ಕಾರ್ಕಳದ ಯುವ ಉದ್ಯಮಿ ಮತ್ತು ಅಮ್ಮ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಸ್ಥಾಪಕ ಅವಿನಾಶ್ ಜಿ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಐಶ್ವರ್ಯ ಶೆಟ್ಟಿ ಕಳೆದ ಹಲವು ವರ್ಷಗಳಿಂದ ವಿಭಿನ್ನವಾದ ರೀತಿಯಲ್ಲಿ ಶೈಕ್ಷಣಿಕ ಸಪೋರ್ಟ್ ಸಿಸ್ಟಮನ್ನು ರೂಪಿಸುತ್ತಾ ಬಂದಿದ್ದಾರೆ. ಈ ಬಾರಿ ಕೂಡ ಅವರು ಕಾರ್ಕಳದ ಗಾಂಧಿ ಮೈದಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ‘ಅಂಬಾ ಭವಾನಿ ಕ್ರಾಕರ್ಸ್’ ಎಂಬ ಹೆಸರಿನ ಒಂದು ಪಟಾಕಿ ಅಂಗಡಿಯನ್ನು ತೆರೆದರು. ಅಲ್ಲಿ ಅವರ ಅನೇಕ ಬಂಧುಗಳು ಮತ್ತು ಸ್ನೇಹಿತರು ಹಗಲು ರಾತ್ರಿ ದುಡಿದರು. ಅದರಲ್ಲಿ ಬಂದ ಲಾಭಕ್ಕೆ ತಮ್ಮ ಒಂದಿಷ್ಟು ಪಾಲನ್ನು ಸೇರಿಸಿ ನಾಲ್ವತ್ತು ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರದಂತೆ ಒಟ್ಟು ಎರಡು ಲಕ್ಷ ರೂ ಮೊತ್ತದ ವಿದ್ಯಾರ್ಥಿ ವೇತನವನ್ನು ಈ ವರ್ಷ ಅವರು ನೀಡಿದರು. ಕಳೆದ ಹತ್ತು ವರ್ಷಗಳಿಂದ ಅವರು ಈ ರೀತಿಯ ಶೈಕ್ಷಣಿಕ ಸಪೋರ್ಟ್ ಸಿಸ್ಟಮನ್ನು ರೂಪಿಸಿರುವುದು ನಿಜಕ್ಕೂ ಶ್ಲಾಘನೀಯ ಆಗಿದೆ.
ಕಾರ್ಕಳದ ಗಾಂಧಿ ಮೈದಾನದಲ್ಲಿ ನವೆಂಬರ್ 26ರಂದು ನಡೆದ ಈ ವಿದ್ಯಾರ್ಥಿವೇತನಗಳ ವಿತರಣೆಯ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ಅವಿನಾಶ್ ಜಿ ಶೆಟ್ಟಿ, ಅವರ ಧರ್ಮಪತ್ನಿ ಐಶ್ವರ್ಯ ಎ ಶೆಟ್ಟಿ, ಅಜ್ಜಿ ಗಿರಿಜಾ ಶೆಟ್ಟಿಯವರು ಮುಂದೆ ನಿಂತು ಈ ನಗದು ಮೊತ್ತಗಳನ್ನು ಹಸ್ತಾಂತರ ಮಾಡಿದರು. ಯಾವುದೇ ವಿದ್ಯಾರ್ಥಿಗಳ ಆದಾಯ ಪ್ರಮಾಣ ಪತ್ರವನ್ನು ಪಡೆಯದೆ, ಅವರ ಅಂಕ ಪಟ್ಟಿ ಕೂಡ ನೋಡದೆ ಕೆಲವು ಸಮಾಜದ ಗಣ್ಯವ್ಯಕ್ತಿಗಳ ಶಿಫಾರಸ್ಸಿನ ಆಧಾರದ ಮೇಲೆ ಈ ಕೊಡುಗೆಗಳನ್ನು ಹಸ್ತಾಂತರ ಮಾಡಿದ್ದು ವಿಶೇಷ ಆಗಿತ್ತು.
ಈ ಶೈಕ್ಷಣಿಕ ಸೇವಾಕಾರ್ಯಕ್ಕೆ ವಿವಿಧ ರೂಪದಲ್ಲಿ ನೆರವಾದ ಅವಿನಾಶ್ ಅವರ ಸೋದರ ಸಂಬಂಧಿ ಸಾಯಿರಾಜ್ ಶೆಟ್ಟಿ, ಸಂದೇಶ ಶೆಟ್ಟಿ, ಪ್ರಥಮ್ ಶೆಟ್ಟಿ, ಪ್ರಣವ್ ರೈ, ಪ್ರಣಯ್ ಶೆಟ್ಟಿ, ಸುಮೇಧ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಪ್ರತ್ಯೋಷ್ ಶೆಟ್ಟಿ, ಅಕ್ಕ ನಿವೇದಿತಾ ರೈ ಮತ್ತು ಥೌಸೀಫ್ ಮೊದಲಾದವರನ್ನು ಈ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ನಿವೃತ್ತ ಶಿಕ್ಷಕ ವಸಂತ ಕುಮಾರ್ ಅವರು ಧನ್ಯವಾದ ಅರ್ಪಿಸಿದರು. ಈ ಶೈಕ್ಷಣಿಕ ಸೇವಾ ಕಾರ್ಯಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ಮತ್ತು ಶ್ಲಾಘನೆ ವ್ಯಕ್ತವಾಗಿದೆ.