ವಿದ್ಯಾಗಿರಿ (ಮೂಡುಬಿದಿರೆ): ಆಳ್ವಾಸ್ ಸಿನಿಮಾ ಸಮಾಜದಿಂದ ಸೋಮವಾರ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮತ್ತು ಪತ್ರಿಕೋದ್ಯಮ ವಿಭಾಗದ ಸ್ಟುಡಿಯೋದಲ್ಲಿ ‘ರಿಬೇಟ್’ (ರಿವೀವ್ ಆ್ಯಂಡ್ ಡಿಬೇಟ್) ಕಾರ್ಯಕ್ರಮ ನಡೆಯಿತು.
ಮೊದಲಿಗೆ ವಿದ್ಯಾರ್ಥಿಗಳಿಗೆ ‘ಬದಲಾವಣೆ’ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಬಳಿಕ ಬಿಡ್ ಮೂಲಕ ವಿದ್ಯಾರ್ಥಿಗಳ ಎರಡು ತಂಡಗಳನ್ನು ಆಯ್ಕೆ ಮಾಡಲಾಯಿತು. ಇತ್ತಂಡಗಳಿಗೆ ‘ಲೂಸಿಯಾ’ ಮತ್ತು ‘ಸಿನಿ ಅಡ್ಡೆ’ ಎಂದು ವಿದ್ಯಾರ್ಥಿಗಳು ಹೆಸರಿಸಿಕೊಂಡರು. ಕಿರುಚಿತ್ರದಲ್ಲಿ ಪ್ರಸ್ತಾವಗೊಂಡ ಪ್ರಮುಖ 5 ವಿಷಯಗಳ ಕುರಿತು ಎರಡು ತಂಡಗಳ ಮಧ್ಯೆ ಪರ-ವಿರೋಧ ಚರ್ಚೆ ನಡೆಯಿತು. ಅನಂತರ ಸಿನಿಮಾದ ತಂತ್ರಜ್ಞಾನ, ಚಿತ್ರಕತೆ ಕುರಿತು ರಸಪ್ರಶ್ನೆ ನಡೆಯಿತು.
ವಿದ್ಯಾರ್ಥಿ ಅವಿನಾಶ್ ಕಟೀಲ್ ಕಾರ್ಯಕ್ರಮ ನಡೆಸಿಕೊಟ್ಟರು. ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹಾಗೂ ಸೃಜನಶೀಲತೆಯ ಮೂಲಕ ಆಳ್ವಾಸ್ ಸಿನಿಮಾ ಸಮಾಜದ ಕಾರ್ಯಕ್ರಮ ವಿಭಿನ್ನವಾಗಿದೆ’ ಎಂದು ಶ್ಲಾಘಿಸಿದರು.
ಸಹಪ್ರಾಧ್ಯಾಪಕ ಡಾ. ಶ್ರೀನಿವಾಸ ಹೊಡೆಯಾಲ, ಸಹಾಯಕ ಪ್ರಾಧ್ಯಾಪಕರಾದ ಹರ್ಷವರ್ಧನ ಪಿ.ಆರ್. ನಿಶಾನ್ ಕೋಟ್ಯಾನ್, ದೀಕ್ಷಿತಾ, ಇಂಚರಾ ಗೌಡ ಮತ್ತು ಅಕ್ಷಯ್ ಕುಮಾರ್ ತೀರ್ಪುಗಾರರಾಗಿ ಸಹಕರಿಸಿದರು.