ಮೂಡುಬಿದಿರೆ: ಅಸ್ಸಾಂನ ಗೌಹಾಟಿಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿರ್ಸಿಟಿ ಗೇಮ್ಸ್ನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕಬಡ್ಡಿ ತಂಡವು ಚಿನ್ನದ ಪದಕವನ್ನು ಗಳಿಸಿದೆ. ಅಂತರ್ ವಿಶ್ವಿದ್ಯಾಲಯಗಳ ಕಬಡ್ಡಿ ಚಾಂಪಿಯನ್ಶಿಪ್ ನಲ್ಲಿ ಅಂತಿಮ ಎಂಟರ ಘಟ್ಟಕ್ಕೆ ಆಯ್ಕೆಯಾದ ತಂಡಗಳು ಭಾಗವಹಿಸಿದ್ದವು. ಲೀಗ್ ಹಂತದಲ್ಲಿ ಮಂಗಳೂರು ವಿವಿಯು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಸೆಮಿಫೈನಲ್ ಲಗ್ಗೆ ಇಟ್ಟಿತ್ತು.
ಸೆಮಿಫೈನಲ್ನಲ್ಲಿ ಹರಿಯಾಣದ ಚೌಧರಿ ಬನ್ಸಿಲಾಲ್ ವಿವಿಯ ತಂಡವನ್ನು ಹಾಗೂ ಫೈನಲ್ನಲ್ಲಿ ರಾಜಸ್ತಾನದ ಕೋಟಾ ವಿಶ್ವ ವಿದ್ಯಾಲಯವನ್ನು 36-22 ಅಂಕಗಳೊಂದಿಗೆ ಪರಾಭವಗೊಳಿಸಿ 2023-24ನೇ ಸಾಲಿನ ಖೇಲೋ ಇಂಡಿಯಾ ಯೂನಿರ್ಸಿಟಿ ಗೇಮ್ಸ್ ಕಬಡ್ಡಿ ಚಾಂಪಿಯನ್ ಪಟ್ಟವನ್ನು ಪ್ರಥಮ ಬಾರಿಗೆ ಅಲಂಕರಿಸಿತು. ವಿಜೇತ ತಂಡದಲ್ಲಿ ಆಳ್ವಾಸ್ ವಿದ್ಯಾ ಸಂಸ್ಥೆಯ ಐದು ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಐವರು ವಿದ್ಯಾರ್ಥಿಗಳು ಕ್ರೀಡಾ ದತ್ತು ಶಿಕ್ಷಣದಡಿ ಆಳ್ವಾಸ್ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

ಅಖಿಲ ಭಾರತೀಯ ಅಂತರ್ ವಿವಿ ಪುರುಷರ ಕಬಡ್ಡಿ ಪಂದ್ಯಾಟದಲ್ಲೂ ಚಾಂಪಿಯನ್ಸ್ ಇತ್ತೀಚೆಗೆ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ನಡೆದ ಅಖಿಲ ಭಾರತೀಯ ಅಂತರ್ ವಿವಿ ಪುರುಷರ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಮಂಗಳೂರು ವಿವಿಯು ಸುದೀರ್ಘ 33 ವರ್ಷಗಳ ಬಳಿಕ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು. ಮಂಗಳೂರು ವಿವಿಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ತಂಡದಲ್ಲಿ 5 ಆಟಗಾರರು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.





































































































