ಕನ್ನಡವನ್ನು ಹೆಚ್ಚು ಬಳಕೆ ಮಾಡುವ ಮೂಲಕ ಅದರ ಬೆಳವಣಿಗೆಗೆ ಪಣ ತೊಡಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ. ಇಂದಿರಾ ಹೆಗ್ಡೆ ಹೇಳಿದರು. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶಾರದಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ರಾಜ್ಯೋತ್ಸವ ಸಂದೇಶ ನೀಡಿ, ಭಾಷಾ ವಾತ್ಸಲ್ಯವನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದರು.
ಇದೇ ಸಂದರ್ಭ ಹಿರಿಯ ನಾಟ್ಯಗುರು, ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರಿಗೆ ರಾಜ್ಯೋತ್ಸವ ಗೌರವ ಪ್ರಧಾನ ಮಾಡಿ ಅಭಿನಂದಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಶಾರದಾ ವಿದ್ಯಾಲಯದ ಮುಖ್ಯಸ್ಥ ಪ್ರೊ ಎಂ.ಬಿ ಪುರಾಣಿಕ್, ಕರಾವಳಿ ಲೇಖಕಿ ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಡಾ. ಅಣ್ಣಯ್ಯ ಕುಲಾಲ್, ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಮಾನ್ವಿ, ದುಬೈ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಗೌರವಾಧ್ಯಕ್ಷ ಅಬ್ದುಲ್ಲಾ ಮಾದುಮೂಲೆ, ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ, ಭುವನಾಭಿರಾಮ ಉಡುಪ, ಜನಾರ್ಧನ ಹಂದೆ, ಶ್ರೀಧರ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.
ಮುಂಬಯಿ, ದುಬೈ, ಎರ್ನಾಕುಲಂ, ಬಹರೈನ್ ಮೊದಲಾದೆಡೆಗಳ ಬಾಲ ಪ್ರತಿಭೆ, ಯುವ ಪ್ರತಿಭೆ, ಕನ್ನಡ ಸಂಘಟನೆಗಳಿಗೆ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಯಶ್ರೀ, ಅರವಿಂದ್, ಝೆಂಕಾರ ಬಳಗ, ರಜನಿ ಶೆಣೈ, ಶಾರದಾ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಕನ್ನಡ ಗೀತ ಗಾಯನ ನಡೆಸಿಕೊಟ್ಟರು. ಉಮೇಶ್ ಕೆ. ಆರ್, ಪೂರ್ಣಿಮಾ ರಾವ್ ಪೇಜಾವರ, ದಯಾನಂದ ಕಟೀಲು ಮೊದಲಾದವರು ಸಹಕರಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲ ಪ್ರಕಾಶ್ ನಾಯಕ್ ವಂದಿಸಿದರು.