ನಮ್ಮ ಹಿರಿಯರ ಆಚರಣೆಗಳು ಅರ್ಥಪೂರ್ಣವಾಗಿದ್ದವು. ಪ್ರಕೃತಿ ಪೂಜೆಗೆ ವಿಶೇಷ ಮಹತ್ವ ಇದ್ದು ಕಲ್ಲು, ಮಣ್ಣು,ಗಿಡ ಮರಗಳ ಪೂಜೆ ನಮ್ಮ ಪೂರ್ವಜರಿಂದ ಬಂದ ಸಂಪ್ರದಾಯ ಅವುಗಳಲ್ಲಿ ದೈವತ್ವವನ್ನು ಕಂಡು ಆರಾಧಿಸುವುದು ಕೃಷಿಕರಿಗೆ ಸಂತಸದ ಕಾಯಕವಾಗಿತ್ತು. ಹಾಗೆ ಕೃಷಿ ಪ್ರಧಾನವಾದ ಕುಟುಂಬಗಳು ಮೇಟಿಕಂಬವನ್ನು ವಿಶೇಷ ದಿನಗಳಲ್ಲಿ ಮೇಟಿ ಕಂಬಕ್ಕೆ ಹೂ ಹಾಕುವುದು, ಮೇಟಕಂಬಕ್ಕೆ ಹೊದಳು ಹಾಕುವ ಕ್ರಮ, ಮೇಟಿಕಂಬಕ್ಕೆ ಭಕ್ತಿಯಿಂದ ಪೂಜಿಸುತ್ತಿದ್ದರು. ಮೇಟಿಕಂಬ ಎಂಬ ಹೆಸರಿನಿಂದ ಬೇಸಾಯಕ್ಕೆ ಮೇಟಿವಿದ್ಯೆ ಎಂಬ ಹೆಸರು ಬಂತು ಎನ್ನುವವರು ಇದ್ದಾರೆ.
ಶ್ರಿ ಕೃಷ್ಣಜನ್ಮಾಷ್ಟಮಿಯಂದು, ಕದಿರು ಕಟ್ಟುವ ದಿನ, ಕೃಷಿ ಪ್ರಧಾನ ಮನೆಯ ಎದುರು ಇರುವ ಮರದ ಮೇಟಿಕಂಬದ ಸೊಬಗೆ ಬೇರೆ ಇತ್ತು.
ಮೇಟಿಕಂಬವನ್ನು ಒದ್ದೆ ಬಟ್ಟೆಯಲ್ಲಿ ಚೆನ್ನಾಗಿ ಒರಸಿ ಕಂಬದ ಸುತ್ತಾ ರಂಗೋಲಿ ಬರೆದು ಹೊದಲು ಹೂ ಇಟ್ಟು ಮನೆಯ ಯಜಮಾನ ಪಂಚೆ ಉಟ್ಟು ತಿಲಕ ಹಚ್ಚಿ, ದೀಪದ ಆರತಿ ಎತ್ತಿ ಮೇಟಿಕಂಬಕ್ಕೆ ತೆಂಗಿನಕಾಯಿ ಒಡೆದು, ಕೊಡಿ ಬಾಳೆಎಲೆಯಲ್ಲಿ ಹೊದಳು ಪಂಚಕಜ್ಜಾಯ ಮಾಡಿ ಇಟ್ಟು, ಸಳ್ಳೆ ಎಲೆ ಅಥವಾ ಹಲಸಿನ ಎಲೆಗೆ ಶ್ರೀಗಂಧ, ಅರಶಿಣ ತೇದು ಹಾಕಿ ಇಡುವ ಕ್ರಮ ಇದೆ.
ಶ್ರಿಕೃಷ್ಣ ಜನ್ಮಾಷ್ಟಮಿಯಂದು ಮೇಟಿಕಂಬಕ್ಕೆ ಹೊಸ ಸೊಬಗು ಇರುತ್ತಿತ್ತು. ಆದರೆ ಈಗ ಮೇಟಿಕಂಬಗಳು ಮರೆಯಾಗಿದೆ.
ಕರಾವಳಿಯ ಸಾಂಪ್ರದಾಯಿಕ ಭತ್ತದ ಕೃಷಿಯಲ್ಲಿ ನಾಟಿಗೊಂಡ ಗದ್ದೆಗಳು ಹಸಿರಿನಿಂದ ನಳನಳಿಸುತ್ತಿದ್ದ ಕಾಲ ಮಾಯವಾಗಿದೆ. ಕೃಷಿ ಯಶಸ್ಸಿನ ಹಿಂದೊಂದು ಒಡಂಬಡಿಕೆ ಇತ್ತು. ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬಂತೆ ಕೃಷಿ ಪ್ರಧಾನ ದೇಶದ ಜನರಿಂದು ಕೃಷಿಕಾಯಕದಲ್ಲಿ ತೊಡಗಲು ಹಿಂಜರಿಯುತ್ತಿದ್ದಾರೆ. ಇಂದು ಹಳ್ಳಿಗಳು ಮಾಯಾವಾಗಿ ಪಟ್ಟಣದ ಜೀವನವೇ ಆಕರ್ಷಕವಾಗಿ ಹಳ್ಳಿಯ ರೂಪರೇಖೆಯನ್ನೇ ಬದಲಾಯಿಸಿಕೊಂಡಾಗಿದೆ. ನೆಲ ಬಂಜರಾಗುತ್ತಿದೆ. ಬಳ್ಳಿ ಬಸವಳಿಯುತ್ತಿದೆ. ಗಿಡಮರಗಳು ಸಾಯುತ್ತಿವೆ. ಕೃಷಿ ಒಂದು ಕಾಲದಲ್ಲಿ ರೈತರ ಬದುಕಿನ ಗುರಿಯಾಗಿತ್ತು. ಆದರೆ ಇಂದು ರೈತನ ಸೋಲಿನ ಕಥೆಗೆ ನಿದರ್ಶನವಾಗುತ್ತಾ ಅತಿ ಶ್ರಮದ ಬಿಗು ನಿಲುವಿನ ಕೃಷಿ ಕಾಣೆಯಾಗಿದೆ. ಮೇಟಿಕಂಬ ಮನೆ ಅಂಗಳದಿಂದ ಮರೆಯಾಗಿದೆ. ಹಾಗಿದ್ದ ಮೇಲೆ ಅದರ ಪೂಜೆಯ ಅಗತ್ಯವಿದೆಯಾ.
ಈಗ ಯಾರು ಕೃಷಿ ಮಾಡದೆ ಇದ್ದ ಕಾರಣ ಅನೇಕ ಸಂಪ್ರದಾಯಬದ್ದ ಆಚರಣೆಗಳು ತನ್ನ ಕೊಂಡಿ ಕಳಚಿಕೊಳ್ಳುತ್ತಿದೆ. ಆಚರಣೆಗೆ ಬೇಕಾದ ಮೂಲವಸ್ತುವಿನ ಅಗತ್ಯವಿಲ್ಲದೆ ಆಚರಣೆಯು ಮರೆಯಾಗಿದೆ. ಉದಾಹರಣೆಗೆ ಮೇಟಿ ಕಂಬದ ಅಗತ್ಯ ಇಂದು ಮನೆ ಎದುರು ಇಲ್ಲ. ಮೇಟಿಕಂಬ ಇಲ್ಲದ ಮೇಲೆ ಅದರ ಪೂಜೆ ಹೇಗೆ ಸಾದ್ಯ? ಅಷ್ಟಮಿಯಂದು ನಡೆಯುವ ಈ ಆಚರಣೆ ತನ್ನಿಂತಾನೆ ನಿಂತಿದೆ.
ಹೊಸ್ತಿನ ದಿನ ಅಗತ್ಯವಾಗಿ ಮೇಟಿಕಂಬಕ್ಕೆ ಕದಿರು ಕಟ್ಟುವ ಕ್ರಮ ಇತ್ತು. ಕದಿರು ಕಟ್ಟುವ ಹಬ್ಬ ಅಥವಾ ಹೊಸ್ತು ಬೇಸಾಯಗಾರರ ಹೊಸ ಹುಮ್ಮಸ್ಸಿನ ಸಂಭ್ರಮದ ಹಬ್ಬ. ಸಾಧಾರಣವಾಗಿ ಕೆಲವೆಡೆ ಚೌತಿಯಂದು, ಇನ್ನೂ ಕೆಲ ಊರುಗಳಲ್ಲಿ ಅನಂತ ಚತುರ್ದಶಿಯಂದು ಮತ್ತೆ ಕೆಲವರು ನವರಾತ್ರಿಯಲ್ಲಿ ಹಾಗೂ ವಿಜಯದಶಮಿಯಂದು ಮನೆಮಂದಿಯೆಲ್ಲಾ ಜತೆಗೂಡಿ ಆಚರಿಸುವ ಗ್ರಾಮೀಣ ಕೃಷಿ ಸಂಸ್ಕ್ರತಿಯ ಸಂತಸದ ಹಬ್ಬ.
ಅನ್ನಬ್ರಹ್ಮನಿಗೆ, ಭೂಮಾತೆಗೆ, ಬೆಳೆದ ಬೆಳೆಗೆ ಕೃತಜ್ಞತೆ ತೋರುವ ಭಕ್ತಿಯ ಪ್ರತೀಕದ ಸಲುವಾಗಿ ಹಲವಾರು ಆಚರಣೆ ರೂಢಿಯಲ್ಲಿದ್ದು, ಕೃಷಿ ಪರಂಪರೆಯ ನಾಡಿನಲ್ಲಿ ಕದಿರುಕಟ್ಟುವ ಹಬ್ಬದಂದ್ದು ಮೇಟಿಕಂಬಕ್ಕೆ ಕದಿರುಕಟ್ಟಿ ಪೂಜಿಸುವ ಸಂಪ್ರದಾಯವಿತ್ತು.
ಹಚ್ಚ ಹಸಿರಿನ ತೆನೆ ತುಂಬಿ ಬಳಕುವ ಗದ್ದೆಗಳು ಮಾಯವಾಗಿ, ಸಣ್ಣ ಮನೆ ದೊಡ್ಡ ಅಂಗಳ ಇದ್ದ ಕಾಲ ಬದಲಾಗಿ ಈಗ ಎಲ್ಲೆಡೆ ಇಂಟರ್ಲಾಕ್ ಟೈಲ್ ಆವೃತ್ತವಾದ ಮನೆ ಅಂಗಳದಲ್ಲಿ ಎದುರು ದೊಡ್ಡ ವಾಹನ ನಿಲುಗಡೆ ವ್ಯವಸ್ಥೆಯ ಸ್ಥಳ ಇರುತ್ತದೆ. ಹಿಂದೆಲ್ಲ ತುಳಸಿಕಟ್ಟೆ ಹಾಗೂ ಮೇಟಿ ಕಂಬ ಅಂಗಳದಲ್ಲಿ ಅಗತ್ಯವಾಗಿ ಇರಬೇಕಿತ್ತು. ಈಗ ಕಾಲ ಬದಲಾಗಿದೆ ಅನ್ನತ್ತಾ ನಾವು ಬದಲಾಗಿದ್ದೇವೆ. ನಮ್ಮ ಜೀವನ ಶೈಲಿಯು ಬದಲಾಗಿ ಬಳಸುವ ವಸ್ತುಗಳು ಇವತ್ತಿನ ಕಾಲ ಘಟ್ಟಕ್ಕೆ ಅನುಗುಣವಾಗಿ ಸಂಗ್ರಹಿಸುತ್ತೇವೆ. ಆದರೆ ಅಷ್ಟಮಿ ಬಂತು ಅಂದರೆ ಬಹು ನಿರೀಕ್ಷೇಯ ಮೇಟಿ ಕಂಬದ ಪೂಜೆಯು ಒಂದಿತ್ತು. ಈಗ ಮನೆ ಅಂಗಳದಿಂದ ನೆನಪಿನಂಗಳಕ್ಕೆ ಜಾರಿದ ಮೇಲೆ ಮೇಟಿಕಂಬಕ್ಕೆ ಪೂಜೆ ಎಲ್ಲಿಂದ.
ಮೇಟಿಕಂಬಕ್ಕೆ ಕಾಲು ತಾಗಬಾರದು. ಪಾದರಕ್ಷೆ ಮೇಟಿ ಕಂಬದ ಹತ್ತಿರ ಇಡಬಾರದು ಎನ್ನುತ್ತಿದ್ದರು ಹಿರಿಯರು. ನನಗೆ ಇನ್ನೂ ಚೆನ್ನಾಗಿ ನೆನಪಿದೆ ನಾನು ಆಗ ಶಿರೂರು ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿದ್ದೆ. ಕೃಷಿ ಪ್ರಧಾನ ನಾಡಿನಲ್ಲಿ ಮೇಟಿ ವಿದ್ಯೆ ಇರುವುದರ ಅನೇಕ ವಸ್ತುಗಳು ದಿನ ಬಳಕೆಯಲ್ಲಿ ಆಗ ಇತ್ತು. ಕೃಷಿಗೆ ಸಂಬದಿಸಿದ ಅನೇಕ ವಸ್ತುಗಳು ಅವುಗಳ ಬಳಕೆ, ಹೆಸರು ಹಾಗೂ ಧಾರ್ಮಿಕ ವಿಚಾರ ಮತ್ತು ಹಬ್ಬಗಳಿಗೆ ಸಂಬಂಧಪಟ್ಟ ವಸ್ತುಗಳ ಹೆಸರಿನೊಂದಿಗೆ ಪ್ರಬಂಧ ಬರೆಯಬೇಕಿತ್ತು. ಅದರಲ್ಲಿ ನಾನು ಮೇಟಿಕಂಬದ ಹೆಸರು ಬರೆದು ಅದರ ಬಳಕೆ ಮತ್ತು ಪೂಜೆಯ ಬಗ್ಗೆ ಬರೆದಿದ್ದೆ. ಆದರೆ ಈಗ ಮೇಟಿವಿದ್ಯೆ ಇಲ್ಲದ ಮೇಲೆ ಮೇಟಿಕಂಬದ ಹಂಗ್ ಯಾಕೆ ಅನ್ನಿಸುತ್ತಿದೆ. ಮನೆ ಅಂಗಳದಿಂದ ನೆನಪಿನಂಗಳಕ್ಕೆ ಜಾರಿದೆ ಮೇಟಿಕಂಬ.
ಲತಾ ಸಂತೋಪ್ ಶೆಟ್ಟಿ ಮುದ್ದುಮನೆ