ಇಂದಿನ ಹೆಸರುವಾಸಿ ಕಲಾವಿದರ ಹಿಂದೆ ಒಂದು ದಿನ ಕಳೆಯುವುದು ಕಷ್ಟ ಎಂಬ ಪರಿಸ್ಥಿತಿಯಿತ್ತು. ಯಕ್ಷಗಾನ ಕ್ಷೇತ್ರದಲ್ಲಿ 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ. ಕಲಾವಿದರ ಕಷ್ಟವನ್ನು ಬಹಳ ಹತ್ತಿರದಿಂದ ಗಮನಿಸಿದವ ನಾನು. ಕಲಾವಿದರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಲಾಯಿತು. ಟ್ರಸ್ಟ್ ನ ಕಾರ್ಯವೈಖರಿಯಲ್ಲಿ ನಾನು ಕೇವಲ ನಿಮಿತ್ತ. ಎಲ್ಲವೂ ಕಟೀಲು ಅಮ್ಮನವರ ಕೃಪೆ. ಹೃದಯ ಶ್ರೀಮಂತ ದಾನಿಗಳಿಂದ ನಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾಸೇವೆಯಲ್ಲಿ ಮುಂದುವರಿಯುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಅಭಿಪ್ರಾಯಪಟ್ಟರು. ಅವರು ನವೆಂಬರ್ 2 ರಂದು ಗೋವಾ ಪಣಜಿ ಇನ್ಸ್ಟಿಟ್ಯೂಟ್ ಮೆನೇಜಸ್ ಬ್ರಗಾನ್ಸ ಸಭಾಗೃಹದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಗೋವಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಯಕ್ಷಗಾನ ನಮ್ಮ ಕರಾವಳಿಗೆ ದೇವರು ನೀಡಿದ ಕಾಣಿಕೆ. ಯಕ್ಷಗಾನ ಸಂಸ್ಕಾರವನ್ನು ಕಲಿಸುತ್ತವೆ. ಇದು ಒಳಿತು ಕೆಡುಕಿನ ಅರಿವನ್ನು ಜನರಿಗೆ ಬೋಧಿಸುತ್ತವೆ. ಯಕ್ಷಗಾನ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಘನತೆಯನ್ನು ಹೆಚ್ಚಿಸುತ್ತವೆ ಎಂಬುದಕ್ಕೆ ಪಟ್ಲ ಫೌಂಡೇಶನ್ ಕಾರ್ಯಕ್ರಮಗಳೇ ಸಾಕ್ಷಿ.
ಕಂಬಳ ಕ್ಷೇತ್ರದ ಸಾಧನೆಗಾಗಿ ಸದಾನಂದ ಶೆಟ್ಟಿ ಬೆಳುವಾಯಿ ಹಾಗೂ ಅಶೋಕ್ ಶೆಟ್ಟಿ ಬೇಲಾಡಿ, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಜಯೇಶ್ ಶೆಟ್ಟಿ, ರಾಕೇಶ್ ಶೆಟ್ಟಿ ಮೇಘರವಳ್ಳಿ, ಸತೀಶ್ ಶೆಟ್ಟಿ ಪಟ್ಲ ಹಾಗೂ ಶಶಿಧರ್ ಶೆಟ್ಟಿ ಬರೋಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗೋವಾ ಘಟಕದಿಂದ ಪಟ್ಲ ಫೌಂಡೇಶನ್ ನ ಕೇಂದ್ರ ಘಟಕಕ್ಕೆ 1 ಲಕ್ಷ ರೂ. ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಗೋವಾ ಘಟಕದ ಗೌರವಾಧ್ಯಕ್ಷ ವಿಜಯೇಂದ್ರ ಶೆಟ್ಟಿ ಹಾಗೂ ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರು ದಂಪತಿಗಳನ್ನು ಅಭಿನಂದಿಸಲಾಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಸಂಚಾಲಕ, ತುಳುಕೂಟ ಬರೋಡದ ಅಧ್ಯಕ್ಷ ಶಶಿಧರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಘಟಕದ ಅಧ್ಯಕ್ಷ ತಾರಾನಾಥ್ ಶೆಟ್ಟಿ ಬೋಳಾರ್, ಗುಜರಾತ್ ಘಟಕದ ಅಧ್ಯಕ್ಷ ಅಜಿತ್ ಶೆಟ್ಟಿ, ಗೋವಾ ಬಂಟರ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್, ಉದ್ಯಮಿ ಸಮಾಜಸೇವಕ ಸುರೇಂದ್ರ ಶೆಟ್ಟಿ, ಸುದೇಶ್ ಕುಮಾರ್ ರೈ, ರವಿಚಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಪಳ್ಳಿ ಘಟಕದ ಸುನಿಲ್ ಶೆಟ್ಟಿ, ರಾಜೇಶ್ ಶೆಟ್ಟಿ, ಸುಭಾಷ್ ರೈ, ಮೋಹನ್ ದಾಸ್ ಶೆಟ್ಟಿ, ಸಂಚಾಲಕ ಅಶೋಕ್ ಶೆಟ್ಟಿ, ಕದ್ರಿ ನವನೀತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಆನಂದ್ ಶೆಟ್ಟಿ ಬಳಗದವರು ಪ್ರಾರ್ಥಿಸಿದರು. ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರು ಸ್ವಾಗತಿಸಿ, ಪುರುಷೋತ್ತಮ ಭಂಡಾರಿ ಪ್ರಾಸ್ತವಿಕವಾಗಿ ಮಾತನಾಡಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿ, ವಂದಿಸಿದರು