ಜ್ಞಾನ ಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ದಿನಾಂಕ 1.11.2023 ರಂದು 68ನೇ ಕರ್ನಾಟಕ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಮೈಸೂರು ರಾಜ್ಯವು (ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡ ಹಬ್ಬವನ್ನಾಗಿ ಆಚರಿಸುತ್ತಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಧ್ವಜಾರೋಹಣವನ್ನು ನೆರವೇರಿಸಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವುದರ ಮುಖಾಂತರ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸುಧಾಕರ ಎಸ್ ಶೆಟ್ಟಿಯವರು ಕರ್ನಾಟಕ ರಾಜ್ಯೋತ್ಸವವನ್ನು ಕುರಿತು ಮಾತನಾಡಿದರು.
ಸ್ವತಃ ಹೆತ್ತ ತಾಯಿ ಮತ್ತು ನಾಡಿನ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿರುವ ಸುಧಾಕರ ಶೆಟ್ಟಿ ಅವರು ಕನ್ನಡ ನಾಡು, ನುಡಿ, ಆಚಾರ, ವಿಚಾರಗಳ ಬಗ್ಗೆ ಮಾತನಾಡುತ್ತಾ ರಾಷ್ಟ್ರವನ್ನು ಮೊದಲು ಆಳ್ವಿಕೆ ಮಾಡಿದ ಮನೆತನದ ಬಗ್ಗೆ ತಿಳಿಸುತ್ತಾ, ಪ್ರತಿಯೊಬ್ಬ ಕನ್ನಡಿಗನು ನಮ್ಮ ನಾಡು, ನುಡಿಯ ಬಗ್ಗೆ ಹೆಮ್ಮೆ ಮತ್ತು ಪ್ರೀತಿಯನ್ನು ಹೊಂದಿರಬೇಕು ಎಂದು ತಿಳಿಸಿದರು. ನಂತರ ಬೇರೆ ಭಾಷೆಗಳ ಬಗ್ಗೆ ಮಾತನಾಡುತ್ತಾ ಪ್ರತಿಯೊಂದು ಭಾಷೆಯೂ ಸಮಾಜದಲ್ಲಿ ಜೀವಿಸಲು ಅವಶ್ಯಕ. ಆಂಗ್ಲ ಭಾಷೆ ಎಂಬುದು ಸಂವಹನ ಭಾಷೆಯಾದರೆ, ನಮ್ಮ ಕನ್ನಡ ಭಾಷೆ ಸಂಬಂಧಗಳನ್ನು ಬೆಸೆಯುವ ಮತ್ತು ನಮ್ಮ ಸಂಸ್ಕಾರವನ್ನು ತಿಳಿಸುವ ಭಾಷೆಯಾಗಿದ್ದು, ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಗೌರವದಿಂದ ಕಾಣಬೇಕು. ಹಾಗೆಯೇ ನಮ್ಮ ದೇಶದ ಬಗ್ಗೆ ಹೆಮ್ಮೆಪಡುತ್ತಾ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಕಲಿತು ಕನ್ನಡಕ್ಕೆ ಗೌರವವನ್ನು ಸೂಚಿಸಬೇಕು ಎಂದು ತಿಳಿಸಿದರು. ಇದರಿಂದ ಅವರ ದೇಶ ಪ್ರೇಮ ಮತ್ತು ಭಾಷೆಯ ಪ್ರೇಮ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗುವ ರೀತಿಯಲ್ಲಿ ಇದ್ದಿತು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಯವರಾದ ಶ್ರೀಮತಿ ಸುಖಲತಾ ಶೆಟ್ಟಿ, ಆಡಳಿತಾಧಿಕಾರಿಗಳಾದ ಶ್ರೀ ಮುಕುಂದ, ಪ್ರಾಂಶುಪಾಲರಾದ ಶಾಂತಿನಿ ಜೆರಾಲ್ಡ್ ಅವರು ಉಪಸ್ಥಿತರಿದ್ದರು.