ಮೂಡುಬಿದಿರೆ: ಸ್ಥೂಲಕಾಯತೆಯು ಹೆಚ್ಚುವರಿ ದೇಹದ ಕೊಬ್ಬಿನಿಂದ ಗುರುತಿಸಲ್ಪಟ್ಟ ದೀರ್ಘಕಾಲದ ಸ್ಥಿತಿಯಾಗಿದೆ. ಇದು ಕೇವಲ ಸೌಂದರ್ಯ ಖಾಯಿಲೆಯಲ್ಲ. ಇದರಿಂದಾಗಿ ಆರೋಗ್ಯ ಸಂಬಂಧಿತ ಅಪಾಯಗಳಾದ
ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ಖಾಯಿಲೆಗಳು, ಕ್ಯಾನ್ಸರ್ ಹಾಗೂ ಮಾನಸಿಕ ಆರೋಗ್ಯದ ಅಸಮತೋಲನ ಉಂಟಾಗುವ ಸಾಧ್ಯತೆ ಇದೆ ಎಂದು ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕಿ ಡಾ. ಸುರೇಖ ಪೈ ತಿಳಿಸಿದರು.
ನಿರಾಮಯ ಆಸ್ಪತ್ರೆಯ ತಂಡದಿಂದ ಮೂಡಬಿದಿರೆಯ ಸಹಕಾರಿ ಸೇವಾ ಸಂಘ ಸಹಯೋಗದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಶನಿವಾರ ಬೆಳಿಗ್ಗೆ 9 ರಿಂದ ಸಂಜೆ 5 ವರೆಗೆ ಸ್ಥೂಲಕಾಯ ಮಾಹಿತಿ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಸ್ಥೂಲಕಾಯ ಚಿಕಿತ್ಸೆಯು ಹಿತಮಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಜೀವನಶೈಲಿಯ ಬದಲಾವಣೆಯನ್ನು ಒಳಗೊಂಡಿರುತ್ತದೆ.
ಸ್ಥೂಲಕಾಯತೆಯ ಪ್ರಮುಖ ಕಾರಣವನ್ನು ಪರೀಕ್ಷಿಸಿ ಆಯುರ್ವೇದ ಚಿಕಿತ್ಸಾ ವಿಧಾನವಾದ ಪಂಚಕರ್ಮ ಹಾಗೂ ಇನ್ನಿತರ ಚಿಕಿತ್ಸೆಯ ಮೂಲಕ ಇದನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು. ದೇವಸ್ಥಾನದ ಪ್ರದಾನ ಅರ್ಚಕರಾದ ಪದ್ಮನಾಭ ಭಟ್, ದೇವಸ್ಥಾನದ ಟ್ರಸ್ಟಿ ಉಮೇಶ್ ಪೈ , ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕಿ ಡಾ. ಸುರೇಖ ಪೈ, ತಜ್ಞ ವೈದ್ಯರಾದ ಡಾ. ರಾಧಿಕ, ಡಾ.ವೀಣಾ ಇದ್ದರು. ಸ್ನಾತಕೋತ್ತರ ವೈದ್ಯರು ಹಾಗೂ ಕಿರಿಯ ವೈದ್ಯರು ಶಿಬಿರ ನಡೆಸಿಕೊಟ್ಟರು.