ಹರ್ಯಾಣ ಛೋಟು ರಾಮ್ ನಗರದ ಕಾಳಿದಾಸ್ ಧಾಮ ಸಂಪ್ಲಾ ಆಶ್ರಮದ ಸಿದ್ಧಯೋಗಿ ಗುರುದೇವ್ ಬಾಬಾ ಕಾಳಿದಾಸ್ ಮಹಾರಾಜ್ ಶಿವಭಕ್ತಿ ಬಾಬಾ ಅವರು ಕಳೆದ ಮಂಗಳವಾರ ಶ್ರೀ ಗಣೇಶ ಚತುರ್ಥಿ ಶುಭ ದಿನದಂದು ಮುಂಬಯಿಗೆ ಚರಣಸ್ಪರ್ಶಗೈದರು. ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾದರ್ಪಣೆಗೈದ ಬಾಬಾ ಅವರನ್ನು ಮುಂಬಯಿ ಬಿಜೆಪಿ ದಕ್ಷಿಣ ಭಾರತೀಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಎಸ್. ಶೆಟ್ಟಿ (ಪಣಕಜೆ ಬೆಳ್ತಂಗಡಿ) ಪುಷ್ಪ ಮಾಲೆಯನ್ನಿತ್ತು ಭಕ್ತಿ ಪೂರ್ವಕವಾಗಿ ಬೃಹನ್ಮುಂಬಯಿಗೆ ಬರಮಾಡಿಕೊಂಡರು.
ಬಳಿಕ ಬಾಬಾ ಅವರು ವಿಜಯ್ ಶೆಟ್ಟಿ ಅವರ ಮಾಲಿಕತ್ವದ ವಿಮಾನ ನಿಲ್ದಾಣದ ಟರ್ಮಿನಲ್ ಒಂದರ ಬಾಬಾಸ್ ಹಾಸ್ಪಿಟಾಲಿಟಿ ಆಂಡ್ ಫುಡ್ ಸರ್ವಿಸಸ್ ಸಂಸ್ಥೆಗೆ ಭೇಟಿಯನ್ನಿತ್ತು ಆಶೀರ್ವಾಚನ ನೀಡಿದರು.
ಬಾಬಾಜೀ ಬಳಿಕ ಪ್ರಭಾದೇವಿ ಅಲ್ಲಿನ ಶ್ರೀ ಸಿದ್ಧಿವಿನಾಯಕ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆಗೈದರು. ಬಳಿಕ ಲಾಲ್ ಬಾಗ್ ಕಾ ರಾಜಾ, ಕಿಂಗ್ ಸರ್ಕಲ್ ಅಲ್ಲಿನ ಜಿಎಸ್ ಬಿ ಗಣಪತಿ ಮಂಡಲಗಳಿಗೆ ಭೇಟಿಯನ್ನಿತ್ತು ದೇವರ ದರ್ಶನಗೈದರು. ಬಾಬಾ ಅವರ ಆಗಮನದ ವೇಳೆ ಬಿಜೆಪಿ ಧುರೀಣರುಗಳಾದ ವಿನೋದ್ ಶೆಲ್ಹಾರ್, ಶಾಸಕ ಮೋಹನ್ ದೊಡಿಯಾ ಗುಜರಾತ್, ವಿಮಲ್ ಬೂಟ ಮತ್ತಿತರ ಗಣ್ಯರು, ಅಪಾರ ಭಕ್ತರು ಉಪಸ್ಥಿತರಿದ್ದರು.
ಶಾಂತಿ ಅಖಂಡ ಚಂಡಿ ಮಹಾಯಾಗ ನಡೆಸಿದ ಪುರೋಹಿತರಲ್ಲಿ ಒಬ್ಬರಾದ ಬಾಬಾ ಕಾಳಿದಾಸ್ ಸುಮಾರು 4 ದಶಕಗಳಿಂದ ಆಹಾರ ಏನನ್ನೂ ತಿನ್ನದೆ ದಿನಾ ಸೂರ್ಯೋದಯದ ಮುನ್ನ ಮತ್ತು ಸೂರ್ಯೋಸ್ತದ ವೇಳೆ ಬರೇ ಎರಡು ಬಾರಿ ಸಿಯಾಳ ನೀರನ್ನು ಮಾತ್ರ ತೆಗೆದುಕೊಳ್ಳುತ್ತಾ ಬಾಳುವ ಸನ್ಯಾಸಿ ಎಂದೇ ಪ್ರಸಿದ್ಧರು. ಪ್ರಪಂಚದಾದ್ಯಂತ 37 ಆಶ್ರಮಗಳನ್ನು ಹೊಂದಿದ್ದು ಅಪಾರ ಭಕ್ತವೃಂದವುಳ್ಳ ಸನ್ಯಾಸಿ ಆಗಿದ್ದಾರೆ.