ಪ್ರೀತಿಯ ಸಮಾಜ ಬಾಂಧವರೆ, ನಮ್ಮ ಸಮಾಜದ ಬಗ್ಗೆ ನಮಗೆಲ್ಲರಿಗೂ ಅಭಿಮಾನ ಹೆಮ್ಮೆ ಇದೆ. ಇದು ನಿಜವಾಗಲೂ ಇರಬೇಕು. ಯಾಕೆಂದರೆ ನಮ್ಮ ಸಮಾಜದಲ್ಲಿ ಹುಟ್ಟಿ ಬೆಳೆದವರು ನಾವು ದುಡಿದು ತಿನ್ನಬೇಕು. ಬೇರೆಯವರಿಗೂ ನೀಡಬೇಕು ಅನ್ನುವ ಮನೋಭಾವನೆ ಇರಬೇಕು ಮತ್ತು ಯಾರಿಗೂ ಕಡಿಮೆ ಇಲ್ಲದಂತೆ ಬದುಕಬೇಕು. ಯಾರೊಂದಿಗೂ ಬೇಡಬಾರದು. ಎಲ್ಲರಿಗೂ ತನ್ನಿಂದಾದ ಸಹಾಯ ಮಾಡಬೇಕು. ಇದು ನಮ್ಮ ಬಂಟ ಸಮಾಜದ ಹೆಗ್ಗುರುತು.
ಇಂದು ಜಗತ್ತಿನಾದ್ಯಂತ ನಮ್ಮ ಸಮಾಜಕ್ಕೆ ಕೊಡುವ ಗೌರವ, ಪ್ರತಿಷ್ಠೆ, ಮುಂದಾಳತ್ವ ನೋಡಿದರೆ ತುಂಬಾ ಹೆಮ್ಮೆ ಅನಿಸುತ್ತದೆ. ಒಂದು ಸಮಾಜ ಕಟ್ಟುವುದು, ಬೆಳೆಸುವುದು ಆ ಸಮಾಜದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ನಮ್ಮನ್ನು ಈ ಮಟ್ಟಕ್ಕೆ ಏರಿಸಿದೆ ಅಂದರೆ ಖಂಡಿತಾ ತಪ್ಪಾಗಲಾರದು. ಹಿಂದೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವು ಕಡಿಮೆ ಸಂಖ್ಯೆಯಲ್ಲಿ ಇದ್ದೆವು. ಹೆಚ್ಚಿನ ಬಂಟರು ಜಮೀನ್ದಾರರಾಗಿದ್ದರು. ಆದರೆ ಭೂ ಮಸೂದೆ ಕಾನೂನಿನಲ್ಲಿ ಉಳುವವನೆ ಹೊಲದೊಡೆಯ ಅನ್ನುವ ಕಾನೂನು ನಮ್ಮಲ್ಲಿ ಕೆಲವರನ್ನು ನಿರ್ಗತಿಕರನ್ನಾಗಿ ಮಾಡಿತು. ಆದರೆ ನಮ್ಮ ಬಂಟ ಸಮುದಾಯ ಇದನ್ನು ಸವಾಲಾಗಿ ಸ್ವೀಕರಿಸಿ ಊರು ಬಿಟ್ಟು ಎಲ್ಲಾ ತರಹದ ದುಡಿಮೆ ಮಾಡಿ ನಾವು ಹೋದ ಕಡೆ ನಾವು ಬಂಟರು ಅಂತಾ ತೋರಿಸಿಕೊಟ್ಟರು. ನಾವು ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಊರಿನಲ್ಲಿ ಮುಂದಾಳತ್ವದಲ್ಲಿ ಮುಂದೆ ಇದ್ದೆವು. ಯಾಕೆಂದರೆ ನಾವು ಬಂಟರು ಯಾವುದಕ್ಕೂ ಹೆದರುವವರಲ್ಲ ಮತ್ತು ನ್ಯಾಯ, ನೀತಿ, ಧರ್ಮ ಬಿಟ್ಟು ಕೊಟ್ಟವರಲ್ಲ. ಇಂದಿಗೂ ಈ ನೀತಿ ನಮ್ಮನ್ನು ಕಾಯುತ್ತಿದೆ.
ಶ್ರೀಕೃಷ್ಣನ ಉಪದೇಶದಂತೆ ಧರ್ಮವನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ನಮ್ಮ ಹಿರಿಯರು ನಮಗೆ ಬೋಧಿಸಿದರು. ನಾವು ಬಂಟರು, ಶೆಟ್ಟರು, ನಾಡವರು ಊರಿನಲ್ಲಿ ಇರುವ ನೂರಕ್ಕೆ ತೊಂಬತ್ತರಷ್ಟು ದೇವಸ್ಥಾನ, ದೈವಸ್ಥಾನ, ಗರಡಿ, ಪಂಜುರ್ಲಿ, ಚಿಕ್ಕಮ್ಮ, ದೇವಸ್ಥಾನಕ್ಕೆ ನಮ್ಮ ಸಮಾಜದವರರೇ ಮುಖ್ಯಸ್ಥರಾಗಿರುತ್ತಾರೆ. ದೊಡ್ಡಮನೆ, ಗುತ್ತಿಗೆಮನೆ, ಕಂಬಳಗದ್ದೆಮನೆ ಹೀಗೆ ಹಲವು ತರದ ಹೆಸರಿನಿಂದ ನಮ್ಮವರು ಗುರುತಿಸಿಕೊಂಡಿದ್ದಾರೆ. ಹೀಗೆ ಸಮಾಜದಲ್ಲಿ ಮುಂದಾಳತ್ವ ವಹಿಸಿ ಆ ದಿನ ಗುಣ ನಡತೆಯನ್ನು ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ನೀಡಿದರು. ನಾವು ಅದನ್ನು ಮೈಗೂಡಿಸಿಕೊಂಡವರು. ಎಲ್ಲಿ ಹೋದರೂ ಹೋದ ಕಡೆ ಯಶಸ್ವಿಯಾಗಿ ದುಡಿದು ಮುಂದೆ ನಿಂತು ನಮ್ಮ ಜೊತೆಗಿದ್ದು, ಇತರ ಸಮಾಜಕ್ಕೂ ಮಾರ್ಗದರ್ಶನ ಮಾಡುವ ಒಳ್ಳೆಯ ಗುಣ ನಡತೆಯನ್ನು ಬೆಳೆಸಿಕೊಂಡು ಬಂದಿದ್ದರಿಂದ, ಪ್ರಸಕ್ತ ರಾಜಕೀಯ ಮುಖಂಡರಾದಿಯಾಗಿ ಬಂಟರು ಇದ್ದರೆ ನಮಗೆ ತುಂಬಾ ಧೈರ್ಯ ಎಂಬುದಾಗಿ ನಮ್ಮನ್ನು ಹೋಗಳುತ್ತಾರೆ. ಅದಕ್ಕೆ ನಾವು ಉಬ್ಬಿಹೋಗದೆ, ಕುಗ್ಗದೆ ನಮ್ಮ ಸಮಾಜಕ್ಕೆ ಸಿಗಬಹುದಾದ ರಾಜಕೀಯ ಮುಖಂಡತ್ವ ನಮ್ಮ ಸಮಾಜದಲ್ಲಿ ಇರುವ ಅತ್ಯಂತ ಅರ್ಹ ವ್ಯಕ್ತಿಗಳಿಗೆ ಸಿಗಬೇಕಾದ ಸೌಲಭ್ಯದ ಬಗ್ಗೆ ಗಟ್ಟಿ ದನಿಯಾಗಬೇಕು.
ಮೀಸಲಾತಿಯಲ್ಲಿ ನಮ್ಮನ್ನು 2ನೇ ವರ್ಗಕ್ಕೆ ಸೇರಿಸಲು ಶ್ರಮಪಡಬೇಕು. ನಮ್ಮಲ್ಲಿ ಕೆಲವರಿಗೆ ತುಂಬಾ ಉಬ್ಬಿಸಿ ಹೊಗಳಿದರೆ ತುಂಬಾ ಉಬ್ಬುತ್ತಾರೆ. ಅದು ಸರಿಯಾದುದಲ್ಲ. ಉಬ್ಬಿಸಿದರೆ ಉಬ್ಬದೆ ತೆಗಳಿದರೆ ಇಳಿಯದೆ ಯಥಾಸ್ಥಿತಿ ಸ್ಥಿತಪ್ರಚ್ಛೆಯಿಂದ ಕೆಲಸ ಮಾಡಬೇಕು. ನಾವು ಎಷ್ಟೇ ಮೇಲೇರಿದರೂ ನಾವು ಬಂದ ದಾರಿ ತಿರುಗಿ ನೋಡುತ್ತಿದ್ದರೆ ಖಂಡಿತ ನಾವು ಸೋಲುವುದಿಲ್ಲ. ಆದ್ದರಿಂದ ನಮ್ಮಿಂದ ಕೆಳಗಿನವರನ್ನು ಯಾವಾಗಲೂ ಗೌರವದಿಂದ ನೋಡಬೇಕು. ಅವರಿಗೆ ನಮ್ಮಿಂದಾದ ಸಹಾಯ ಮಾಡಬೇಕು. ಇದು ಮನುಷ್ಯ ಧರ್ಮ. ಬಸವಣ್ಣ ನುಡಿದಂತೆ “ಕಳಬೇಡ, ಕೊಲಬೇಡ. ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ನಿನ್ನ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ.
ಇನ್ನು ನಮ್ಮಲ್ಲಿ ಕೆಲವರಿಗೆ ತುಂಬಾ ಮಾತನಾಡುವ ಚಪಲ. ನಾನು ಏನು ಮಾತನಾಡುತ್ತಿದ್ದೇನೆ. ಆ ಮಾತಿನಂತೆ ನಾನು ಜೀವನದಲ್ಲಿ ನಡೆದುಕೊಂಡು ಬಂದಿದ್ದೇನೆಯೇ, ನಾನೇ ಅದನ್ನು ಪಾಲಿಸಿಕೊಂಡು ಬಂದಿಲ್ಲವಾದರೆ ಬೇರೆಯವರಿಗೆ ಹೇಳಿ ಭಾಷಣ ಮಾಡುವ ಹಕ್ಕು ನನಗಿಲ್ಲಾ ಅಂತಾ ತಿಳಿದಿರಬೇಕು. ಆಡುವುದೊಂದು, ಮಾಡುವುದೊಂದು, ಇದು ನೀತಿ ನಿಯಮವಲ್ಲಾ. ನುಡಿದಂತೆ ನಡೆ, ನಡೆದಂತೆ ನುಡಿ, ಕಾಯಕವೇ ಕೈಲಾಸ ಅಂತಾ ಬಸವಣ್ಣ ಹೇಳಿದರು. ಇನ್ನು ದಾನ, ಧರ್ಮ ಮಾಡುವಾಗ ದಾನ ತೆಗೆದುಕೊಳ್ಳುವ ಅರ್ಹತೆ ಇದ್ದವರಿಗೆ ದಾನ ಮಾಡಿ. ನಾವು ಕಷ್ಟ ಪಟ್ಟು ದುಡಿದ ಹಣ ವ್ಯರ್ಥವಾಗಿ ಹೋಗಬಾರದು. ನೀವು ಕೊಟ್ಟ ಹಣ ಕಷ್ಟದಲ್ಲಿ ಇರುವವರಿಗೆ, ಅನಾಥರಿಗೆ, ಅಂಗವಿಕಲರಿಗೆ, ಬಡ ವಿದ್ಯಾರ್ಥಿಗಳಿಗೆ, ಇನ್ನು ಅನಾರೋಗ್ಯ ಪೀಡಿತರಿಗೆ, ಮನೆ ಇಲ್ಲದವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ದಾನ, ಧರ್ಮ ಮಾಡಿ. ಮಾಡಿದ ದಾನ ತೋರಿಸಿಕೊಳ್ಳಬೇಡಿ. ನೀವು ಮಾಡಿದ ದಾನ ಧರ್ಮ ನಿಮ್ಮ ಮನಸ್ಸಿಗೆ ಸಂತೋಷ ಕೊಟ್ಟರೆ ಅದೇ ದೊಡ್ಡ ಪುಣ್ಯ.
ಹುಬ್ಬಳ್ಳಿ ಧಾರವಾಡ ಸಂಘದಲ್ಲಿ ಜನವರಿ 13ರಿಂದ 16ನೇ ತಾರೀಕಿನವರೆಗೆ ಪ್ರಸನ್ನ ಮಹಾಗಣಪತಿ ಬ್ರಹ್ಮಕಲಶೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು. ಇದಕ್ಕೆ ಕಾರಣೀಕರ್ತರಾದ ಅಧ್ಯಕ್ಷ ಸುಗ್ಗಿ ಸುಧಾಕರ್ ಶೆಟ್ಟಿ, ಕಾರ್ಯದರ್ಶಿ ಕುಡ್ಲ ಸತೀಶ್ ಶೆಟ್ಟಿ, ಸಮರ್ಥ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಯುವಕ – ಯುವತಿಯರು, ಮಹಿಳೆಯರು, ಸಮಾಜ ಬಂಧುಗಳು ಎಲ್ಲರೂ ಸೇರಿ ಹಿರಿಯರ ಮಾರ್ಗದರ್ಶನದಲ್ಲಿ ತುಂಬಾ ಯಶಸ್ವಿಯಾಗಿ ನೆರವೇರಿಸಿದರು. ಇನ್ನು ಇದರಲ್ಲಿ ಇತರ ಸಮಾಜದ ಗಣ್ಯರು ಮಹಿಳೆಯರು, ಮಕ್ಕಳು ತುಂಬಾ ಉತ್ಸಾಹದಿಂದ ಭಾಗವಹಿಸಿದ್ದಾರೆ. ಇದನ್ನು ಎಲ್ಲರೂ ಸೇರಿ ನಮ್ಮ ಮೈಸೂರು ದಸರಾದಂತೆ ವೈಭವವಾಗಿ 4 ದಿನ ನಡೆಸಿಕೊಟ್ಟಿರುತ್ತಾರೆ. ನಾಡಿನ ದೊರೆಯಿಂದ ಹಿಡಿದು ಮಠದ ಸ್ವಾಮೀಜಿಗಳು, ಅತಿ ಗಣ್ಯರು, ಹಾಸ್ಯಪಟುಗಳು, ವಾಗ್ಮಿಗಳು, ಉಪನ್ಯಾಸಕರು ಭಾಗವಹಿಸಿ ತುಂಬಾ ಮೆರುಗನ್ನು ನೀಡಿದರು. ಇನ್ನು ನಮ್ಮ ಮಂದಾರ್ತಿ ದೇವಿ ಮಹಾತ್ಮೆ ಯಕ್ಷಗಾನ ಪ್ರಥಮ ಬಾರಿ ಹುಬ್ಬಳ್ಳಿಗೆ ಬಂದು ಯಕ್ಷಗಾನ ಆಡಿ ತೋರಿಸಿದರು. ಈ ಕಲಾ ಸಂಸ್ಕೃತಿಯನ್ನು ನಮ್ಮ ಸಮಾಜವಲ್ಲದೇ ಹುಬ್ಬಳ್ಳಿ ಧಾರವಾಡದ ಅನೇಕ ಸಮಾಜದವರು ವೀಕ್ಷಿಸಿ ಮೆಚ್ಚಿಕೊಂಡಿರುತ್ತಾರೆ. ಇವರೆಲ್ಲರಿಗೂ ನಮ್ಮ ಧನ್ಯವಾದಗಳು.