ಜ್ಞಾನದ ಮೂಲಕ ಸಭ್ಯತೆಯ ನಿರ್ಮಾಣವಾಗುವುದು. ಅದರ ಮುಖಾಂತರ ಸದಾಚಾರ ಮತ್ತು ಪರಿವರ್ತನೆ ಆಗುವುದು. ಜ್ಞಾನ ನಮ್ಮನ್ನು ಸಶಕ್ತರನ್ನಾಗಿಸುವುದು. ವ್ಯಕ್ತಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಕ್ಷಮತೆಯನ್ನು ನೀಡಿ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಧೈರ್ಯವನ್ನು ತುಂಬುವುದು. ನಮ್ಮ ದೇಶದ ಪ್ರಧಾನಮಂತ್ರಿಯವರು ವಾಯ್ಸ್ ಆಫ್ ಯೂತ್ @2047 ಎಂಬ ಕಾರ್ಯಕ್ರಮವನ್ನು ಘೋಷಿಸಿದ್ದಾರೆ. ನಮ್ಮ ದೇಶದ ವಿಕಾಸದ ದೃಷ್ಟಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ. ಇದು 21ನೆಯ ಶತಮಾನದ ಮೊದಲ ಶೈಕ್ಷಣಿಕ ನೀತಿಯಾಗಿದೆ ಎಂದು ಮಹಾರಾಷ್ಟ್ರದ ರಾಜ್ಯಪಾಲರೂ, ಕುಲಪತಿಗಳೂ ಆದ ಶ್ರೀ ರಮೇಶ್ ಬೈಸ್ ಅವರು ಅಭಿಪ್ರಾಯ ಪಟ್ಟರು. ದೇಶದ ವಿಕಾಸದಲ್ಲಿ ಪುರುಷರಷ್ಟೇ ಮಹಿಳೆಯರ ಯೋಗದಾನವೂ ಇದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿನಿಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಸಂತಸ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಅವರು ಮುಂಬಯಿ ವಿಶ್ವ ವಿದ್ಯಾಲಯದ ವಾರ್ಷಿಕ ಘಟಿಕೋತ್ಸವ 2023 ರಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳಿಗೆ ಪದಕ ಪ್ರದಾನಿಸಿ, ಪದವೀಧರರಿಗೆ ಸರ್ಟಿಫಿಕೇಟ್ ನೀಡಿ ಅಭಿನಂದಿಸಿದರು. ಘಟಿಕೋತ್ಸವ ಸಮಾರಂಭವು ಫೋರ್ಟ್ ಕಾಂಪ್ಲೆಕ್ಸ್ ನಲ್ಲಿರುವ ಸರ್ ಕಾವಸ್ಕಿ ಜಹಾಂಗೀರ್ ಸಭಾಂಗಣದಲ್ಲಿ ಫೆ.7ರಂದು ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ವ ವಿದ್ಯಾಲಯ ಅನುದಾನ ಆಯೋಗದ (ಯು.ಜಿ.ಸಿ.) ಅಧ್ಯಕ್ಷರಾದ ಪ್ರಾ. ಎಂ. ಜಗದೀಶ್ ಕುಮಾರ್ ಅವರು ಜಿ-20ಯನ್ನು ಪ್ರಸ್ತಾಪಿಸಿ, ಮಹಾರಾಷ್ಟ್ರದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಹಳ ಪರಿಣಾಮಕಾರಿಯಾಗಿ ಅಳವಡಿಸಲಾಗಿದೆ. ಅದರ ವಿವಿಧ ಅಂಶಗಳನ್ನು ಮಂಡಳಿಯಾದ್ಯಂತ ಕಾರ್ಯಗತಗೊಳಿಸಲಾಗುತ್ತಿದೆ. ಮಹಾರಾಷ್ಟ್ರದ ವಿಶ್ವವಿದ್ಯಾಲಯಗಳು ಸಮೂಹ ವಿಶ್ವ ವಿದ್ಯಾನಿಲಯಗಳನ್ನು ಸ್ಥಾಪಿಸಲು ಉಪಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿವೆ. ಇಂದು ದೇಶದ ಇನ್ನೂರು ವಿಶ್ವ ವಿದ್ಯಾಲಯಗಳು ನಾಲ್ಕು ವರ್ಷಗಳ ಪದವಿ ಕೋರ್ಸ್ ಗಳನ್ನು ಜಾರಿಗೆ ತರಲು ಪ್ರಾರಂಭಿಸಿವೆ ಎಂದು ನುಡಿದು, ರಾಷ್ಟ್ರೀಯ ಶಿಕ್ಷಣ ನೀತಿಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಅವರು ವಿದ್ಯಾರ್ಥಿಗಳಿಗೆ ಪಠಣಂ, ಮನನಂ, ಚಿಂತನಂ, ಸಂಕೀರ್ತನಂ ಎಂಬ ನಿಯಮಗಳನ್ನು ಪಾಲಿಸಲು ಕರೆಕೊಟ್ಟರು. ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಡ್ವೆಂಚರ್ ಮತ್ತು ಇನ್ನೋವೇಷನ್ (AI) ಅನ್ನು ಬದುಕಿನ ಭಾಗವನ್ನಾಗಿ ಮಾಡಲು ಸಲಹೆ ನೀಡಿದರು.
ಘಟಿಕೋತ್ಸವ ಸಮಾರಂಭದ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಮಂತ್ರಿ ಶ್ರೀ ಚಂದ್ರಕಾಂತ ಪಾಟೀಲ ಅವರು ಮಾತನಾಡಿ, ಭಾರತದ ಹೊಸ ಶಿಕ್ಷಣ ನೀತಿಯಿಂದ ಸಮಾಜದ ಮತ್ತು ಸಮಸ್ತ ಮಾನವರ ವಿಕಾಸವಾಗುವುದು ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಮುಂಬಯಿ ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರಾ. ರವೀಂದ್ರ ಕುಲಕರ್ಣಿ ಸಮಾರಂಭದ ನೇತೃತ್ವವನ್ನು ವಹಿಸಿ, ವಿಶ್ವ ವಿದ್ಯಾಲಯದ ಸಾಧನೆಗಳನ್ನು ಸಭಿಕರಿಗೆ ಪರಿಚಯಿಸಿದರು. ಮುಂಬಯಿ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ವಿದ್ಯಾರ್ಥಿ ಸವಿತಾ ಅರುಣ್ ಶೆಟ್ಟಿ ಅವರಿಗೆ ಹಿರಿಯ ಸಾಹಿತಿ ಎಂ. ಬಿ. ಕುಕ್ಯಾನ್ ಪ್ರಾಯೋಜಿತ ಚಿನ್ನದ ಪದಕ ಪ್ರದಾನಿಸಲಾಯಿತು. ಮಹಾರಾಷ್ಟ್ರ ರಾಜ್ಯಪಾಲರೂ, ಮುಂಬಯಿ ವಿಶ್ವ ವಿದ್ಯಾನಿಲಯದ ಕಲಪತಿಗಳೂ ಆದ ಶ್ರೀ ರಮೇಶ್ ಬೈಸ್ ಅವರು ಎಂ. ಬಿ. ಕುಕ್ಯಾನ್ ಚಿನ್ನದ ಪದಕವನ್ನು ಪ್ರದಾನ ಮಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರೂ ಆದ ಡಾ ಜಿ. ಎನ್. ಉಪಾಧ್ಯ ಅವರು ಉಪಸ್ಥಿತರಿದ್ದರು. ಪ್ರೊ. ವಿ. ಸಿ ಅಜೇಯ್ ಬಾಂಬ್ರೆ, ಮಾನವಿಕ ವಿಭಾಗದ ಡೀನ್ ಡಾ. ಅನಿಲ್ ಸಿಂಗ್, ಕುಲಸಚಿವ ಬಲಿರಾಮ್ ಗಾಯಕ್ವಾಡ್, ಪರೀಕ್ಷಾ ವಿಭಾಗದ ಪ್ರಮುಖರಾದ ಡಾ. ಪ್ರಸಾದ್ ಕರಾಂಡೆ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಡಾ ನಿತಿನ್ ಅರೇಕರ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.