ಮೂಡುಬಿದಿರೆ: ಶಿಕ್ಷಣದ ಜೊತೆಗೆ ಕೌಶಲ ವೃದ್ಧಿಯು ಬಹಳ ಮುಖ್ಯ ಎಂದು ನವದೆಹಲಿಯ ಎಐಸಿಟಿಇ ಅಧ್ಯಕ್ಷ ಪ್ರೊ.ಟಿ. ಜಿ. ಸೀತಾರಾಮ್ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಶನಿವಾರ ನಡೆದ
ತಂತ್ರಜ್ಞಾನ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಈಗ ಅಮೃತ ಕಾಲದಲ್ಲಿ ಇದ್ದೇವೆ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಎಂಜಿನಿಯರಿಂಗ್ ಮತ್ತು ನಿರ್ವಹಣಾ ವಲಯದ ಪಾತ್ರ ಪ್ರಮುಖವಾದದ್ದು ಎಂದರು.
ಸಂಶೋಧನೆ, ಆವಿಷ್ಕಾರ, ಉದ್ಯಮಶೀಲತೆ, ಸ್ಟಾರ್ಟ್ಅಪ್ಗಳ ಪ್ರಚುರತೆಯಿಂದ ವಿಕಸಿತ ಭಾರತದ ಹಾದಿ ಸುಲಭ. ಇವುಗಳ ಜೊತೆಯಲ್ಲಿ ತಂತ್ರಜ್ಞಾನ ಹಾಗೂ ನಿರ್ವಹಣೆಯಿಂದ ಭಾರತವು ವಿಶ್ವಗುರು ಆಗಲು ಸಾಧ್ಯ ಎಂದರು. ಭಾರತದಲ್ಲಿ 1.25 ಲಕ್ಷ ಸ್ಟಾರ್ಟ್ ಅಪ್ಗಳಿದ್ದು, ಪ್ರಪಂಚದಲ್ಲೆ ಮೂರನೇ ಅತೀ ದೊಡ್ಡ ಸ್ಟಾರ್ಟ್ ಅಪ್ ರಾಷ್ಟ್ರ
ಎನಿಸಿಕೊಂಡಿದೆ. ಬಹುಶಿಸ್ತೀಯ ಸಂಶೋಧನಾ ಅನ್ವೇಷಣೆಯಿಂದಾಗಿ ನಮ್ಮ ದೇಶದ ಐಐಟಿಗಳು ಜಾಗತಿಕ ಮಟ್ಟದ ಗುಣಮಟ್ಟವನ್ನು ತಲುಪುವಂತಾಗಿದೆ.
ನಮ್ಮ ದೇಶದಲ್ಲಿ ಪ್ರತಿ ವರ್ಷ 1.25 ಮಿಲಿಯನ್ ಇಂಜಿನಿಯರಿಂಗ್ ಪದವೀಧರರು ಶಿಕ್ಷಣ ಮುಗಿಸುತ್ತಾರೆ. ಕಾಲೇಜುಗಳು ಶಿಕ್ಷಣ ಹಂತದಲ್ಲಿ ಕೌಶಲ್ಯದ ಜೊತೆಗೆ ಉದ್ಯೋಗ ಮಾರುಕಟ್ಟೆಯ ಅವಶ್ಯಕತೆಗಳನ್ನು ವಿದ್ಯಾಥಿಗಳಲ್ಲಿ ನೀಡಿದರೆ, ಯಾವ ವಿದ್ಯಾರ್ಥಿಯು ಉದ್ಯೋಗವಿಲ್ಲದೆ ಅಲೆಯುವ ಪರಿಸ್ಥಿತಿ ಬರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ
ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಎಂದರು. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತಶಾಸ್ತ್ರ ಮೇಳೈಕೆಯಿಂದ ಅಗಣಿತ ಅಭಿವೃದ್ಧಿ ಸಾಧ್ಯ. ಈ ಹಿನ್ನಲೆಯಲ್ಲಿ ಕೆಲಸಗಳಾಗಬೇಕು ಎಂದರು. ಇದೀಗ
ಸಂಶೋಧನಾ ಕ್ಷೇತ್ರದಲ್ಲಿ ನಾವೀನ್ಯತೆ ಹೆಚ್ಚಾಗುತ್ತಿದೆ ಇದೇ ರೀತಿ ಸಾಗಿದರೆ ಮುಂದಿನ 20 ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗಬಹುದು ಎಂದರು.
ಇಡೀ ವಿಶ್ವದಲ್ಲೇ ಎಂಜಿನಿಯರಿಂಗ್ ಪದವೀಧರರ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.ಹಾಗೆಯೇ
ಸಂಶೋಧನಾ ಪ್ರಬಂಧಗಳ ಪ್ರಕಟಣೆಯಲ್ಲೂ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. 2047ರಲ್ಲಿ ವಿಕಾಸ್ ಭಾರತ್ ಆಗುವುದು ಕನಸು ಅಲ್ಲ ಸತ್ಯ ಎಂದು ಭರವಸೆ ವ್ಯಕ್ತಪಡಿಸಿದರು. 17ನೇ ಶತಮಾನದಲ್ಲಿ ಡಚ್ರ ಪ್ರಭಾವಳಿ ಹೆಚ್ಚಿತ್ತು, 18ನೇ ಶತಮಾನದಲ್ಲಿ ಬ್ರಿಟಿಷರ ಪಾರಮ್ಯವಿತ್ತು. 19ನೇ ಶತಮಾನ ಅಮೇರಿಕನ್ನರಿಗೆ ಸೇರಿದೆ. ಆದರೆ 2020ರಿಂದ ಭಾರತೀಯರ ಸಮಯ ಪ್ರಾರಂಭವಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಆಳ್ವಾಸ್ ಎಂಜಿನಿಯರಿಂಗ್ ಮತ್ತು
ತಂತ್ರಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆನಾರ್ಂಡಿಸ್, ಡಾ ಅನುರಾಧ ಸೀತರಾಮನ್ ಹಾಗೂ ವಿವಿಧ ಕಂಪೆನಿಗಳ ಅಧಿಕಾರಿಗಳು ಇದ್ದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಟೆಕ್ನಾಲಜಿ ಸೆಂಟರ್ನ ಲೋಕರ್ಪಾಣೆ ನಡೆಯಿತು. ಈ ಆವರಣದಲ್ಲಿ ಇನ್ಫೋಸಿಸ್, ಸ್ಟ್ರೇಕಾನ್, ಸ್ಟೀಲಿಯಂ, ಹೋಮ್ಝಾ ಕಾರ್ಟ್, ವಲ್ಕನ್ಸ್ ಅಕಾಡೆಮಿಗಳು ಕೆಲಸ ನಿರ್ವಹಿಸುತ್ತಿವೆ. ಡಾ.ಪೀಟರ್ ಫೆನಾರ್ಂಡಿಸ್ ಸ್ವಾಗತಿಸಿ, ಸಹಾಯಕ ಪ್ರಾಧ್ಯಪಕಿ ಡಾ.ಸಾಕ್ಷಿ ಎಸ್ ಕಾಮತ್, ಸಹಾಯಕ ನಿಯೋಜನೆ ಹಾಗೂ ತರಬೇತಿ ಅಧಿಕಾರಿ ರಂಜಿತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.