ಕಜೆ ಕುಕ್ಕುದಡಿ ಶ್ರೀ ಮಹಾಮ್ಮಾಯಿ ದೇವಸ್ಥಾನ ಹಾಗೂ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲ ಇನ್ನಾ ಮುಂಡ್ಕೂರು ಮುಲ್ಲಡ್ಕದ ಎರಡು ಕಣ್ಣುಗಳಂತಿದ್ದು, ಈಗ ಕಜೆ ದೇಗುಲ ಸಂಪೂರ್ಣ ಶಿಲಾಮಯಗೊಂಡು ತನ್ನ ಪಾವಿತ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಧಾರ್ಮಿಕ ವಿದ್ವಾಂಸ ಕಡಂದಲೆ ಸ್ಕಂದ ಪ್ರಸಾದ ಭಟ್ ಹೇಳಿದರು. ಅವರು ಸಚ್ಚೇರಿಪೇಟೆಯಲ್ಲಿ ಕಜೆ ಶ್ರೀ ಮಹಾಮ್ಮಾಯಿ ಸಾಂಸ್ಕೃತಿಕ ವೇದಿಕೆಯ ನೇತೃತ್ವದಲ್ಲಿ ಕುಕ್ಕುದಡಿ ಕ್ಷೇತ್ರವೆಂದೇ ಪ್ರಸಿದ್ಧಿ ಹೊಂದಿರುವ ಐತಿಹಾಸಿಕ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಸತ್ಯಶಂಕರ ಶೆಟ್ಟಿ ಆಧ್ಯಕ್ಷತೆ ವಹಿಸಿದ್ದು, ಸಚ್ಚೇರಿಪೇಟೆಯ ಮಹಾಮ್ಮಾಯೀ ಕಟ್ಟೆಯ ನವೀಕರಣದ ರೂವಾರಿ ರವೀಂದ್ರ ಡಿ. ಪೂಂಜ ಹಾಗೂ ಅವರ ಪುತ್ರ ರೂಪಲ್ ಆರ್. ಪೂಂಜಾ ಅವರನ್ನು ಸಮ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವದ ಮುಂಬಯಿ ಸಮಿತಿಯ ಅಧ್ಯಕ್ಷ ಮುಲ್ಲಡ್ಕ ಗುರುಪ್ರಸಾದ್ ಸುಧಾಕರ ಶೆಟ್ಟಿ, ಮುಂಬಯಿಯ ಎಲ್.ವಿ. ಅಮೀನ್, ಕಡಂದಲೆ ಹರಿಶ್ಚಂದ್ರ ಶೆಟ್ಟಿ, ಪ್ರಕಾಶ್ ಸಪಳಿಗ, ಸಮಿತಿಯ ಅಧ್ಯಕ್ಷ ರಾಜಾರಾಮ ಶೆಟ್ಟಿ, ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ಪ ಸಪಳಿಗ, ರಾಮಚಂದ್ರ ನಾಯಕ್ ಮತ್ತಿತರರಿದ್ದರು.