ಅಳಪೆ ಕಣ್ಣೂರು ಗ್ರಾಮದ ಕೊಡಕಾಲ ಶ್ರೀ ಮುಂಡಿತ್ತಾಯ (ವೈದ್ಯನಾಥ) ದೈವಸ್ಥಾನದ ಪುನಃ ಪ್ರತಿಷ್ಠ ಬ್ರಹ್ಮಕಲಶೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಜನಪದೀಯವಾಗಿ ನಂಬಿಕೊಂಡು ಬಂದ ದೈವಗಳು ನಮ್ಮ ಸಂರಕ್ಷಕರು. ಜಗತ್ತಿನ ಬೇರೆಲ್ಲೂ ಇರದ ವಿಶಿಷ್ಟ ನಂಬಿಕೆ, ಸಂಸ್ಕೃತಿ ತುಳುನಾಡಿನಲ್ಲಿದೆ. ದೈವರಾಧನೆ ನಮ್ಮ ಜಿಲ್ಲೆಯ ವಿಶಿಷ್ಟ ಪರಂಪರೆ. ಆಗಮಶಾಸ್ತ್ರ ಬರುವುದಕ್ಕೂ ಹಿಂದೆ ನಾವು ದೈವರಾಧನೆಯನ್ನು ನಂಬಿಕೊಂಡು ಬಂದಿದ್ದೇವೆ ಎನ್ನುವುದು ಪಾಡ್ದನದ ಮೂಲಕ ತಿಳಿಯುತ್ತದೆ ಎಂದರು. ಪುರಾಣ ಪ್ರಸಿದ್ಧ ಮತ್ತು ನಮ್ಮ ಹಿರಿಯರು ನಂಬಿಕೊಂಡು ಬಂದ ಪುರಾತನ ದೈವಗಳಲ್ಲಿ ಮುಂಡಿತ್ತಾಯ ವೈದ್ಯನಾಥ ಕ್ಷೇತ್ರವೂ ಒಂದು. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಕೇವಲ 9 ತಿಂಗಳೊಳಗೆ ದೈವಸ್ಥಾನದ ಅಭಿವೃದ್ಧಿ ಕಾರ್ಯಗಳು ಅದ್ಬುತವಾಗಿ ಮೂಡಿಬಂದಿವೆ ಎಂದರು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ದೈವರಾಧನೆಯು ಸಮಾಜವನ್ನು ಒಟ್ಟು ಮಾಡುವ ವಿಶಿಷ್ಟವಾದ ಆರಾಧನಾ ಪದ್ಧತಿ. ಈ ದೈವಸ್ಥಾನದ ಕಾರ್ಯ ಉತ್ತಮವಾಗಿ ಮೂಡಿಬಂದಿದೆ. ಈ ಶಕ್ತಿ ಪೀಠ ಶಕ್ತಿ ಕೇಂದ್ರವಾಗಿ ಪಸರಿಸಿ ಈ ಪರಿಸರದಲ್ಲಿ ಜಾಗೃತಿ ಸಮಾಜ ಮೂಡಿಬರಲಿ ಎಂದರು. ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ವ್ಯವಸ್ಥಾಪನ ಸಮಿತಿ ಮಾರ್ಗದರ್ಶನದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರ ಮುಂದಾಳತ್ವದಲ್ಲಿ ಇಲ್ಲಿ ಉತ್ತಮ ಕೆಲಸ ನಡೆದಿದೆ ಎಂದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್ ರೈ ಬಡಿಲಗುತ್ತು ಅಧ್ಯಕ್ಷತೆ ವಹಿಸಿದ್ದರು.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಿ.ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ದಂಪತಿಯನ್ನು ಸನ್ಮಾನಿಸಲಾಯಿತು. ಮೇಯರ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ ಕಣ್ಣೂರು ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಶಾಸಕ ರಾಜೇಶ್ ನಾಯ್ಕ್, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಮರೋಳಿ ಶ್ರೀ ಸೂರ್ಯನಾರಾಯಣ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ, ಶ್ರೀ ಗರೋಡಿ ಬ್ರಹ್ಮಬೈದರ್ಕಳ ಕ್ಷೇತ್ರದ ಮೊಕ್ತೇಸರ ಜಗದೀಪ್ ಡಿ. ಸುವರ್ಣ, ನಿಟ್ಟೆಗುತ್ತು ಮನೆತನದ ಪ್ರಮುಖರಾದ ರವಿರಾಜ್ ಶೆಟ್ಟಿ, ಪೇರ್ಲ ಮನೆತನದ ರಾಮಕೃಷ್ಣ ಚೌಟ, ಬಡಿಲಗುತ್ತು ಎಂಸಿಆರ್ ಶೆಟ್ಟಿ, ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರ ಬಾರಕೂರು ಕಚ್ಚೂರ ಮಾಲ್ತಿದೇವಿ ದೇವಸ್ಥಾನದ ಅಧ್ಯಕ್ಷ ಶಿವಪ್ಪ ನಂತೂರು, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.