ಮೂಲತಃ ಕರ್ನಾಟಕದಿಂದ ಬಂದು ಕರ್ಮ ಭೂಮಿಯಾದ ಈ ಮಹಾರಾಷ್ಟ್ರದಲ್ಲಿ ತನ್ನ ಅಚಲ ಪರಿಶ್ರಮದೊಂದಿಗೆ ಒರ್ವ ಯಶಸ್ವೀ ಉದ್ಯಮಿಯಾಗಿ, ರಾಜಕೀಯ ನೇತಾರನಾಗಿ, ಜನರ ಸುಖ-ದುಖಃಗಳಲ್ಲಿ ಭಾಗಿಯಾಗಿ ಸಮಾಜ ಸೇವೆ ಮಾಡುತ್ತಿರುವ ಅರವಿಂದ್ ಶೆಟ್ಟಿಯವರ ಜೀವನದ ನಡೆ ನುಡಿಯ ಹಾದಿ ಶ್ಲಾಘನೀಯ. ಪರಿವಾರದ ಸದಾ ಪ್ರೋತ್ಸಾಹದಿಂದ ಅರವಿಂದ ಶೆಟ್ಟಿಯವರು ಇಂದು ಯಶಸ್ವೀ ರಾಜಕೀಯ ನೇತಾರನಾಗಿ ಮುಂದುವರಿಯುತ್ತಿರುವುದು ಸಂತೋಷದಾಯಕವಾಗಿದೆ. ದೇವರ ಅನುಗ್ರಹದ ಸಾಕಾರದಿಂದ ಅರವಿಂದ ಶೆಟ್ಟಿಯವರು ಇಂದು ಉನ್ನತ ಸ್ಥಾನಮಾನವನ್ನು ಪಡೆದಿದ್ದಾರೆ. ಅರವಿಂದ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದಲ್ಲಿ ಮಹಾದಾನಿಯಾಗಿದ್ದು ದಾನರೂಪದ ಹಣದಿಂದ ಸಮಾಜದ ಒಳಿತಿಗಾಗಿ ವಿನಿಯೋಗಿಸಲಾಗುತ್ತಿದೆ. ಹೀಗೆ ಉಳ್ಳವರ ಮಹಾದಾನದಿಂದ ಹಿಂದುಳಿದ ವರ್ಗದ ಜನತೆಯ ಶ್ರೇಯೋಭಿವೃದ್ದಿಗಾಗಿ ವಿನಿಯೋಗಿಸಲಾಗುತ್ತಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ನುಡಿದರು.
ಅವರು ಇಲ್ಲಿನ ಕನಕಿಯ ರೋಡ್ ನಲ್ಲಿರುವ ಶೆಹಣಾಯಿ ಸಭಾಗೃಹದಲ್ಲಿ ಮೀರಾ ಭಯಂದರ್ ದಕ್ಷಿಣ ಭಾರತೀಯ ಬಿಜೆಪಿ ಘಟಕ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಆಯೋಜಿಸಿದ ಉದ್ಯಮಿ ಹಾಗೂ ರಾಜಕೀಯ ನೇತಾರ ಅರವಿಂದ್ ಆನಂದ ಶೆಟ್ಟಿಯವರ 51 ನೇ ಜನ್ಮದಿನೋತ್ಸವದ ಪ್ರಯುಕ್ತ ಅದ್ದೂರಿಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಉಳ್ಳವರ ಮಹಾದಾನದಿಂದ ಬಡಬಗ್ಗರ ಸೇವೆಗೈಯ್ಯುವುದು ಪುಣ್ಯದ ಕೆಲಸವಾಗಿದೆ. ಬಡಬಗ್ಗರಿಗೆ ಸರ್ವ ವಿಧದಲ್ಲೂ ಪ್ರೋತ್ಸಾಹಿಸಿ ಅವರನ್ನು ಮೇಲ್ಪಂಕ್ತಿಗೆ ತರುವಲ್ಲಿ ಪ್ರಯತ್ನ ಮಾಡುವ ಕೆಲಸಗಳು ನಡೆಯುತ್ತಿರಬೇಕು. ಇದರಿಂದ ನಮ್ಮ ಆತ್ಮಬಲದ ಸಂತೃಪ್ತಿ ಮಾತ್ರವಲ್ಲದೆ ಸಮಾಜದ ಆಶೀರ್ವಾದ ಪಡೆಯಬಹುದು. ಸದಾ ಸಮಾಜ ಸೇವೆಯನ್ನು ಗೈಯ್ಯುತ್ತಿರುವ ಅರವಿಂದ ಶೆಟ್ಟಿಯವರ ಮುಂದಿನ ಜೀವನ ಯಶಸ್ವೀಯಾಗಲಿ, ದೇವರು ಅರವಿಂದ ಶೆಟ್ಟಿಯವರಿಗೆ ಆಯೂರಾರೋಗ್ಯ ಭಾಗ್ಯ, ಸುಖ, ಸಂಪತ್ತನ್ನು ಸದಾ ಕರುಣಿಸಲಿ ಎಂದು ಜನ್ಮ ದಿನದ ಶುಭಾಶಯಗಳನ್ನು ಕೋರಿದರು.
ಶುಭಾಶಯವನ್ನು ಕೋರಿ ನಗರದ ಮಾಜಿ ಎಂ.ಎಲ್.ಎ. ನರೇಂದ್ರ ಮೆಹ್ತಾರವರು ಮಾತನಾಡುತ್ತಾ, ಜೀವನದಲ್ಲಿ ಸಮಾಜ ಸೇವೆ ಮಾಡುವಲ್ಲಿ ಅವರದ್ದೇ ಆದ ಶೈಲಿ ಇದೆ. ಸಾದ್ಯವಾದಷ್ಟು ಜನಸೇವೆ ಮಾಡುತ್ತಿರಬೇಕು. ಅರವಿಂದ ಶೆಟ್ಟಿಯವರು ನನ್ನ ಬಲು ಅತ್ಮೀಯರು. 51 ರ ವಯಸ್ಸಿನಲ್ಲಿಯೂ ಅವರು ಯುವ ಪ್ರತಿನಿಧಿಯಂತೆ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ನಾವೆಲ್ಲಾ ಬೇರೆ ಬೇರೆ ರಾಜ್ಯಗಳಿಂದ ಬಂದವರಾದರೂ ನಮ್ಮ ಒಳ್ಳೆತನದಿಂದ ಈ ಮಣ್ಣಲ್ಲಿ ಮನ್ನಣೆ ಸಿಗುತ್ತಿರುತ್ತದೆ. ಉತ್ತಮ ಸ್ಥರದಲ್ಲಿ ಸಮಾಜ ಸೇವೆ ಮಾಡುತ್ತಿರುವ ಅರವಿಂದ ಶೆಟ್ಟಿಯವರ ರಾಜಕೀಯ ಭವಿಷ್ಯ ಉತ್ತರೋತ್ತರವಾಗಿ ಉಜ್ವಲವಾಗಲಿ ಎಂದು ಜನ್ಮ ದಿನದ ಶುಭಾಶಯಗಳನ್ನು ಗೈದರು.
ಜನ್ಮ ದಿನದ ಶುಭಾಶಯಗಳನ್ನು ಕೋರಿ ಅರವಿಂದ ಶೆಟ್ಟಿಯವರ ಗುಣಗಾನವನ್ನು ಗೈಯ್ಯುವಲ್ಲಿ ಡಾ. ಎನ್. ಎ. ಹೆಗ್ಡೆ, ಡಾ. ಭಾಸ್ಕರ್ ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ರಂಜನ್ ಶೆಟ್ಟಿ, ಡಾ. ಅರುಣೊದಯ ರೈ ಬಿಳಿಯೂರುಗುತ್ತು, ರತ್ನಾಕರ್ ಶೆಟ್ಟಿ ಮುಂಡ್ಕೂರ್, ಸುಮತಿ ಆರ್. ಶೆಟ್ಟಿ ಸಮಯೋಜಿತವಾಗಿ ಮಾತಾಡಿ ಶುಭಾಶಯಗಳನ್ನು ಹರಸಿದರು.
ಕಟೀಲು ದೇವಳದ ಲಕ್ಷ್ಮಿ ನಾರಾಯಣ ಅಸ್ರಣ್ಣ, ಕಾಶಿಮೀರಾ ಭಾಸ್ಕರ್ ಶೆಟ್ಟಿ, ನಟ ದಯಾ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಪದ್ಮನಾಭ ಪಯ್ಯಡೆ, ಬಳ್ಕುಂಜೆ ಗುತ್ತಿನಾರ್ ಕೊಟ್ರಪಾಡಿ ರವೀಂದ್ರ ಶೆಟ್ಟಿ, ಸಂತೋಷ್ ಪುತ್ರನ್, ಶಿವ್ ಪ್ರಸಾದ್ ಶೆಟ್ಟಿ, ರವೀಂದ್ರ ಶೆಟ್ಟಿ ದಹಿಸರ್ಮಾತ್ರವಲ್ಲದೆ ಪರಿಸರದ ಹಲವಾರು ಸಂಸ್ಥೆಗಳ ಪದಾಧಿಕಾರಿಗಳು, ಮಹಾನಗರ ಪಾಲಿಕೆಯ ಮಾಜಿ ನಗರ ಸೇವಕರು, ರಾಜಕೀಯ ನೇತಾರರು ಸೇರಿದಂತೆ ಜನಸಾಗರವೇ ಅರವಿಂದ ಶೆಟ್ಟಿಯವರಿಗೆ ಶುಭಾಶಯಗಳು ಕೋರಿದರು.
ಪ್ರಾರಂಭದಲ್ಲಿ ಮಕ್ಕಳಿಂದ ನೃತ್ಯ ಕಾರ್ಯಕ್ರಮವು ನಡೆದರೆ, ಗಣ್ಯರ ಸಮ್ಮುಖದಲ್ಲಿ ಹಾಗೂ ಅರವಿಂದ ಶೆಟ್ಟಿಯವರ ಮಾತೋಶ್ರೀ ಬೇಬಿ (ಲಕ್ಷ್ಮೀ) ಎ. ಶೆಟ್ಟಿ, ಧರ್ಮ ಪತ್ನಿ ಪಲ್ಲವಿ ಶೆಟ್ಟಿ ಹಾಗೂ ಪರಿವಾರ ಕೇಕ್ ಕಟ್ ಮಾಡುವ ಮೂಲಕ ಜನ್ಮ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ರಂಗ ನಟ ಜಿ. ಕೆ. ಕೆಂಚನಕೆರೆ ಮತ್ತು ದೇವೆಂದ್ರ ಪೊರ್ವಾಲ್ ರವರು ಜಂಟಿಯಾಗಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಪ್ರೀತಿ ಭೋಜನವನ್ನು ಆಯೋಜಿಸಲಾಗಿತ್ತು.
ವರದಿ, ಚಿತ್ರ :- ವೈ ಟಿ ಶೆಟ್ಟಿ ಹೆಜಮಾಡಿ