ಜ್ಞಾನ ಸರೋವರ ಅಂತರರಾಷ್ಟ್ರೀಯ ವಸತಿ ಶಾಲೆಯಲ್ಲಿ ದಿನಾಂಕ 02.10. 2023 ರಂದು ಗಾಂಧೀಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ FKCCI ನ ಮಾಜಿ ಅಧ್ಯಕ್ಷರಾದ ಶ್ರೀ ಸುಧಾಕರ ಎಸ್ ಶೆಟ್ಟಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಅಹಿಂಸೆ ಎನ್ನುವ ಮಂತ್ರವನ್ನು ಹಿಡಿದು ಜಗತ್ತಿಗೆ ಅದರ ಮಹತ್ವವನ್ನು ಸಾರಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿ ಅವರದು ಅಭೂತಪೂರ್ವ ವ್ಯಕ್ತಿತ್ವ.
ಅವರು ನಮ್ಮ ದೇಶದಲ್ಲಿ ಜನಿಸಿದ್ದು ನಮ್ಮ ಪುಣ್ಯ ಎಂದು ಹೇಳಿದರು. ನಮ್ಮ ಮಕ್ಕಳು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನ್ ವ್ಯಕ್ತಿಗಳನ್ನು ಪ್ರತಿದಿನವೂ ಸ್ಮರಿಸಬೇಕು ಹಾಗೂ ಸ್ವಾತಂತ್ರ್ಯ ನಾಯಕರನ್ನು ಕುರಿತು ಬರೆದಿರುವ ಪುಸ್ತಕಗಳನ್ನು ಹೆಚ್ಚು ಓದುವುದರ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿ ಕೊಳ್ಳಬೇಕು ಎಂದರು .
ಜೀವನದಲ್ಲಿ ಎಲ್ಲರು ತಪ್ಪುಗಳನ್ನು ಮಾಡುತ್ತಾರೆ . ಆದರೆ ಆ ತಪ್ಪುಗಳನ್ನು ಪುನರಾವರ್ತನೆ ಮಾಡದೆ, ಅಲ್ಲಿಯೇ ಅದನ್ನು ತಿದ್ದಿಕೊಳ್ಳಬೇಕು ಎಂದರು. ದೇಶದ ಸ್ವಾತಂತ್ರಕ್ಕಾಗಿ, ಗಾಂಧೀಜಿ, ನೆಹರು,ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಹೀಗೆ ಹಲವಾರು ನಾಯಕರು ತಮ್ಮ ಜೀವನವನ್ನೇ ಅರ್ಪಣೆ ಮಾಡಿದ್ದಾರೆ. ಅವರ ಹೋರಾಟದ ಬಗ್ಗೆ ಮಕ್ಕಳಿಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಶಿಕ್ಷಕರು ಒದಗಿಸಿಕೊಡಬೇಕು. ಹಾಗೆಯೇ ಜೈ ಜವಾನ್ ಜೈ ಕಿಸಾನ್ ಎಂದು ಸಾರಿದ ಭಾರತದ ಎರಡನೇ ಪ್ರಧಾನ ಮಂತ್ರಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆಯೂ ಹೆಚ್ಚಿನ ಮಾಹಿತಿಯನ್ನು ನೀಡಿದರು.
ಸತ್ಯ ಎಂಬುದು ಒಂದು ಆಯುಧವಿದ್ದಂತೆ. ಈ ಆಯುಧ ಮನುಷ್ಯನ ಬಳಿ ಇದ್ದರೆ, ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಶಾಲೆಯಲ್ಲಿಯೂ ಸಹ ಮಕ್ಕಳಿಗೆ ಪ್ರಬಂಧ ರಚನೆ ,ಆಶುಭಾಷಣ ಸ್ಪರ್ಧೆಗಳನ್ನು ಆಯೋಜಿಸುವುದರ ಮೂಲಕ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಬೇಕು ಎಂದರು.
ಒಟ್ಟಾರೆ ಗಾಂಧೀಜಿಯವರ ಜೀವನದ ಮೂಲ ಅಂಶಗಳಾದ ಸತ್ಯ, ಪರಿಶ್ರಮ, ಸರಳತೆ, ಅಹಿಂಸೆ ,ಸತ್ಯಾಗ್ರಹ ಈ ವಿಚಾರಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರನ್ನು ಕುರಿತಂತೆ ಮೂಡಿಬಂದ ಕಿರುನಾಟಕ, ನೃತ್ಯ ಹಾಗೂ ಹಾಡುಗಳು ನಮ್ಮಲ್ಲಿ ದೇಶಭಕ್ತಿಯನ್ನು ಇಮ್ಮಡಿಸುವಂತಿತ್ತು. ಹಾಗೆಯೇ ಶಾಲೆಯಲ್ಲಿ ಸ್ವಚ್ಛತಾ ಆಂದೋಲನ ವನ್ನು ಸಹ ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಖಲತ ಎಸ್ ಶೆಟ್ಟಿ, ಆಡಳಿತ ಅಧಿಕಾರಿಗಳಾದ ಶ್ರೀ ಮುಕುಂದ್, ಪ್ರಾಂಶುಪಾಲರಾದ ಶ್ರೀಮತಿ ಶಾಂತಿನಿ ಜರಾಲ್ಡ್, ಉಪ ಪ್ರಾಂಶುಪಾಲರಾದ ದೊಡ್ಡಬಸಪ್ಪನವರು ಉಪಸ್ಥಿತರಿದ್ದರು.