ಕರ್ನಾಟಕ ರಾಜ್ಯದಲ್ಲಿ ಭೂ ಸುಧಾರಣೆ ಕಾನೂನಿನ ಅಡಿಯಲ್ಲಿ ‘ಉಳುವವನೇ ಭೂಮಿಯ ಒಡೆಯ’ ಕಾನೂನು ಜಾರಿಗೆ ಬಂದಾಗ ಅಪಾರ ಸಂಖ್ಯೆಯಲ್ಲಿ ತಮ್ಮ ತಮ್ಮ ಭೂಮಿಯನ್ನು ಕಳೆದುಕೊಂಡವರು ಬಂಟ ಸಮಾಜದವರು. ಇದು ವಸ್ತು ಸ್ಥಿತಿಯೂ ಹೌದು. ಆದರೆ, ನಂತರದ ದಿನಗಳಲ್ಲಿ ವಿಜಯಾ ಬ್ಯಾಂಕ್ ಮತ್ತು ಹೋಟೆಲು ಉದ್ಯಮದ ಮೂಲಕ ಬಂಟ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೇ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರವಾದ ಬದಲಾವಣೆಯನ್ನು ಕಂಡಿದೆ. ಇಂದು ಬಂಟರು ಬಹುದೊಡ್ಡ ಮಟ್ಟದಲ್ಲಿ ಎಲ್ಲಾ ಕ್ಷೇತ್ರದಲ್ಲಿ ದೇಶ ವಿದೇಶದ ನೆಲದಲ್ಲಿ ತಮ್ಮ ಕಠಿಣ ಪರಿಶ್ರಮದಿಂದ ಸಾಧನೆಯ, ಶಿಖರವನ್ನೇರಿ ಮೆರೆದವರಿದ್ದಾರೆ. ಬಂಟ ಸಮಾಜದ ಗುರುತರವಾದ ಸಾಧನೆಯನ್ನು ಕಂಡಾಗ ಅಭಿಮಾನವಾಗುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಜಯಕರ ಶೆಟ್ಟಿ ಎಂ. ತಿಳಿಸಿದರು. ದೇಶ ವಿದೇಶದಲ್ಲಿ ಅದೆಷ್ಟೋ ವಿಶ್ವವಿದ್ಯಾಲಯಗಳಿವೆ. ಆದರೆ, ನಮ್ಮ ದೇಶದ ವಿಶ್ವವಿದ್ಯಾಲಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿವೆ ಎನ್ನುವಂತದ್ದು ನಮಗೆ ಹೆಮ್ಮೆ. ದೇಶದ ಪ್ರಗತಿಯ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ಕೊಡುಗೆ ಅಪಾರ ಎನ್ನುತ್ತಾ, ವಿವಿಧ ವಿಶ್ವವಿದ್ಯಾಲಯಗಳ ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯದ ಸಾಧನೆಯ ಬಗ್ಗೆ, ಉನ್ನತ ಶಿಕ್ಷಣದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಅವರು ಕುರ್ಲಾ ಬಂಟರ ಭವನದಲ್ಲಿ ಮುಲುಂಡ್ ಬಂಟ್ಸ್ ನ 18 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ನಾಮಾಂಕಿತ ಉದ್ಯಮಿ, ಸಮಾಜ ಸೇವಕ ನಗ್ರಿಗುತ್ತು ವಿವೇಕ್ ಶೆಟ್ಟಿಯವರ ಸ್ಥಾಪಕಾಧ್ಯಕ್ಷತೆಯಲ್ಲಿ ಚಾಲನೆ ಪಡೆದ ಮುಲುಂಡ್ ಬಂಟ್ಸ್ ಬಳಿಕದ ಎಲ್ಲಾ ಅಧ್ಯಕ್ಷರ ಮುಂದಾಳತ್ವದಲ್ಲಿ ಬಹಳ ಉತ್ತಮ ಸಮಾಜಪರ ಸೇವಾ ಕಾರ್ಯಗಳೊಂದಿಗೆ ಗುತ್ತಿನ ಮನೆ ಎನ್ನುವ ಖ್ಯಾತಿಗೆ ಪೂರಕವಾಗಿ ಗುತ್ತಿನ ಗತ್ತಿನೊಂದಿಗೆ ಬೆಳೆದು ಬಂದಿದೆ. ಅವರಲ್ಲೂ ಇದೀಗ ಶಾಂತಾರಾಮ್ ಬಿ. ಶೆಟ್ಟಿಯವರ ಸಮರ್ಥ ಮುಂದಾಳತ್ವದಲ್ಲಿ ವಿವಿಧ ಕಾರ್ಯಕ್ರಮಗಳ ಜೊತೆಗೆ ಅದ್ದೂರಿಯ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಚರಿಸಿ, ಎಲ್ಲಾ ಸಮಾಜ ಬಾಂಧವರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮುಲುಂಡ್ ಬಂಟ್ಸ್ ನ ಎಲ್ಲಾ ಪದಾಧಿಕಾರಿಗಳ ಸದಸ್ಯರ ಹಾಗೂ ಸಮಾಜ ಬಾಂಧವರ ಮಧ್ಯೆ ಬೆಸೆದಿರುವ ಉತ್ತಮ ಬಾಂಧವ್ಯವೇ ಈ ಎಲ್ಲಾ ಯಶಸ್ಸಿಗೆ ಕಾರಣವಾಗಿದೆ ಮತ್ತು ಈ ಮೂಲಕ ಮುಲುಂಡ್ ಬಂಟ್ಸ್ ಸಮಾಜ ಬಾಂಧವರೆಲ್ಲರ ಪ್ರೀತಿ, ವಿಶ್ವಾಸ ಗೌರವಾಭಿಮಾನಕ್ಕೆ ಪಾತ್ರವಾಗಿದೆ ಎಂದು ಸಮಾರಂಭದ ಉದ್ಘಾಟಕ ಬಂಟರ ಸಂಘ ಮುಂಬಯಿಯಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮೆಚ್ಚುಗೆಯ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತರೂ, ಸಾಧಕರೂ ಆದ ಅಲ್ಕರ್ಗೋ ರಾಜಿಸ್ಟಿಕ್ ನ ಕಾರ್ಯಾಧ್ಯಕ್ಷ ಶಶಿಕಿರಣ್ ಶೆಟ್ಟಿ ಮತ್ತು ಮಾಜಿ ಉಪ ಪೊಲೀಸ್ ನೀರಿಕ್ಷಕ ಹಾಗೂ ಚಿಣ್ಣರಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರನ್ನು ಪತ್ನಿ ರೇಣುಕಾ ಭಂಡಾರಿಯವರ ಜೊತೆಯಲ್ಲಿ ಮುಲುಂಡ್ ಬಂಟ್ಸ್ ನ ವತಿಯಿಂದ ವೇದಿಕೆಯ ಗಣ್ಯರ ಹಸ್ತದಿಂದ ಪೇಟ ತೊಡಿಸಿ, ಶಾಲು ಹೊದಿಸಿ, ಹೂಗುಚ್ಛ, ನೆನಪಿನ ಕಾಣಿಕೆಯೊಂದಿಗೆ, ಸನ್ಮಾನ ಪತ್ರವನ್ನು ಪ್ರದಾನಿಸಿ ಬಹಳ ಪ್ರೀತಿ ಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಅದೇ ರೀತಿ ಮುಲುಂಡ್ ಬಂಟ್ಸ್ ನ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕರಾಗಿ ಮಹತ್ತರ ಸೇವೆ ಸಲ್ಲಿಸಿದ ಯುವ ಉದ್ಯಮಿ, ಮುಲುಂಡ್ ಪೂಜಾ ಹೋಟೆಲ್ ನ ಕದಂಡಲೆ ಸುರೇಶ್ ಶೆಟ್ಟಿ ಅವರಿಗೆ ಅವರ ಪತ್ನಿ ಸುಹಾಸಿನಿ ಮತ್ತು ಮಕ್ಕಳ ಜೊತೆ ‘ಉತ್ತಮ ಕಾರ್ಯಕರ್ತ ಪ್ರಶಸ್ತಿ’ಯನ್ನು, ಮುಲುಂಡ್ ಬಾನ್ಸುರಿ ಹೋಟೆಲ್ ಮಾಲಕ ರತ್ನಾಕರ್ ವೈ ಶೆಟ್ಟಿಯವರಿಗೆ ಪತ್ನಿ ಸರಾಜ್ ಶೆಟ್ಟಿಯವರ ಜೊತೆಯಲ್ಲಿ ‘ಉತ್ತಮ ಹೋಟೆಲ್ ಉದ್ಯಮಿ ಪ್ರಶಸ್ತಿ’ಯನ್ನು ಮತ್ತು ಹಿರಿಯರಾದ ಸುಧಾಕರ್ ಆರ್, ಶೆಟ್ಟಿಯವರಿಗೆ ಪತ್ನಿ ಶಾಲಿನಿ ಶೆಟ್ಟಿಯವರ ಜೊತೆ ‘ಶ್ರೇಷ್ಠ ಕೈಗಾರಿಕೋದ್ಯಮಿ ಪ್ರಶಸ್ತಿ’ಯನ್ನು ಪ್ರದಾನಿಸಿ ಆದರ ಪೂರ್ವಕವಾಗಿ ಸತ್ಕರಿಸಲಾಯಿತು. ಮುಲುಂಡ್ ಬಂಟ್ಸ್ ವತಿಯಿಂದ ಅಧ್ಯಕ್ಷ ಶಾಂತಾರಾಮ್ ಬಿ. ಶೆಟ್ಟಿಯವರನ್ನು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ವಸಂತ್ ಶೆಟ್ಟಿಯವರನ್ನು, ಯುವ ವಿಭಾಗದ ಕಾರ್ಯಾಧ್ಯಕ್ಷೆ ಶ್ರುತಿಕಾ ಎಸ್. ಶೆಟ್ಟಿಯವರನ್ನು, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಶಶಿಕಾಂತಿ ಆರ್ ಶೆಟ್ಟಿಯವರನ್ನು ವೇದಿಕೆಯ ಗಣ್ಯರ ಹಸ್ತದಿಂದ ಶಾಲು ಹೊದಿಸಿ, ಹೂಗುಚ್ಛ, ನೆನಪಿನ ಕಾಣಿಕೆಯೊಂದಿಗೆ ಅವರ ಅಧಿಕಾರಾವಧಿಯ ಮಹತ್ತರ ಸೇವಾ ಕಾರ್ಯಗಳನ್ನು ಪರಿಗಣಿಸಿ ಅವರೆಲ್ಲರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಹಿನ್ನಲೆಯಲ್ಲಿ ಮುಲುಂಡ್ ಬಂಟ್ಸ್ ನ ವತಿಯಿಂದ ನೀಡಲಾದ ವಿಶೇಷ ಸನ್ಮಾನವನ್ನು ಸ್ವೀಕರಿಸಿದ ಶಶಿಕಿರಣ್ ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, ಬಂಟ ಸಮಾಜ ಬಾಂಧವರು ವಿಭಿನ್ನ ರೀತಿಯಲ್ಲಿ ತಮ್ಮನ್ನು ತಾವು ಶ್ರಮ ಜೀವಿಗಳಾಗಿ ಮುಂಬಯಿ ಮಾತ್ರವಲ್ಲದೇ, ದೇಶ ವಿದೇಶದ ನೆಲದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆಗೈದು ಉನ್ನತ ಮಟ್ಟಕ್ಕೇರಿದ್ದಾರೆ ಎನ್ನುವಂತಹದ್ದು ಬಂಟ ಸಮಾಜ ಬಾಂಧವನಾದ ನನಗೂ ಅಭಿಮಾನದ ವಿಷಯ ಎಂದೆನ್ನುತ್ತಾ, ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ವಿಶೇಷ ಗೌರವಾನ್ವಿತ ಸನ್ಮಾನವನ್ನು ಸ್ವೀಕರಿಸಿದ ಪ್ರಕಾಶ್ ಭಂಡಾರಿ ಸನ್ಮಾನಕ್ಕೆ ಉತ್ತರಿಸುತ್ತಾ, ನನಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸುವ ಭಾಗ್ಯ ಧಕ್ಕಿದ್ದರೆ ಅದರ ಸಂಪೂರ್ಣ ಶ್ರೇಯಸ್ಸು ಚಿಣ್ಣರ ಬಿಂಬಕ್ಕೆ ಸಲ್ಲುತ್ತದೆ ಎಂದರಲ್ಲದೇ, ಮುಲುಂಡ್ ಬಂಟ್ಸ್ ನ ಕಾರ್ಯ ವೈಖರಿಯನ್ನು ಬಣ್ಣಿಸುತ್ತಾ ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
ಉತ್ತಮ ಕಾರ್ಯಕರ್ತ ಪ್ರಶಸ್ತಿಯನ್ನು ಸ್ವೀಕರಿಸಿದ ಕಡಂದಲೆ ಸುರೇಶ್ ಶೆಟ್ಟಿ ಮತ್ತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, ಹಿರಿಯರ ಪುಣ್ಯದ ಫಲ, ತಂದೆ ತಾಯಿಯ ಆಶೀರ್ವಾದ, ಪತ್ನಿ ಮತ್ತು ಮಕ್ಕಳ ಸಹಕಾರದಿಂದ ನನಗೆ ಕಿಂಚಿತ್ತು ಸಮಾಜಪರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ನಾನು ಸನ್ಮಾನವನ್ನು ಬಯಸಿ ಯಾವ ಕೆಲಸವನ್ನೂ ಮಾಡಿದವನಲ್ಲ ಎಂದು ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಉತ್ತಮ ಹೋಟೆಲ್ ಉದ್ಯಮಿ ಪ್ರಶಸ್ತಿಯನ್ನು ಸ್ವೀಕರಿಸಿದ ರತ್ನಾಕರ್ ವೈ. ಶೆಟ್ಟಿ ಮಾತಾನಾಡುತ್ತಾ, ಮುಲುಂಡ್ ಬಂಟ್ಸ್ ನ ಹೆಚ್ಚಿನ ಕಾರ್ಯಕ್ರಮಗಳಿಗೆ ನನ್ನಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡಿರುವ ನೆಲೆಯಲ್ಲಿ ನನ್ನನ್ನು ಅನ್ನದಾತರೆಂದೇ ಗೌರವಿಸುತ್ತಾ ಬಂದಿದ್ದಾರೆ. ಮಾತ್ರವಲ್ಲ, ಇಂದು ಶ್ರೇಷ್ಠ ಸನ್ಮಾನವನ್ನು ನೀಡಿದ್ದಾರೆ. ಇದು ನನ್ನ ಪಾಲಿನ ಸೌಭಾಗ್ಯವಾದರೂ ಇದರ ಎಲ್ಲಾ ಶೇಯಸ್ಸು ನನ್ನನ್ನು ಈ ಉದ್ಯಮ ಕ್ಷೇತ್ರಕ್ಕೆ ಪರಿಚಯಿಸಿದ ನನ್ನ ಸಹೋದರ ಕೃಷ್ಣ ಪ್ಯಾಲೇಸ್ ನ ಮಾಲಕ ಕೃಷ್ಣ ಶೆಟ್ಟಿಯವರಿಗೆ ಸಲ್ಲುವಂತಿದೆ ಎಂದು ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಹಾಗೇ ಪ್ರಶಸ್ತಿ ಪುರಸ್ಕಾರವನ್ನು ಸ್ವೀಕರಿಸಿದ ನಾರಾಯಣ ಶೆಟ್ಟಿ ಮತ್ತು ಸುಧಾಕರ ಶೆಟ್ಟಿ ಅಭಿಮಾನದ ನುಡಿಗಳೊಂದಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಸಮಾರಂಭದ ವೇದಿಕೆಯಲ್ಲಿ ಉಪಾಧ್ಯಕ್ಷ ಸಿಎ ಕರುಣಾಕರ ಶೆಟ್ಟಿ, ಗೌರವ ಪ್ರ. ಕಾರ್ಯದರ್ಶಿ ವೇಣುಗೋಪಾಲ್ ಎಂ. ಶೆಟ್ಟಿ, ಗೌ. ಕೋಶಾಧಿಕಾರಿ ಕರುಣಾಕರ್ ಬಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಶ್ ಕೆ. ಆಳ್ವ, ಜೊತೆ ಕಾರ್ಯದರ್ಶಿ ಸತೀಶ್ ಎಂ. ಶೆಟ್ಟಿ, ಜೊತೆ ಕೋಶಾಧಿಕಾರಿ ಸಿಎ ಗಣೇಶ್ ಎ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ವಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಶ್ರುತಿಕಾ ಎಸ್. ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಶಶಿಕಾಂತಿ ಆರ್. ಶೆಟ್ಟಿ, ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ವಿನೋದಾ ಆರ್. ಕೆ. ಚೌಟರವರಿಂದ ಪ್ರಾರ್ಥನೆ, ಬಂಟ ಗೀತೆ, ಉದ್ಘಾಟಕರಾಗಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಸೇರಿದಂತೆ ವೇದಿಕೆಯ ಗಣ್ಯರ ಹಾಗೂ ಮಾಜಿ ಅಧ್ಯಕ್ಷರುಗಳ ಹಸ್ತದಿಂದ ದೀಪ ಪ್ರಜ್ವಲನೆಯೊಂದಿಗೆ ವಾರ್ಷಿಕೋತ್ಸವದ ಈ ಸಭಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಉಪಾಧ್ಯಕ್ಷ ಸಿಎ ಕರುಣಾಕರ್ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಅತಿಥಿ ಗಣ್ಯರನ್ನು ವೇದಿಕೆಯಲ್ಲಿದ್ದ ಸಂಘದ ಪದಾಧಿಕಾರಿಗಳು ಮತ್ತು ಮಾಜಿ ಅಧ್ಯಕ್ಷರುಗಳು ಶಾಲು ಹೊದಿಸಿ, ಹೂಗುಚ್ಛ, ನೆನಪಿನ ಕಾಣಿಕೆಯೊಂದಿಗೆ ಸತ್ಕರಿಸಿದರು.
ಗೌರವ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಎಂ. ಶೆಟ್ಟಿ ಸಂಘದ ಚಟುವಟಿಕೆಯನ್ನು ಬಿಂಬಿಸುವ ವಾರ್ಷಿಕ ವರದಿಯನ್ನು ಓದಿದರು. ಹಾಗೇ ಮಹಿಳಾ ವಿಭಾಗದ ವರದಿಯನ್ನು ಕಾರ್ಯಾಧ್ಯಕ್ಷೆ ರತ್ನಾ ವಸಂತ್ ಶೆಟ್ಟಿ ಮತ್ತು ಯುವ ವಿಭಾಗದ ವರದಿಯನ್ನು ಕಾರ್ಯಾಧ್ಯಕ್ಷೆ ಶ್ರುತಿಕಾ ಎಸ್. ಶೆಟ್ಟಿ ಮಂಡಿಸಿದರು. ಅತಿಥಿ ಗಣ್ಯರ, ಸನ್ಮಾನಿತರ ಹಾಗೂ ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಹಿನ್ನಲೆ ಕಂಠ ಸ್ವರದೊಂದಿಗೆ ಎಲ್ಇಡಿ ಪರದೆಯ ಮುಖಾಂತರ ಪ್ರಸ್ತುತಪಡಿಸಲಾಯಿತು. ಸಾಂಸ್ಕೃತಿಕ ಅಂಗವಾಗಿ ಸಭಾ ಕಾರ್ಯಕ್ರಮದ ಮೊದಲು ಮುಲುಂಡ್ ಬಂಟ್ಸ್ ನ ಪದಾಧಿಕಾರಿಗಳ, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸದಸ್ಯರ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮವು ಜರಗಿತು. ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಲುಂಡ್ ಬಂಟ್ಸ್ ನ ರಿಷಬ್ ಶೆಟ್ಟಿ ಮತ್ತು ಸಮೃದ್ಧಿ ಶೆಟ್ಟಿ ನೆರವೇರಿಸಿಕೊಟ್ಟರು. ಸಭಾ ಕಾರ್ಯಕ್ರಮಗಳನ್ನು ರಂಗಕಲಾವಿದ ಬಾಬ ಪ್ರಸಾದ್ ಅರಸ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮುಲುಂಡ್ ಬಂಟ್ಸ್ ನ ಪದಾಧಿಕಾರಿಗಳ ಮತ್ತು ಸದಸ್ಯರ ಅಭಿನಯದಲ್ಲಿ ಬಾಬಾ ಪ್ರಸಾದ್ ಅರಸರವರ ನಿರ್ದೇಶನದಲ್ಲಿ ‘ಸ್ವಾಮಿ ಕೊರಗಜ್ಜ’ ಭಕ್ತಿ ಪ್ರಧಾನ ಜಾನಪದ ತುಳು ನಾಟಕವು ಪ್ರದರ್ಶಿಸಲ್ಪಟ್ಟಿತು. ಕಾರ್ಯಕ್ರಮದ ಮಧ್ಯೆ ಚಾ ತಿಂಡಿ ಮತ್ತು ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.