ಪ್ರತಿಯೊಬ್ಬರೂ ಸೇವಕರಾಗಿದ್ದು, ಕೆಲಸ ಕಾರ್ಯಕ್ಕಾಗಿ ಸಮಿತಿಗಳನ್ನು ಮಾಡಲಾಗಿದೆ. ಎಲ್ಲರೂ ನಮ್ಮವರೆಂದು ಭಾವಿಸಿ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ. ಸೇವಕತನದ ರುಚಿ ಲಕ್ಷ್ಮೀ ಹನುಮಂತನಿಗೆ ಮಾತ್ರ ಗೊತ್ತು. ಎಲ್ಲರೂ ಒಂದಾಗಿ ರಥವನ್ನು ಎಳೆಯುವ ಕೆಲಸವಾಗಲಿ. ಗ್ರಾಮ ಗ್ರಾಮದಲ್ಲಿ ಜಾಗೃತಿಯ ಕಾರ್ಯ ರಥೋತ್ಸವದ ಮೂಲಕ ನಡೆಯುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಜ.14 ರಂದು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಫೆ.18 ಮತ್ತು ಫೆ.19 ರಂದು ನಡೆಯುವ ಶ್ರೀ ಸಂಸ್ಥಾನದ ವಾರ್ಷಿಕ ಉತ್ಸವವಾದ ತುಳುನಾಡ ಜಾತ್ರೆ, ಶ್ರೀ ಒಡಿಯೂರು ರಥೋತ್ಸವದ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು.
ಜವಾಬ್ದಾರಿಗಳನ್ನು ಸೇವಾ ಮನೋಭಾವದಲ್ಲಿ ನಡೆಸುವ ಕಾರ್ಯ ಪ್ರತಿಯೊಬ್ಬರಿಂದ ನಡೆಯಬೇಕು. ಜಾತ್ರೆ ಯಾತ್ರೆಯಲ್ಲಿ ತುಳುವಿನ ಮಂಥನ ನಡೆಯಲಿದೆ. ಪ್ರತಿಯೊಬ್ಬರು ಸಹಾಯಕರಾದಾಗ ಉತ್ತಮ ರೀತಿಯ ಕಾರ್ಯಕ್ರಮ ನಡೆಯಲು ಸಾಧ್ಯ. ರಾಮಾಯಣದ ಜೀವಾಳ ಹನುಮಂತನಾಗಿದ್ದು, ಸೇವೆಗೆ ಇನ್ನೊಂದು ಹೆಸರಾಗಿದ್ದಾನೆ. ರಾಮಾಯಣ, ಮಹಾಭಾರತ ನಮ್ಮ ಬದುಕನ್ನು ಉತ್ತಮವಾಗಿಸುತ್ತದೆ. ರಾಮಮಂದಿರ ನಿರ್ಮಾಣ ರಾಜಕೀಯವಲ್ಲ. ಅದು ಧರ್ಮ ಮತ್ತು ಸಂಸ್ಕೃತಿಯ ವಿಚಾರವಾಗಿದೆ. ರಾಮ ಮಂದಿರ ನಿರ್ಮಾಣ ನಮ್ಮ ಪುಣ್ಯವಾಗಿದೆ. ರಾಮನ ಪೂಜೆ ರಾಷ್ಟ್ರದ ಆರಾಧನೆಯಾಗಿದೆ. ರಾಮ ಮಂದಿರ ನಿರ್ಮಾಣ ಧರ್ಮದ ಪುನರುತ್ಥಾನ ಹಾಗೂ ಸಂಸ್ಕೃತಿಯ ಅನಾವರಣವಾಗಿದೆ. ಮೌಲ್ಯಯುತ ಕೆಲಸ ಎಲ್ಲರಿಂದಲೂ ಆಗಬೇಕು ಆಗ ಮಾತ್ರ ನಾವು ಬೆಳೆಯಲು ಸಾಧ್ಯ ಎಂದರು.
ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜ.22 ರಂದು ನಡೆಯಲಿರುವ ಶ್ರೀ ರಾಮನಾಮ ತಾರಕ ಯಜ್ಞದ ಆಮಂತ್ರಣ ಬಿಡುಗಡೆ ಮಾಡಲಾಯಿತು. ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವದ ಅಂಗವಾಗಿ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ, ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಯೋಜನಾಧಿಕಾರಿ ಕಿರಣ್ ಉರ್ವ, ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಗ್ರಾಮ ಸಮಿತಿಯ ಕೆ. ಪಿ. ರಘುರಾಮ ಶೆಟ್ಟಿ, ರಘುನಾಥ ಶೆಟ್ಟಿ ಪಟ್ಲಗುತ್ತು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.