ವಿದ್ಯಾರ್ಥಿಗಳಿಗೆ ಜ್ಞಾನ, ಕೌಶಲದೊಂದಿಗೆ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನೂ ಕಲಿಸುವ ಮೂಲಕ ಸಮಾಜದ ಅಶಕ್ತರು ಹಾಗೂ ಮನುಕುಲದ ಒಳಿತಿಗಾಗಿ ಕೆಲಸ ಮಾಡಲು ಪ್ರೇರೇಪಿಸಬೇಕು ಎಂದು ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆಂಡ್ ಪ್ಲಾನಿಂಗ್ ನ ನಿರ್ದೇಶಕಿ ಪ್ರೊ.ಡಾ. ರಮಾದೇವಿ ನಂದಿನೇನಿ ಹೇಳಿದರು. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಆಲ್ ಕಾರ್ಗೋ ಲಾಜಿಸ್ಟಿಕ್ ಕಂಪನಿ ಮಂಗಳೂರು ಪ್ರಾಯೋಜಕತ್ವದಲ್ಲಿ ಕುಂತಳನಗರ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ನಡೆಯುತ್ತಿರುವ ಉಚಿತ ಕಂಪ್ಯೂಟರ್ ಸಾಕ್ಷರತಾ ತರಬೇತಿಯ 14ನೇ ಬ್ಯಾಚ್ ನ ವಿದ್ಯಾರ್ಥಿಗಳ ಪ್ರಮಾಣಪತ್ರ ವಿತರಣೆ ಹಾಗೂ 15 ನೇ ಬ್ಯಾಚ್ ನ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತೆಂಕನಿಡಿಯೂರು ಸರಕಾರಿ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಿನ್ಸಿಪಾಲ್ ಡಾ. ಸುರೇಶ್ ರೈ ಕೆ. ಮಾತನಾಡಿ, ಮಹಿಳೆಯರು, ಯುವಕರು ಮತ್ತು ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗಾಗಿ ನಿರಂತರ ಕಾರ್ಯಕ್ರಮ ಆಯೋಜಿಸುತ್ತಿರುವ ಉಡುಪಿ ಗ್ರಾಮೀಣ ಬಂಟರ ಸಂಘ ಯಾವ ಜಾತಿ ಸಂಘಗಳೂ ಮಾಡದ ಕೆಲಸ ಮಾಡುತ್ತಿದೆ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಈವರೆಗೆ ಶಿಬಿರದಲ್ಲಿ 280 ವಿದ್ಯಾರ್ಥಿಗಳು ಉಚಿತ ಕಂಪ್ಯೂಟರ್ ತರಬೇತಿ ಪಡೆದುಕೊಂಡಿದ್ದಾರೆ. ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ 1800 ವಿದ್ಯಾರ್ಥಿಗಳು, 300 ಮಹಿಳೆಯರು ಭಾಗವಹಿಸಿದ್ದಾರೆ. 2 ಬಾರಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ ಎಂದರು.
ಉಡುಪಿ ಮೈಸ್ ಸಂಸ್ಥೆಯ ಆಡಳಿತಾಧಿಕಾರಿ ಗಾಯತ್ರಿ ಉಪಾಧ್ಯಾಯ, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಡಾ.ಎಚ್. ಬಿ. ಶೆಟ್ಟಿ, ಮಾಜಿ ಅಧ್ಯಕ್ಷ ಹೇಮಂತ್ ಶೆಟ್ಟಿ, ಟ್ರಸ್ಟಿ ಹಾಗೂ ಗ್ರಾಮೀಣ ಬಂಟರ ಸಂಘದ ಕೋಶಾಧಿಕಾರಿ ರಂಜನಿ ಹೆಗ್ಡೆ, ಟ್ರಸ್ಟಿಗಳಾದ ಹರೀಂದ್ರ ಹೆಗ್ಡೆ, ದಯಾನಂದ ಶೆಟ್ಟಿ ಕಲ್ಮಂಜೆ, ಕಂಪ್ಯೂಟರ್ ತರಬೇತುದಾರ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.
ಉಡುಪಿ ಗ್ರಾಮೀಣ ಬಂಟರ ಸಂಘದ ಕಾರ್ಯಕ್ರಮ ನಿರ್ದೇಶಕಿ ನಿಟ್ಟೆ ಹಾಗೂ ಜಿಂದಾಲ್ ವಿ.ವಿಯ ಸಂದರ್ಶಕ ಪ್ರೊಫೆಸರ್ ದಿವ್ಯಾರಾಣಿ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.