ಕರಗತವಾಗುತ್ತದೆ ಎಂದರು. ಆಳ್ವಾಸ್ ಸಂಸ್ಥೆ, ಈ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸದಾ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಷನ್ನ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ನಮ್ಮ ಸಂಘದ ಪರಿಶ್ರಮದಿಂದಾಗಿ ಇಂದು ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿದೆ. ಪ್ರತಿ ಹಂತದಲ್ಲೂ ಕಠಿಣ ಸವಾಲನ್ನು ಮೀರಿ ವಿದ್ಯಾರ್ಥಿಗಳು ಜಯಶಾಲಿಗಳಾಗಿದ್ದಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ಸಿಲಾಗುರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕದ ಏಕೈಕ ತಂಡ ನಮ್ಮದು. ಮುಂದಿನ ಆಗಸ್ಟ್ನಲ್ಲಿ ಹಂಗೇರಿಯ ಬುಡಾಪೇಸ್ಟಾದಲ್ಲಿ ನಡೆಯಲಿರುವ ಅಂತರ ರಾಷ್ಟ್ರೀಯ ಕಿಕ್ ಚಾಂಪಿಯನ್ಶಿಫ್ನಲ್ಲಿ ಭಾಗವಹಿಸಲು ನಮ್ಮ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರೆ. ಪದಕ ವಿಜೇತರ ವಿವರ: ಮೇ 21ರಿಂದ 27ರವರೆಗೆ ಪುಣೆಯಲ್ಲಿ ನಡೆದ ಚಿಲ್ಡ್ರನ್ಸ್ ಮತ್ತು ಕೆಡೆಟ್ ಹಾಗೂ ಜೂನ್ 10 ರಿಂದ 14ರ ವರೆಗೆ ಪಶ್ಚಿಮ ಬಂಗಾಳದ ಸಿಲಾಗುರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಜಿಲ್ಲೆಯ ಕ್ರೀಡಾಪಟುಗಳು 8 ಚಿನ್ನದ ಪದಕ, 7 ಬೆಳ್ಳಿಯ ಪದಕ ಮತ್ತು 13 ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಅನ್ಶಿ ಎನ್.ಎಮ್ ವೈಯಕ್ತಿಕ ವಿಭಾಗದಲ್ಲಿ 3 ಚಿನ್ನದ ಪದಕವನ್ನು ಪಡೆದು ರಾಷ್ಟ್ರೀಯ ಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಜೂನ್ 10 ರಿಂದ 13ರವರೆಗೆ ಬಾಗಲಕೋಟೆಯಲ್ಲಿ ನಡೆದ ಸೌತ್ ಝೋನ್ ಖೇಲೋ ಇಂಡಿಯಾ ವುಶು ವುಮೆನ್ಸನ ಲೀಗ್ ನಲ್ಲಿ ದಕ್ಷಿಣ ಕನ್ನಡ ವುಶು ಅಸೋಸಿಯೇಷನ್ನ ವಿದ್ಯಾರ್ಥಿಗಳು 1 ಚಿನ್ನದ ಪದಕ ಮತ್ತು 6 ಕಂಚಿನ ಪದಕಗಳನ್ನು ಪಡೆದು ಮುಂಬರುವ ರಾಷ್ಟ್ರೀಯ ಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಿದ ನಿತಿನ್ ಸುವರ್ಣ ಮತ್ತು ಶಿಕ್ಷಕ ಸಂಪತ್ ಕುಮಾರ್ ಇದ್ದರು.