“ಮನೋರಂಜನೆ ಜತೆಗೆ ಮನೋವಿಕಸನ ಮಾಡುವ ಮತ್ತು ಮಕ್ಕಳ ಬದುಕಿನ ಸ್ಫೂರ್ತಿ ನೀಡುವ ಸಿನಿಮಾಗಳ ಅಗತ್ಯ ಇದೆ. ಈ ಪೈಕಿ ಬನ್ – ಟೀ ಚಲನಚಿತ್ರ ಸಮಾಜ ಮುಖಿ ಚಿಂತನೆಗೆ ಹಚ್ಚುವ ಪ್ರಯತ್ನವಾಗಿ ನಿರ್ಮಿಸಿರುವುದು ಶ್ಲಾಘನೀಯ” ಎಂದು ಹಿರಿಯ ಪತ್ರಕರ್ತ ಯು. ಕೆ. ಕುಮಾರನಾಥ್ ಹೇಳಿದರು. ನಗರದ ನಕ್ಸಲ್ ಮಾಲ್ ನ ಪಿವಿಆರ್ ಮಲ್ಟಿಫ್ಲೆಕ್ಸ್ ನಲ್ಲಿ ಶುಕ್ರವಾರ ಡಾ. ನಾಗತಿಹಳ್ಳಿ ಚಂದ್ರಶೇಖರ್ ಪ್ರಸ್ತುತಿಯ ಉದಯ್ ಕುಮಾರ್ ಪಿ. ಎಸ್. ನಿರ್ದೇಶನದ ಬನ್ – ಟೀ ಕನ್ನಡ ಚಲನಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಹಿರಿಯ ಕಲಾವಿದ ಕದ್ರಿ ನವನೀತ ಶೆಟ್ಟಿ ಮಾತನಾಡಿ, “ಇಂದಿನ ಯುವ ಪೀಳಿಗೆಗೆ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆಯ ಸಂದೇಶ ನೀಡಬಲ್ಲ ಬನ್ – ಟೀ ಎಂಬ ಮೌಲ್ಯಯುತ ಸಿನಿಮಾದಲ್ಲಿ ಮಂಗಳೂರಿನ ಬಾಲನಟ ತನ್ಮಯ್ ಶೆಟ್ಟಿ ಅಭಿನಯಿಸಿರುವುದು ಕರಾವಳಿಗರಿಗೆ ಹೆಮ್ಮೆಯ ವಿಷಯ” ಎಂದರು. ಈ ಸಂದರ್ಭ ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ವಿಜಯ ಕರ್ನಾಟಕ ರೆಸ್ಪಾನ್ಸ್ ವಿಭಾಗದ ಎಜಿಎಂ ರಾಮಕೃಷ್ಣ ಡಿ, ಉದ್ಯಮಿಗಳಾದ ಅಶ್ವತ್ಥಾಮ ಹೆಗ್ಡೆ, ಪ್ರಥಮ್ ಭಂಡಾರಿ, ವಾಲ್ಟರ್ ನೊರೊನ್ಹಾ, ರಘುನಾಥ್ ಶೆಟ್ಟಿ, ಬಾಲನಟ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿ ತನ್ಮಯ್ ಶೆಟ್ಟಿ ಮತ್ತು ಅವರ ಹೆತ್ತವರಾದ ಬಿ. ರವೀಂದ್ರ ಶೆಟ್ಟಿ ಹಾಗೂ ಸುಚಿತ್ರಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಡಾ. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.