ಬ್ರಹ್ಮಾವರ : ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಹಾಗೂ ಉಡುಪಿ ಜಿಲ್ಲಾ ಆಟೋ ಮೊಬೈಲ್ ಡೀಲರ್ಸ್ ಅಸೋಸಿಯೇಶನ್ ಸಹಯೋಗದೊಂದಿಗೆ ಶಾಲಾ ಬಸ್ ಚಾಲಕರಿಗೆ, ನಿರ್ವಾಹಕರಿಗೆ ರಸ್ತೆ ಸುರಕ್ಷತೆ-ರಕ್ಷಣೆಯ ಕುರಿತು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಚಾಲಕರು ಕಾರ್ಯ ನಿರ್ವಹಿಸುವಾಗ ಯಾವುದೇ ಕಾರಣಕ್ಕೂ ಮೈಮರೆಯಬಾರದು. ಮಕ್ಕಳ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿರಬೇಕೆಂದರು.
ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ರಸ್ತೆ ಸುರಕ್ಷತೆಯ ಪ್ರಾಮುಖ್ಯತೆಯನ್ನು ತಿಳಿಸಿ, ಎಲ್ಲಾ ಚಾಲಕರಿಗೂ, ನಿರ್ವಾಹಕರಿಗೂ ಸಂಚಾರಿ ನಿಯಮಗಳ ಅರಿವಿರಬೇಕೆಂದರು. ತರಬೇತಿ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲಾ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ನ ಕಾರ್ಯದರ್ಶಿ ಕಾಶೀನಾಥ್ ನಾಯಕ್, ಅರವಿಂದ ಮೋಟಾರ್ಸ್ ಪ್ರೈ.ಲಿ.ನ ಮ್ಯಾನೇಜರ್ಸ್ ಮೋಹನ್ ಕೋಡಿಕಲ್, ರಾಜಶೇಖರ್, ರಾಘವೇಂದ್ರ ಪಿ.ಎ. ಆಗಮಿಸಿದ್ದರು. ಅವರು ಸಂಚಾರಿ ನಿಯಮಗಳು, ಸುರಕ್ಷಿತ ವಾಹನ ಚಾಲನೆ, ವಾಹನಗಳ ನಿರ್ವಹಣೆ, ಪ್ರಥಮ ಚಿಕಿತ್ಸೆ, ಉತ್ತಮ ಇಂಧನಗಳ ಬಳಕೆ, ವಾಹನಗಳ ನಿಯಂತ್ರಣ, ಬಿ ಎಸ್ 6 ವಾಹನಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಟ್ರಾನ್ಸ್ಪೋರ್ಟ್ ಮ್ಯಾನೇಜರ್ ತ್ಯಾಗೀಶ್ಚಂದ್ರ ಶೆಟ್ಟಿ, ಮೇಲ್ವಿಚಾರಕ ನವೀನ್, ಶಿಕ್ಷಕ ವೃಂದ, ಶಾಲಾ ಬಸ್ನ ಚಾಲಕರು, ನಿರ್ವಾಹಕರು ಉಪಸ್ಥಿತರಿದ್ದರು.