ಬಂಟರ ಸಂಘ ಸಿಟಿ ಪ್ರಾದೇಶಿಕ ಸಮಿತಿ ಮುಂಬಯಿಯ 122 ಬಂಟ ಪುಟಾಣಿಗಳೊಂದಿಗೆ ಬಂಟ ಭವಿಷ್ಯ ಸನಾತನ ಸನ್ನಡತೆಯ ಸತ್ಸಂಗ ಸಂಭ್ರಮ ಕಾರ್ಯಕ್ರಮವು ಜನವರಿ 27 ರಂದು ಸಂಜೆ 3:30 ಕ್ಕೆ ಬಂಟರ ಸಂಘ ಮುಂಬಯಿಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಿಟಿ ಪ್ರಾದೇಶಿಕ ಸಮಿತಿಯ ಎಲ್ಲಾ ಸದಸ್ಯರು ಸೇರಿ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಮುಕ್ತಾನಂದ ಸಭಾಗೃಹದ ವೇದಿಕೆಗೆ ಸರಸ್ವತಿ ದೇವಿಯನ್ನು ಪೂರ್ಣ ಕುಂಭ, ಭಜನೆಯೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ಕುಣಿತ ಭಜನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಭೋಜ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಸಮನ್ವಯಕರಾದ ಶ್ರೀ ರವೀಂದ್ರನಾಥ ಭಂಡಾರಿ, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ, ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾದ್ಯಕ್ಷರಾದ ಕಾರ್ಯಾನಗುತ್ತು ಶಿವರಾಂ ಶೆಟ್ಟಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್ ಶೆಟ್ಟಿಯವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಸಿಟಿ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷರಾದ ಶ್ರೀ ಅಶೋಕ್ ಪಕ್ಕಳ ಅವರ ಪರಿಕಲ್ಪನೆಯಲ್ಲಿ ಪ್ರಾದೇಶಿಕ ಸಮಿತಿಯ ಇದು ವಿಶೇಷ ವಿಭಿನ್ನ ರೀತಿಯ ಚೊಚ್ಚಲ ಕಾರ್ಯಕ್ರಮವಾಗಿತ್ತು.
ಬಂಟ ಭವಿಷ್ಯ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಲ್ಲಿ ಚಂದನದ ಕುಂಕುಮದ ನಾಮ ಬಲ ಬದಿಗೆ ಚಕ್ರ ಎಡ ಬದಿಗೆ ಶಂಖದ ಮುದ್ರೆಯಿಂದ ಇಡೀ ಕಾರ್ಯಕ್ರಮದಲ್ಲಿ ಸನಾತನ ಸನ್ನಡತೆಯ ಸಂಸ್ಕಾರದ ಸತ್ಸಂಗದ ವಾತಾವರಣ ಮೂಡಿತ್ತು. ಕಾರ್ಯಕ್ರಮಕ್ಕೆ ಬಂದಂತಹ ಬಂಟ ಪರಿವಾರವನ್ನು ಬಿಸಿಬಿಸಿ ಪಾನಕ ನೀಡಿ ಸ್ವಾಗತಿಸಿದ್ದು ವಿಶೇಷ ಆಕರ್ಷಣೀಯವಾಗಿತ್ತು. ಜೊತೆಗೆ 122 ಮಕ್ಕಳು ಪರಿವಾರದ ಜೊತೆ ಬಂಟ ಭವಿಷ್ಯಕ್ಕೆ ಬಂದಿದ್ದು ಒಂದು ಇತಿಹಾಸ ಎಂಬಂತೆ ಇತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು ಮತ್ತು ಬಂಟ ಪುಟಾಣಿಗಳು ದೀಪ ಬೆಳಗಿಸಿ, ಕಲ್ಪವೃಕ್ಷದ ಹಿಂಗಾರವನ್ನು ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಂಟ ಭವಿಷ್ಯಕ್ಕೆ ಹೊಸ ಮೆರುಗು ಎಂಬಂತೆ ಬಂಟ ಭವಿಷ್ಯ ಹಾಡು ಎಲ್ಲರನ್ನೂ ಮನಸೆಳೆಯಿತು. ಆಶೋಕ್ ಎ ಪಕ್ಕಳ ಅವರ ಕುಂಚದಿಂದ ಮೂಡಿದ ಹಾಡನ್ನು ಶೈಲಜಾ ಎ ಶೆಟ್ಟಿ ಮತ್ತು ಚಿಣ್ಣರ ಸ್ವರದಲ್ಲಿ ಈ ಕಾರ್ಯಕ್ರಮಕ್ಕಾಗಿ ರೆಕಾರ್ಡ್ ಮಾಡಲಾಗಿತ್ತು. ಇನ್ನೊಂದು ವಿಶೇಷವೆಂದರೆ ಗಣ್ಯರಿಗೆ ಗೌರವವನ್ನು ಯಾವುದೇ ಪೇಟ ಇರಿಸಿ ಹಾರ ತೊಡಿಸುವ ಬದಲಿಗೆ ಸಿರಿಧಾನ್ಯ ಮತ್ತು ಹಿಂಗಾರ ನೀಡಿ ಗೌರವಿಸಲಾಯಿತು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಪ್ರವೀಣ್ ಭೋಜ ಶೆಟ್ಟಿಯವರು ಇಂದಿನ ಮಕ್ಕಳು ಮುಂದಿನ ಜನಾಂಗವೆಂಬಂತೆ, ನಾವು ಭವಿಷ್ಯದಲ್ಲಿ ಸುಸಂಸ್ಕ್ರತ ಸಮಾಜ ಕಟ್ಟುವರೇ ಸಂಸ್ಕಾರವಂತ ಪ್ರಜೆಗಳನ್ನು ನಿರ್ಮಿಸಬೇಕು. ಬಾಲ್ಯದಲ್ಲಿಯೇ ನಮ್ಮ ಪುಟಾಣಿಗಳಿಗೆ ತಂದೆ ತಾಯಂದಿರ ತ್ಯಾಗದ, ಹೋರಾಟದ ವಿಚಾರವನ್ನು ಗುರು ಹಿರಿಯರಿಗೆ ಕೊಡಬೇಕಾದ ಗೌರವವನ್ನು, ನಾಡು ನುಡಿಗೆ ನೀಡಬೇಕಾದ ಕರ್ತವ್ಯಪರತೆಯನ್ನು ತಿಳಿಸಿ ಹೇಳಬೇಕು. ದೇಶ ಕೋಶದ ಅರ್ಥವನ್ನು ತಿಳಿಸಿ ರಾಷ್ಟ್ರ ಪ್ರೇಮವನ್ನು ಅರುಹಬೇಕು. ನಮ್ಮ ಬಂಟರ ಸಂಘ ಸಂಸ್ಕ್ರತಿ ಸಂಸ್ಕಾರವನ್ನು ಬಹಳ ಮುತುವರ್ಜಿಯೊಂದಿಗೆ ಕಾಪಾಡಿಕೊಂಡು ಬರುವಲ್ಲಿ ಬದ್ದವಾಗಿದೆ ಎಂದು ತಿಳಿಸಿದರು. ಇಂತಹ ಅರ್ಥಪೂರ್ಣ ಕಾರ್ಯಕ್ರಮ ನೀಡಿದ ಸಿಟಿ ಪ್ರಾದೇಶಿಕ ಸಮಿತಿಯ ಅಶೋಕ ಪಕ್ಕಳ ಮತ್ತು ಅವರ ಸರ್ವ ಸದಸ್ಯರಿಗೆ ವಿಶೇಷ ವಂದನೆಗಳನ್ನು ಸಲ್ಲಿಸಿದರು.
ಬಂಟರ ಸಂಘದ ಮುಂದಿನ ಭವಿಷ್ಯವೇ ಈ ಮಕ್ಕಳು ಅವರಿಗಾಗಿ ಡಾ. ಆರ್ ಕೆ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಶ್ರೀ ಮಹಾವಿಷ್ಣು ಪಾಠ ಶಾಲೆಯನ್ನು ಆರಂಭಿಸಲಾಯಿತು. ಪ್ರವೀಣ್ ಭೋಜ ಶೆಟ್ಟಿಯವರು ಪಾಠ ಶಾಲೆಯನ್ನು ಲೋಕಾರ್ಪಣೆ ಮಾಡಿದರು. ಗುರುಗಳಾದ ವಿಧ್ವಾನ್ ಅರವಿಂದ ಬನ್ನಿಂತಾಯರು ವೇದ, ಶಾಸ್ತ್ರ, ದಿನ ನಿತ್ಯ ಚಟುವಟಿಕೆಯಲ್ಲಿ ದೇವರನ್ನು ಪ್ರಾರ್ಥಿಸುವ ರೀತಿ ಬಗ್ಗೆ ಸುಧಿರ್ಘ ವಿವರಣೆ ನೀಡಿ, ಮುಂದಕ್ಕೆ ಆರಂಭಿಸುವ ಗುರುಕುಲದಂತಹ ಮಕ್ಕಳಿಗೆ ಸುವಿಸ್ತಾರವಾದ ಭೋದನೆ ಭೋದಿಸಲಾಗುವುದು ಎಂದು ಭರವಸೆ ಇತ್ತರು. ಜೊತೆಗೆ ಪ್ರತಿ ವರ್ಷ ನಡೆಯುವ ಶ್ರೀ ಮಹಾವಿಷ್ಣು ಜಾತ್ರೆಯಲ್ಲಿ ಈ ಚಿಣ್ಣರ ಶ್ಲೋಕ ಪಠಣ ಭಜನೆಯೊಂದಿಗೆ ದೇವರ ಬಲಿಪೂಜೆ ನಡೆಸಲಾಗುವುದು ಎಂದು ತಿಳಿಸಿದರು. ಆಮೇಲೆ ಮುಂಬಯಿ ಮಹಾ ನಗರದಲ್ಲಿ ಈವರೆಗೆ ಸಂಘ ಸಂಸ್ಥೆಗಳ ಇತಿಹಾಸದಲ್ಲೇ ಮೊದಲು ಎಂಬಂತೆ ಮಕ್ಕಳಿಂದ ಮಾತಾ ಪಿತೃರ ಪಾದ ಪೂಜೆ ನಡೆಸಿ ಮಕ್ಕಳಿಂದಲೇ ಪುಷ್ಪಾರ್ಚನೆ ಮಾಡಿಸಿ ಆರತಿ ಮಾಡಿಸಲಾಯಿತು. ಆನಂತರ ಮಕ್ಕಳ ಕೈಯಿಂದಲೇ ದೇವರ ಹುಂಡಿಗೆ ಕಾಣಿಕೆ ಹಾಕಿಸಿ ಆ ಹುಂಡಿಯನ್ನು ಮತ್ತು ಪಾದ ಪೂಜೆ ಮಾಡಿದ ಎಲ್ಲಾ ವಸ್ತುಗಳನ್ನು ಬಟ್ಟಲು ಸಮೇತ ಮಕ್ಕಳಿಗೆ ನೀಡಲಾಯಿತು. 122 ಮಕ್ಕಳು ತಮ್ಮ ಮಾತಾ ಪಿತೃ ಪೋಷಕರೊಂದಿಗೆ ಬಂಟ ಭವಿಷ್ಯ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಕ್ಕಳಿಗೆ ಸಿಹಿ ತಿಂಡಿ ಮತ್ತು ಉಡುಗೊರೆಯನ್ನು ನೀಡಲಾಯಿತು. ಪ್ರಸ್ತಾವಿಕ ಭಾಷಣವನ್ನು ಕಾರ್ಯಾಧ್ಯಕ್ಷರಾದ ಶ್ರೀ ಅಶೋಕ್ ಪಕ್ಕಳ ಅವರು ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮವನ್ನು ಯಾಕೆ ಆಯೋಜಿಸಿದ್ದೇವೆ? ಇದರ ಅಗತ್ಯತ್ಯತೆ ಏನಿದೆ ಅನ್ನುವುದರ ಬಗ್ಗೆ ವಿವರವಾಗಿ ತಿಳಿಸಿ ದಾನಿಗಳಿಗೆ ಮನಸಾರೆ ವಂದಿಸಿದರು. ಸಿಟಿ ಪ್ರಾದೇಶಿಕ ಸಮಿತಿಯ ಎಲ್ಲಾ ಮಾಜಿ ಕಾರ್ಯಾಧ್ಯಕ್ಷರನ್ನು, ಮಾಜಿ ಕಾರ್ಯಾಧ್ಯಕ್ಷೆಯವರನ್ನು ವೇದಿಕೆಗೆ ಕರೆಸಿ ಅವರಿಂದ ಗಣ್ಯರನ್ನು ಗೌರವಿಸಲಾಯಿತು.
ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿಯವರು ಮಾತನಾಡುತ್ತಾ, ಸತ್ಕಾರ್ಯಕ್ಕೆ ನನ್ನ ಬೆಂಬಲ ಸದಾ ಇದೆ. ಮಕ್ಕಳ ಜೊತೆಗೆ ಈ ಸತ್ಸಂಗದ ಪ್ರಯೋಜನವನ್ನು ಹಿರಿಯರೂ ಪಡೆದುಕೊಳ್ಳಬಹುದು. ನಾನು ಹತ್ತಾರು ದೇಶಗಳನ್ನು ಸುತ್ತಿದ್ದೇನೆ. ಹಲವಾರು ದಾರ್ಶನಿಕರ ಮಾತನ್ನು ಆಲಿಸಿದ್ದೇನೆ. ಅವರೆಲ್ಲರೂ ಹೇಳುವ ಮಾತೆಂದರೆ, ಸೂಕ್ತ ರೀತಿ ನೀತಿಯಲ್ಲಿ ಮಕ್ಕಳನ್ನು ಹೆತ್ತವರು ಬೆಳೆಸದಿದ್ದರೆ ನಾವೇ ಅವರನ್ನು ಹತ್ಯೆ ಮಾಡಿದಂತಾಗುತ್ತದೆ. ಈಗ ಸಿಟಿ ಪ್ರಾದೇಶಿಕ ಸಮಿತಿಯ ಈ ನಿರ್ಧಾರವನ್ನು ನಾನು ಬಹಳ ಆತ್ಮೀಯವಾಗಿ ಆಲಿಂಗಿಸಿ ಸ್ವೀಕರಿಸಿದ್ದೇನೆ. ನಿಮ್ಮೊಂದಿಗೆ ಸತ್ಕಾರ್ಯಕ್ಕೆ ಸದಾ ಕೈ ಜೋಡಿಸುತ್ತೇನೆ ಎಂದರು. ಸಮನ್ವಯಕರಾದ ಶ್ರೀ ರವೀಂದ್ರ ಎಂ ಭಂಡಾರಿಯವರು ಸಮಯೋಚಿತವಾಗಿ ಮಾತನಾಡಿ, ಮನುಷ್ಯನಿಗೆ ಹಣಕ್ಕಿಂತ ಅಧಿಕವಾದ ಗೌರವ ಗುಣಕ್ಕೆ ದೊರೆಯುತ್ತದೆ. ನಮ್ಮ ಸಂಪಾದನೆಯ ಒಂದಂಶ ಸಮಾಜ ಸೇವೆಗಾಗಿ ವಿನಿಯೋಗಿಸಬೇಕು. ಮಾತಾ ಪಿತರ ಸೇವೆಯೆಂದರೆ ಅದು ಈಶ ಸೇವೆಗೂ ಮಿಗಿಲಾದುದು. ಈ ಎಳೆಯ ಕಂದಮ್ಮಗಳೇ ನಮ್ಮ ಮುಂದಿನ ಬಂಟರ ಭವ್ಯ ಭವಿಷ್ಯವೆನ್ನಲು ಅತೀವ ಹೆಮ್ಮೆಯೆನಿಸುತ್ತಿದೆ. ನನ್ನ ಆತ್ಮೀಯ ಗೆಳೆಯನ ಇಂತಹ ವಿಶೇಷ ವಿನೂತನ ಕಾರ್ಯಕ್ರಮಕ್ಕೆ ಇನ್ನು ಮುಂದಕ್ಕೂ ಕೈ ಜೋಡಿಸುವುದಾಗಿ ಭರವಸೆ ಇಟ್ಟರು. ಶ್ರೀ ಮಹಾವಿಷ್ಣು ಪಾಠ ಶಾಲೆಯ ವರ್ಷ ಪೂರ್ತಿಯ ಖರ್ಚುನ್ನು ತನ್ನ ಮಾತಾ ಪಿತೃರಾದ ದಿ. ಅಪ್ಪಿ ಶೆಟ್ಟಿ ಮತ್ತು ಕೃಷ್ಣ ಶೆಟ್ಟಿಯವರ ಸ್ಮರಣಾರ್ಥ ನೀಡುವುದಾಗಿ ಡಾ. ಆರ್ ಕೆ ಶೆಟ್ಟಿಯವರು ಮನಸಾರೆ ಖುಷಿಯಿಂದ ಒಪ್ಪಿಕೊಂಡರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆಯನ್ನು ದೀಪಿಕಾ ಶೆಟ್ಟಿಯವರು ಹಾಡಿದರು. ಡಾ. ಪೂರ್ಣಿಮಾ ಶೆಟ್ಟಿಯವರು ಅರ್ಥಪೂರ್ಣ ಕಾರ್ಯಕ್ರಮವನ್ನು ಅರ್ಥವತ್ತಾಗಿ ನೆರವೇರಿಸಿಕೊಟ್ಟರು. ಸಿಟಿ ಪ್ರಾದೇಶಿಕ ಸಮಿತಿ 2023-2026ರ ನೂತನ ಕಾರ್ಯಾಧ್ಯಕ್ಷೆ ಜ್ಯೋತಿ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು. ಉಪಾಧ್ಯಕ್ಷರಾದ ಪದ್ಮನಾಭ ಎಸ್ ಶೆಟ್ಟಿ, ಕಾರ್ಯದರ್ಶಿ ಸುರೇಂದ್ರ ಕುಮಾರ್ ಶೆಟ್ಟಿ ಮಾರ್ನಾಡ್, ಕೋಶಾಧಿಕಾರಿ ಪ್ರದೀಪ್ ಬಿ ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀ ನಿತೇಶ್ ಶೆಟ್ಟಿ, ಜೊತೆ ಕೋಶಾಧಿಕಾರಿ ಕೇಶವ್ ಶೆಟ್ಟಿ, ಯುವ ವಿಭಾಗದ ಕಾರ್ಯಾದ್ಯಕ್ಷ ಭುವನೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಟಿ ಪ್ರಾದೇಶಿಕ ಸಮಿತಿಯ ನಿಕಟ ಪೂರ್ವ ಕಾರ್ಯಾಧ್ಯಕ್ಷರು ಸ್ವಾಗತಿಸಿದರು. ಕಾರ್ಯಕ್ರಮದ ಪ್ರಾಯೋಜಕರನ್ನು ಸಿರಿಧಾನ್ಯ ಕೊಟ್ಟು ಗೌರವಿಸಲಾಯಿತು. ಕಾರ್ಯದರ್ಶಿ ಸುರೇಂದ್ರ ಮಾರ್ನಾಡ್ ಧನ್ಯವಾದವಿತ್ತರು. ದಕ್ಷಿಣ ಕನ್ನಡ ಜಿಲ್ಲೆಯ ಹಳೇ ಪದ್ದತಿಯ ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.