ಶಾಸಕ ಅಶೋಕ್ ಕುಮಾರ್ ರೈ ಅವರು ಟ್ರಸ್ಟ್ ಮೂಲಕ ತನ್ನ ದುಡಿಮೆಯ ಒಂದು ಪಾಲನ್ನು ದಾನ, ಧರ್ಮಕ್ಕೆ ವಿನಿಯೋಗಿಸುತ್ತಿರುವುದು ಅತ್ಯಂತ ಪುಣ್ಯದ ಕೆಲಸ. ವಸ್ತ್ರ ವಿತರಣೆಯ ಮೂಲಕ ಇಲ್ಲಿ ಸಂಪತ್ತಿನ ಮೌಲ್ಯವರ್ಧನೆ ಹಾಗೂ ಮಾನವೀಯತೆ ಅಭಿವ್ಯಕ್ತಗೊಂಡಿದೆ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ರೈ ಎಸ್ಟೇಟ್ಸ್ ಎಜುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಸ್ತ್ರ ವಿತರಣೆ, ಸಹಭೋಜನ “ಸೇವಾ ಸೌರಭ” ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ದಾನ ಧರ್ಮದ ಜತೆಗೆ ಸ್ವಾಭಿಮಾನದ ಬದುಕು ಕಟ್ಟಿಕೊಂಡಿರುವ ಬಡ ಕುಟುಂಬದ ಸಾಧಕರನ್ನು ಸಮ್ಮಾನಿಸಿರುವುದು ಶ್ಲಾಘನೀಯ ಸಂಗತಿ. ಕರಾವಳಿಯ ಕಂಬಳವನ್ನು ರಾಜಧಾನಿಯ ಅಂಗಳಕ್ಕೆ ತಲುಪಿಸುವ ಮಹತ್ವದ ಕಾರ್ಯ ಮಾಡಿರುವ ಅಶೋಕ್ ರೈ ಅವರ ಪ್ರಯತ್ನ ಪುತ್ತೂರಿಗೆ ಹೆಮ್ಮೆ ತರುವಂತಹದು ಎಂದರು.
1 ಲಕ್ಷ ಜನರಿಗೆ ವಸ್ತ್ರದಾನದ ಗುರಿ
ಅಧ್ಯಕ್ಷತೆ ವಹಿಸಿದ್ದ ರೈ ಎಸ್ಟೇಟ್ಸ್ ಎಜುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ರೈ ಮಾತನಾಡಿ, ಟ್ರಸ್ಟ್ ಜಾತಿ, ಧರ್ಮ, ಪಕ್ಷ ಮೀರಿ ಇರುವಂತಹದು. ಹೆತ್ತವರು ಆರಂಭಿಸಿರುವ ಸಂಪ್ರದಾಯವನ್ನು ಟ್ರಸ್ಟ್ ಮೂಲಕ ಮುಂದುವರಿಸಿಕೊಂಡು ಬಂದಿದ್ದೇನೆ. ಈ ಬಾರಿ 60 ಸಾವಿರಕ್ಕೂ ಅಧಿಕ ಮಂದಿಗೆ ವಸ್ತ್ರದಾನ ಮಾಡಿದ್ದು ಮುಂದಿನ ವರ್ಷ 1 ಲಕ್ಷ ಮಂದಿಗೆ ವಸ್ತ್ರ ದಾನ ಮಾಡುವ ಗುರಿ ಹೊಂದಲಾಗಿದೆ ಎಂದರು.
ಸಮ್ಮಾನ
ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತಿಲು, ಶ್ರಮಜೀವಿ ಸಾಧಕರು ಮತ್ತು ಸ್ವಾಭಿಮಾನಿ ಬದುಕು ಕಟ್ಟಿಕೊಂಡ 20 ಮಂದಿಯನ್ನು ಸಮ್ಮಾನಿಸಲಾಯಿತು. ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಪುತ್ತೂರು ಮಾಯಿದೇ ದೇವುಸ್ ಚರ್ಚ್ ಧರ್ಮಗುರು ವಂ ಲಾರೆನ್ಸ್ ಮಸ್ಕರೇನಸ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಧಾರ್ಮಿಕ ಮುಖಂಡ ಹುಸೈನ್ ದಾರಿಮಿ ರೆಂಜಿಲಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೈ ಎಂ.ಬಿ., ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ ರಾಜಾರಾಂ ಕೆ.ಬಿ., ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಬಂಟ್ವಾಳದ ಕಾಂಗ್ರೆಸ್ ಮುಖಂಡ ಬೇಬಿ ಕುಂದರ್, ಸುಧೀರ್ ಕುಮಾರ್ ಶೆಟ್ಟಿ, ಕೆಪಿಸಿಸಿ ಮುಖಂಡ ಡಾ ರಘು, ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ಮಹಮ್ಮದ್, ಟ್ರಸ್ಟ್ ಮುಖ್ಯಸ್ಥೆ ಸುಮಾ ಅಶೋಕ್ ರೈ, ಸುಬ್ರಹ್ಮಣ್ಯ ಸಿ. ರೈ, ಟ್ರಸ್ಟ್ ಮಾಧ್ಯಮ ಮುಖ್ಯಸ್ಥ ಕೃಷ್ಣಪ್ರಸಾದ್ ಬೊಲ್ಲಾವು ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿ, ನಿಹಾಲ್ ರೈ ವಂದಿಸಿದರು. ಕೆಪಿಸಿಸಿ ವಕ್ತಾರ ಮಹಮ್ಮದ್ ಬಡಗನ್ನೂರು ಹಾಗೂ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ನಿರ್ವಹಿಸಿದರು.
600 ವಿಧವೆಯರಿಗೆ ನಿವೇಶನ: ಘೋಷಣೆ
ಟ್ರಸ್ಟ್ ಮೂಲಕ ಈಗಾಗಲೇ 22 ಸಾವಿರ ಕುಟುಂಬಕ್ಕೆ ನೆರವು ನೀಡಲಾಗಿದೆ. ಮುಂದಿನ ದಿನಗಳಲ್ಲಿ 600 ವಿಧವೆಯರಿಗೆ ತಲಾ 3 ಸೆಂಟ್ಸ್ ಜಾಗವನ್ನು ಉಚಿತವಾಗಿ ನೀಡಲಾಗುವುದು ಎಂದು ಅಶೋಕ್ ಕುಮಾರ್ ರೈ ಘೋಷಿಸಿದರು.