ಜ್ಞಾನ ಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ದಿನಾಂಕ 5-09-2023 ರಂದು ಶಿಕ್ಷಕರ ದಿನಾಚರಣೆಯನ್ನು ಬಹಳ ಸಡಗರದಿಂದ ಆಚರಣೆ ಮಾಡಲಾಯಿತು. ಬೆಳಿಗ್ಗೆ 8:30 ಕ್ಕೆ ವಿದ್ಯಾರ್ಥಿಗಳು ಆರತಿ ಬೆಳಗುವುದರ ಮೂಲಕ ಪುಷ್ಪಗುಚ್ಛಗಳನ್ನು ನೀಡಿ ಶಿಕ್ಷಕರನ್ನು ಸ್ವಾಗತಿಸಿದರು. ನಂತರ ಶಾಲೆಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಸುಧಾಕರ ಎಸ್ ಶೆಟ್ಟಿ ಅವರು ಶಿಕ್ಷಕರ ದಿನಾಚರಣೆಯನ್ನು ಕುರಿತು ಮಾತನಾಡಿದರು.
ಡಾ. ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವ ಪ್ರಮುಖ ಉದ್ದೇಶವೇ ಶಿಕ್ಷಕರ ಮಹತ್ವವನ್ನು ಸಾರುವುದು ಜೊತೆಗೆ ಶಿಕ್ಷಣದಲ್ಲಿ ಯುವ ಜನತೆಗೆ ಪ್ರೋತ್ಸಾಹಿಸುವುದು. ಪ್ರತಿ ವ್ಯಕ್ತಿಯು ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾರೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಶಿಕ್ಷಣದ ಮೂಲಾರ್ಥವನ್ನು ತಿಳಿಸಿ ಪ್ರತಿ ವ್ಯಕ್ತಿಯ ಬದುಕನ್ನು ಬೆಳಗಿಸುವವರು ಶಿಕ್ಷಕರಾಗಿರುವುದರಿಂದ ಇಡೀ ಪ್ರಪಂಚವೇ ಅವರನ್ನು ಅಗ್ರಸ್ಥಾನದಲ್ಲಿಟ್ಟು ಪೂಜಿಸುತ್ತದೆ.
ಪ್ರತಿ ವ್ಯಕ್ತಿಯ ಬದುಕಿನ ದೀಪವಾಗಿರುವ ಶಿಕ್ಷಕರಿಗೂ ಸಹ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಸೆಪ್ಟೆಂಬರ್ 5. ಈ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಇಡೀ ದೇಶವೇ ಸಂಭ್ರಮದಿಂದ ಆಚರಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದರೆ ಅವನ ಹಿಂದೆ ಪ್ರಮುಖ ಪಾತ್ರ ವಹಿಸುವುದು ಒಬ್ಬ ಗುರು. ಪ್ರತಿಯೊಬ್ಬರಿಗೂ ಶಿಕ್ಷಣ ಹೇಗೆ ಮುಖ್ಯವೋ, ಹಾಗೆಯೇ ಆ ಶಿಕ್ಷಣ ನೀಡಿದ ಗುರು ಅಷ್ಟೇ ಮುಖ್ಯ. ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರಧಾರನೇ ಶಿಕ್ಷಕ. ವಿದ್ಯಾರ್ಥಿಗಳಿಗೆ ಶಿಸ್ತಿನ ಅರಿವನ್ನು ಮೂಡಿಸಿ ಮಾರ್ಗದರ್ಶನ ನೀಡಿ ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯನ್ನಾಗಿಸುವ ಜವಾಬ್ದಾರಿಯು ಶಿಕ್ಷಕರದ್ದಾಗಿರುತ್ತದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಬಹಳ ಸಡಗರದಿಂದ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ಈ ವಿಶೇಷ ದಿನದ ಕುರಿತು ವಿದ್ಯಾರ್ಥಿಗಳು ಭಾಷಣ ಮಾಡಿದರು. ನಂತರ ಶಿಕ್ಷಕರನ್ನು ಸಂತಸಗೊಳಿಸುವ ಸಲುವಾಗಿ ಹಲವಾರು ವಿನೋದ ಆಟಗಳು, ಸುಂದರವಾದ ನೃತ್ಯಗಳನ್ನು ಮಾಡುವುದರ ಮುಖಾಂತರ ಶಿಕ್ಷಕರ ಮನಸ್ಸನ್ನು ತಣಿಸಿದರು.
ನಂತರ ಶಾಲೆಯ ಕಾರ್ಯದರ್ಶಿಯವರಾದ ಸುಖಲತಾ ಎಸ್ ಶೆಟ್ಟಿರವರು ಶಿಕ್ಷಕರ ದಿನಾಚರಣೆಯನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಶಾಂತಿನಿ ಜೆರಾಲ್ಡ್, ಆಡಳಿತಾಧಿಕಾರಿಗಳಾದ ಶ್ರೀ ಮುಕುಂದ್ ಅವರು ಉಪಸ್ಥಿತರಿದ್ದರು.