ವಿದ್ಯಾಗಿರಿ : ನಮ್ಮನ್ನು ನಾವು ಮೊದಲು ಬದಲಿಸಿಕೊಳ್ಳದೆ ಹೊರತು, ಸಮಾಜವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಆಳ್ವಾಸ್ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹ ಪ್ರಾಧ್ಯಪಕಿ ಡಾ. ಮೂಕಾಂಬಿಕಾ ಜಿ. ಎಸ್ ಹೇಳಿದರು. ಆಳ್ವಾಸ್ ಪದವಿ ಪೂರ್ವ ವಿಭಾಗದ ವತಿಯಿಂದ ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಗುರುವಾರ ಆಂತರಿಕ ಸಮಿತಿ ಆಯೋಜಿಸಿದ್ದ ‘ಮಹಿಳಾ ದೌರ್ಜನ್ಯ ತಡೆ ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಶದ ‘ಯತ್ರಾ ನಾರ್ಯಂತು ಪೂಜ್ಯಂತೆ’ ಶ್ಲೋಕವನ್ನು ನಾವು ಒಪ್ಪುತ್ತೇವೆ, ಆದರೆ ಪಾಲಿಸುವುದಿಲ್ಲವೇಕೆ? ಎಲ್ಲರಿಗೂ ದೌರ್ಜನ್ಯವಾಗುತ್ತದೆ, ಆದರೆ ಈ ತಕ್ಕಡಿಯಲ್ಲಿ ಮಹಿಳಾ ದೌರ್ಜನ್ಯದ ತಕ್ಕಡಿ ಮಾತ್ರ ನೆಲಮುಟ್ಟುವಷ್ಟು ತೂಕ ಹೊಂದಿದೆ. ಎಲ್ಲರನ್ನ ಗೌರವಿಸುವ ವ್ಯಕ್ತಿತ್ವ ಇದ್ದರೆ ಸಮಸ್ಯೆಗೆ ಪರಿಹಾರ ಸಾಧ್ಯ. ಪ್ರತಿ ಕಾನೂನುಗಳ ಹಿಂದೆ ಒಂದು ಇತಿಹಾಸವಿದೆ. ರಕ್ಷಣೆ ಕೊಡುವ ಕಾನೂನು ಇರುವಾಗ ಸಮಸ್ಯೆಗಳನ್ನು ತಿಳಿಸಲು ಹಿಂಜರಿಯುವುದು ಸೂಕ್ತವಲ್ಲ. ಪ್ರಕೃತಿಯ ಮುಂದೆ ಎಲ್ಲರೂ ಸಮಾನರು. ಅಸಮಾನತೆಯನ್ನು ನಮ್ಮಿಂದ ಮೊದಲು ದೂರ ತಳ್ಳಬೇಕು, ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್, ಎಲ್ಲಿ ನಾರಿಯರಿಗೆ ಗೌರವ ಕೊಡುತ್ತೇವೆಯೋ, ಅಲ್ಲಿ ನಾಡು ಸಂತುಷ್ಟವಾಗಿರುತ್ತದೆ. ಭವ್ಯ ಪರಂಪರೆಯ ಭಾರತದಲ್ಲಿ ಅಸಮಾನತೆ ಇನ್ನೂ ಇದೆ. ಪ್ರತಿ ಕಡೆಗಳಲ್ಲಿಯೂ ಕಾರ್ಯಕ್ರಮಗಳನ್ನು ಮಾಡುತ್ತಾರೆ, ಈ ಕುರಿತು ಚರ್ಚೆಗಳಾಗುತ್ತೆ. ಕೆಟ್ಟ ಘಟನೆಗಳು ನಡೆಯುತ್ತೆ, ಆ ಘಟನೆಗಳು ನಮ್ಮ ಹತ್ತಿರದಲ್ಲಿ ನಡೆದಾಗ ನಾವು ವಿಚಲಿತರಾಗುತ್ತವೆ. ಮನೆಯೇ ಮೊದಲ ಪಾಠಶಾಲೆ ಎಂಬಂತೆ, ಪ್ರತಿ ಮಕ್ಕಳು ಕೇಳುವುದಕ್ಕಿಂತ ನೋಡಿ ಕಲಿಯುವುದು ಹೆಚ್ಚು. ಹಾಗಾಗಿ ಮನೆಯಿಂದಲೇ ಅಸಮಾನತೆಯನ್ನು ತೊಡೆದು ಹಾಕುವುದು ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಜಾನ್ಸಿ ಪಿ. ಎನ್, ಜೀವಶಾಸ್ತ್ರ ವಿಭಾಗದ ಸಂಯೋಜಕ ಡಾ.ವಸಂತ್ ರಾಜ್ ಬಿ.ಕೆ, ಗಣಕ ವಿಜ್ಞಾನ ವಿಭಾಗದ ಸಂಯೋಜಕ ವಿಖ್ಯಾತ್ ಭಟ್, ಇದ್ದರು. ಕಾರ್ಯಕ್ರಮ ವನ್ನು ಕನ್ನಡ ವಿಭಾಗದ ಉಪನ್ಯಾಸಕ ಮಹೇಶ್ ಎಚ್ ನಿರೂಪಿಸಿ, ಆಂತರಿಕ ಸಮಿತಿಯ ಸಂಯೋಜಕಿ ಡಾ ಸುಲತಾ ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಆಶಾ ವಂದಿಸಿದರು.