ಮೂಡುಬಿದಿರೆ: ಜೀವನದಲ್ಲಿ ಅದೃಷ್ಟದ ಜೊತೆಗೆ ಪ್ರಯತ್ನವಿದ್ದಾಗ ಯಾವುದೇ ಕಾರ್ಯದಲ್ಲೂ ಯಶಸ್ಸು ಕಾಣಲು ಸಾಧ್ಯ ಎಂದು ಎಂ ಆರ್ ಜಿ ಗ್ರೂಪ್ನ ಸ್ಥಾಪಕಾಧ್ಯಕ್ಷ ಪ್ರಕಾಶ್ ಶೆಟ್ಟಿ ಹೇಳಿದರು. ಆಳ್ವಾಸ್ ಪ್ರಗತಿಯ 14ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಂಸ್ಕೃತಿಕ, ಕ್ರೀಡೆ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಮೂಡಬಿದ್ರೆಯ ಆಳ್ವಾಸ್ ಸಂಸ್ಥೆ ಹಲವು ವರ್ಷಗಳಿಂದ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಉದ್ಯೋಗದ ಸದಾವಕಾಶವನ್ನು ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯೆ ಬೇಕು ಆದರೆ, ಅದರ ಜೊತೆಗೆ ಸಾಮಾನ್ಯ ಜ್ಞಾನವು ಹೆಚ್ಚು ಅವಶ್ಯಕ. ಯೋಜನೆ, ಆಡಳಿತ, ವ್ಯವಹಾರದ ಕೌಶಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ಸವಾಲನ್ನು ಸುಲಭವಾಗಿ ಎದುರಿಸಬಹುದು ಎಂದು ಹೇಳಿದರು. ಪ್ರತಿ ಉದ್ಯೋಗಾಕಾಂಕ್ಷಿ ಕಾರ್ಯಪ್ರವೃತ್ತಿ ಮತ್ತು ದೂರದೃಷ್ಟಿಯನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ, ಇದು ಸಂಪೂರ್ಣವಾಗಿ ಉಚಿತವಾಗಿ ನಡೆಯುವಂತಹ ಬೃಹತ್ ಉದ್ಯೋಗ ಮೇಳ. ಈ ಬಾರಿಯೂ ದೇಶ ವಿದೇಶಗಳಿಂದ 254 ಪ್ರತಿಷ್ಠಿತ ಸಂಸ್ಥೆಗಳು ನೇಮಕಾತಿಯನ್ನು ನಡೆಸಲು ಮುಂಬರುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು. ಉದ್ಯೋಗ ಆಸಕ್ತರು ಗುಂಪು ಗುಂಪಾಗಿ ಸೇರಿ ಮೋಜು ಮಾಡುವುದಲ್ಲ, ವೈಯಕ್ತಿಕವಾಗಿ ಜವಾಬ್ದಾರಿಯಿಂದ ಪಾಲ್ಗೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಅಧ್ಯಕ್ಷತೆವಹಿಸಿ ಮಾತನಾಡಿದ ಮುಲ್ಕಿ – ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್ ಪ್ರಗತಿ ಎನ್ನುವ ಬೃಹತ್ ಉದ್ಯೋಗ ಮೇಳ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಶೈಕ್ಷಣಿಕವಾಗಿ ಮುಂದಿರುವ ಕರಾವಳಿ ಭಾಗದಲ್ಲಿ ಉದ್ಯೋಗ ಆಸಕ್ತರು ಬಹಳಷ್ಟು ಜನರಿದ್ದಾರೆ. ಆದ್ದರಿಂದ, ಮುಂದಿನ ದಿನಗಳಲ್ಲಿ ಇನ್ನಷ್ಟು ಐಟಿ ಕಂಪನಿಗಳು ಕರಾವಳಿ ಭಾಗದಲ್ಲಿ ಸ್ಥಾಪನೆಯಾಗಲಿ ಎಂದರು.
ಆಳ್ವಾಸ್ ಪ್ರಗತಿಯ ವಿಶೇಷತೆ: ಅಭ್ಯರ್ಥಿಗಳು ಕ್ಯಾಂಪಸ್ಗೆ ಪ್ರವೇಶವಾದ ನಂತರ ನೋಂದಣಿ ವ್ಯವಸ್ಥೆ, ವಿದ್ಯಾರ್ಹತೆಗೆ ತಕ್ಕಂತೆ ಕಲರ್ ಕೋಡ್ ಅನ್ನು ವಿತರಿಸಲಾಯಿಸುವ ವ್ಯವಸ್ಥೆ, ಕಲರ್ ಕೋಡ್ಗೆ ಸಮವಾಗಿರುವ ವಿವಿಧ ಉದ್ಯೋಗಗಳ ಸಂದರ್ಶನ ನೀಡುವ ವ್ಯವಸ್ಥೆ, ಎಲ್ಲ ವಿಭಾಗದ ಉದ್ಯೋಗದ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಉಪಯುಕ್ತ ಮಾಹಿತಿ ಕೈಪಿಡಿಯನ್ನು ಪ್ರತಿ ಅಭ್ಯರ್ಥಿಗಳಿಗೆ ಕೊಡಲಾಯಿತು. ಉದ್ಯೋಗ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಉದ್ಯೋಗ ಮಾಹಿತಿ ಕೇಂದ್ರ ಹಾಗೂ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕರಾವಳಿಯಲ್ಲಿ ಐಟಿ ಕಂಪೆನಿಯನ್ನು ಸ್ಥಾಪಿಸಿರುವ 6 ಪ್ರತಿಷ್ಟಿತ ಕಂಪೆನಿಯ ಮುಖ್ಯಸ್ಥರುಗಳನ್ನು ಸನ್ಮಾನಿಸಲಾಯಿತು. ಗ್ಲೋಟಚ್ ಟೆಕ್ನಾಲಜಿಯ ಅಧ್ಯಕ್ಷೆ ವಿದ್ಯಾ ರವಿಚಂದ್ರನ್ , ನೀವಿಯಸ್ ಸೊಲ್ಯೂಷನ್ಸ್ನ ಗೋಕುಲ್ ನಾಯಕ್, ಮಂಗಳೂರಿನ ಟಿಐಇಯ ಸಂಸ್ಥಾಪಕ, 99 ಗೇಮ್ಸ್ ಮತ್ತು ರೋಬೋಸಾಫ್ಟ್ನ ಅಧ್ಯಕ್ಷ ರೋಹಿತ್ ಭಟ್, ಇಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿಇಒ ಮತ್ತು ನಿರ್ದೇಶಕ ಆನಂದ ಫೆನಾರ್ಂಡಿಸ್ , ಜುಗೋ ಸ್ಟುಡಿಯೊಸ್ ಪ್ರೈವೇಟ್ ಲಿಮಿಟೆಡ್ನ ಡೆಲಿವರಿ ವಿಭಾಗದ ಉಪಾಧ್ಯಕ್ಷ ಅಭಿಜಿತ್ ಶೆಟ್ಟಿ, ಮಂಗಳೂರಿನ ಬಿಪಿಎಂ ಆಪರೇಶನ್ಸ್ ಇನ್ಫೋಸಿಸ್ನ ಮುಖ್ಯಸ್ಥ ಲಲಿತ್ ರೈ ಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ಶ್ರೀಪತಿ ಭಟ್, ಟ್ರಸ್ಟಿ ವಿವೇಕ್ ಆಳ್ವ ಇದ್ದರು. ಕಾರ್ಯಕ್ರಮವನ್ನು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ನಿರೂಪಿಸಿದರು.ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರಿಯಾ ಸಿಕ್ವೇರಾ ಸನ್ಮಾನ ಪತ್ರ ವಾಚಿಸಿದರು. ಆಳ್ವಾಸ್ ಪ್ರಗತಿಯ ಮೊದಲ ದಿನದ ವಿವರ: ಆನ್ಲೈನ್ ನೋಂದಣಿ ಮಾಡಿಸಿದ ಉದ್ಯೋಗಾಕಾಂಕ್ಷಿಗಳು: 17325 ಸ್ಪಾಟ್ ನೋಂದಣಿ ಮಾಡಿಸಿದ ಅಭ್ಯರ್ಥಿಗಳು: 1573 ಉದ್ಯೋಗ ಮೇಳಕ್ಕೆ ಆಗಮಿಸಿದ ಕಂಪನಿಗಳು: 258 ಮೊದಲ ದಿನ ಆಗಮಿಸಿದ ಉದ್ಯೋಗಾಕಾಂಕ್ಷಿಗಳು:13238