ರೈ ಸುಮತಿ ಎಜ್ಯುಕೇಶನ್ ಟ್ರಸ್ಟ್ ಮೀರಾ ಭಯಂದರ್ ವತಿಯಿಂದ ಇತ್ತೀಚೆಗೆ ತನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಂಸ್ಥೆಗಳ 17 ನೇ ವಾರ್ಷಿಕ ಉತ್ಸವವನ್ನು ನೆರವೇರಿಸಿತು. ಭಯಂದರ್ ನ ಆನಂದ ದಿಘೆ ಮೈದಾನದಲ್ಲಿ ಸಂಜೆ 5 ಗಂಟೆಯಿಂದ ನಡೆದ ಈ ಉತ್ಸವದಲ್ಲಿ ಸಂಸ್ಥೆಯ ಕೆ.ಎಸ್. ಮೆಹ್ತಾ ಜೂನಿಯರ್ ಕಾಲೇಜ್, ಆದರ್ಶ್ ನಿಕೇತನ್ ಸ್ಕೂಲ್ ಸಮೂಹ ಸಂಸ್ಥೆಗಳ ಅಧೀನತೆಯ ಸೈಂಟ್ ಅಗ್ನೇಸಿಯಸ್ ಸ್ಕೂಲ್ ನ ಸಾವಿರಾರು ವಿದ್ಯಾರ್ಥಿಗಳು ಈ ಮಹೋತ್ಸದಲ್ಲಿ ಪಾಲ್ಗೊಂಡಿದ್ದರು.
ಅತಿಥಿಗಳಾಗಿ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ನ ಆಡಳಿತ ನಿರ್ದೇಶಕರಾದ ರವಿ ಶೆಟ್ಟಿ, ಭಯಂದರ್ ನವಘರ್ ಪೋಲಿಸ್ ಠಾಣೆಯ ನಿರೀಕ್ಷಕ ಧೀರಜ್ ಕೊಹ್ಲಿ, ಬಂಟರ ಸಂಘ ಮುಂಬಯಿ ಇದರ ಗೌರವ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಉದ್ಯಮಿ ಭಾಸ್ಕರ್ ಶೆಟ್ಟಿ, ಮಾಜಿ ನಗರ ಸೇವಕ ಪ್ರವೀಣ್ ಪಾಟೀಲ್, ಐಯರ್ ಇಂಡಿಯಾದ ಪೈಲೆಟ್ ಅಭಿ ಭಂಡಾರಿ, ಯಸ್. ಎನ್. ಕಾಲೇಜಿನ ಛೇರ್ಮನ್ ರೋಹಿದಾಸ್ ಪಾಟೀಲ್, ಮಾಜಿ ನಗರ ಸೇವಕರುಗಳಾದ ರಾಜು ವಿಥೋಸ್ಕರ್, ವಂದನ್ ವಿಕಾಸ್ ಪಾಟೀಲ್, ಆನಂದ್ ಶಿರ್ಕೆ ಮೊದಲಾದವರು ಅತಿಥಿಗಳಾಗಿ ಆಗಮಿಸಿದ್ದರು.
ಇದೇ ಸಮಯದಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಮೂರು ವಿಧ್ಯಾರ್ಥಿಗಳಿಗೆ ಗಣ್ಯರು ಚಿನ್ನದ ಪದಕಗಳನ್ನು ನೀಡಿ ಗೌರವಿಸಿದರು. ಪ್ರಾರಂಭದಲ್ಲಿ ರೈ ಸುಮತಿ ಟ್ರಸ್ಟ್ ನ ಛೇರ್ಮನ್ ಡಾ. ಅರುಣೋದಯ ರೈ, ಉಪ ಕಾರ್ಯಾಧ್ಯಕ್ಷ ಮಥಾಯಿಸ್ ಆರ್. ಫೆರ್ನಾಂಡಿಸ್ ಗಣ್ಯರೊಡಗೂಡಿ ದೀಪ ಪ್ರಜ್ವಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಗಣ್ಯರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಾತನಾಡಿ ಶುಭಾಶಯಗಳನ್ನು ಕೋರಿದರು.
ವರದಿ, ಚಿತ್ರ : ವೈ ಟಿ ಶೆಟ್ಟಿ ಹೆಜಮಾಡಿ