ಅದು 1999ರ ಮೇ ತಿಂಗಳ ಕೊನೆಯ ದಿನಗಳು. ಭಾರತೀಯ ಸೇನೆಯಲ್ಲಿ ಒಂದು ವರ್ಷದ ತರಬೇತಿ, ಸುಮಾರು 6 ತಿಂಗಳುಗಳ ಕರ್ತವ್ಯ ಮುಗಿಸಿ ಮೊದಲ ಬಾರಿಗೆ 36 ದಿನಗಳ ರಜೆಯಲ್ಲಿ ಊರಿಗೆ ಬಂದಿದ್ದೆ. ರೈಲಿನ ಪ್ರಯಾಣ ಎಲ್ಲಾ ಸೇರಿ ಸುಮಾರು 7 ದಿನ ಕಳೆದಿರಬಹುದು. ಇದ್ದಕ್ಕಿದ್ದಂತೆ ಸೇನೆಯಿಂದ ಒಂದು ಟೆಲಿಗ್ರಾಂ ಬಂತು. ತತ್ಕ್ಷಣ ಶ್ರೀನಗರಕ್ಕೆ ಆಗಮಿಸಿ ಕರ್ತವ್ಯಕ್ಕೆ ಹಾಜರಾಗುವುದು, ಇಷ್ಟೇ ಬರೆದಿತ್ತು. ಯಾಕೆ-ಏನು ಎಂದು ಗೊತ್ತಿಲ್ಲ. ರಜೆಯನ್ನು ಮೊಟಕುಗೊಳಿಸಿ ಕರ್ತವ್ಯಕ್ಕೆ ಮರಳಿದೆ. ಶ್ರೀನಗರಕ್ಕೆ ತಲುಪುವವರೆಗೂ ‘ಕಾರ್ಗಿಲ್ ಯುದ್ಧ’ ನಡೆಯಲಿದೆ ಎನ್ನುವ ಸಣ್ಣ ಸುಳಿವೂ ಕೂಡಾ ಸಿಕ್ಕಿರಲಿಲ್ಲ. ಅದರ ಅನಂತರ ನಡೆದಿರುವುದು ಎಲ್ಲ ಇತಿಹಾಸ. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯವರಾದ ಉಳ್ಳಾಲ ಪಿಲಾರು ಮೇಗಿನ ಮನೆಯ ಪ್ರವೀಣ್ ಶೆಟ್ಟಿ ಅವರು ಕಾರ್ಗಿಲ್ ಯುದ್ಧದ ತಮ್ಮ ಅನುಭವದ ಬಗ್ಗೆ ಮಾತನಾಡಲು ಆರಂಭಿಸಿದ್ದು ಹೀಗೆ.
ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ್ದ ಭಾರತೀಯ ಸೇನೆಯಲ್ಲಿದ್ದ ಹೆವಿ ಮೋಟಾರ್ ರೆಜಿಮೆಂಟ್ನ ಯೋಧ ಪ್ರವೀಣ್. ಅದರಲ್ಲೂ ಅತೀ ಕಿರಿಯ ವಯಸ್ಸಿನ (ಆಗ 18 ವರ್ಷ) ಯೋಧರಲ್ಲಿ ಒಬ್ಬರು. ಮಾತು ಮುಂದುವರಿಸಿದ ಅವರು, ಟೆಲಿಗ್ರಾಂನಂತೆ ಬಾರಾಮುಲ್ಲಾದಿಂದ ಶ್ರೀನಗರಕ್ಕೆ ತೆರಳುತ್ತಿದ್ದಾಗ ಸೋನಾ ಮಾರ್ಗ್ ಸೇನಾ ನೆಲೆಯ ಮುಂದೆ ಟ್ರಕ್ ಒಂದು ನಿಂತಿತ್ತು. ಅದನ್ನು ಇಣುಕಿ ನೋಡಿದಾಗ ನಮ್ಮದೇ ರೆಜಿಮೆಂಟಿನ ಯೋಧ ಕಾಮರಾಜ್ ಅವರ ಮೃತದೇಹ ಅದರಲ್ಲಿತ್ತು. ಕಾಲು ಮತ್ತು ತಲೆ ಮಾತ್ರ ಸರಿಯಾಗಿತ್ತು. ನಡುವಿನ ಭಾಗಗಳು ಸಂಪೂರ್ಣವಾಗಿ ಛಿದ್ರಗೊಂಡಿತ್ತು. ಇದನ್ನು ನೋಡಿದಾಗ ನನ್ನಲ್ಲಿ ಯುದ್ಧ ಭಯ ದೂರವಾಗಿ, ರೋಷ ಹೆಚ್ಚಾಯಿತು. ಒಟ್ಟಿಗೆ ಇದ್ದ ಸ್ನೇಹಿತನನ್ನು ಬಲಿ ತೆಗೆದುಕೊಂಡವರನ್ನು ಸುಮ್ಮನೆ ಬಿಡಬಾರದು ಎಂದು ಮನಸ್ಸು ಪ್ರತೀಕಾರದಿಂದ ಕುದಿಯತೊಡಗಿತು. ಅನಂತರ ಯುದ್ಧ ಮುಗಿಯುವವರೆಗೂ ಅದೇ ರೋಷ ನನ್ನಲ್ಲಿತ್ತು ಎನ್ನುತ್ತಾರೆ ಪ್ರವೀಣ್.
ನಮ್ಮ ರೆಜಿಮೆಂಟ್ ಮುಂಚೂಣಿಯಲ್ಲಿದ್ದು, ಇನ್ಫೆಂಟ್ರಿ ದಳಕ್ಕೆ ಜಾಗ ಮಾಡಿಕೊಡಬೇಕು. ಸೋನಾ ಮಾರ್ಗನಿಂದ ಮಂದ್ರಾಸ್, ಅನಂತರ ಪ್ರಮುಖ ಸ್ಥಳವಾದ ತೊಲೋಲಿಂಗ್ಗೆ ತೆರಳಿ ಅಲ್ಲಿ ಗುಡ್ಡದ ಮೇಲೆ ಬೀಡು ಬಿಟ್ಟಿದ್ದ ಶತ್ರು ಸೈನಿಕರನ್ನು ಹೊಡೆದು ಉರುಳಿಸಿದೆವು. ತ್ರಿಬಲ್ ಮಂಜಿಲ್ ಪ್ರದೇಶವನ್ನು ವಶಕ್ಕೆ ಪಡೆದೆವು. ಕಾರ್ಯಾಚರಣೆಯಲ್ಲಿ 49 ಶತ್ರು ಸೈನಿಕರು ನಾಶವಾದರು. ನಮಗೆ ಸೆಕೆಂಡ್ ರಾಜಪೂತ್ ರೈಫಲ್ನವರೂ ಸಾಥ್ ನೀಡಿದರು. ನಮ್ಮ ಇಬ್ಬರು ಅಧಿಕಾರಿಗಳು, ಒಬ್ಬರು ಜೆಒಸಿ ಮತ್ತು ಆರು ಮಂದಿ ಜವಾನರು ಹುತಾತ್ಮರಾದರು.
ಅನಂತರ ಬೆಟಾಲಿಕ್ ಸೆಕ್ಟರ್, ಮುಶ್ಕೋಹ್ ವ್ಯಾಲಿಯಲ್ಲಿ ಸ್ಲಿಪ್ ಆ್ಯಂಡ್ ಸರ್ಚ್ ಮಾದರಿಯಲ್ಲಿ ಯುದ್ಧ ನಡೆಯಿತು. ಇದರಲ್ಲಿ ಶತ್ರುಗಳು ಏರ್ ಬ್ಲಾಸ್ಟ್ ನಡೆಸಿದರು. ನಮ್ಮೊಂದಿಗಿದ್ದ ಕೊಡಗಿನ ಯೋಧ ಕಾವೇರಪ್ಪ ಅವರು ಗಂಭೀರವಾಗಿ ಗಾಯಗೊಂಡರು, ರಾಜಸ್ಥಾನದ ದಶರಥ್ ಹುತಾತ್ಮರಾದರು. ಆದರೂ ನಾವು ಅಂಜಲಿಲ್ಲ. ರೋಷದಿಂದ ಮುನ್ನುಗ್ಗಿದೆವು. ಕೊನೆಯ ಯುದ್ಧ ಟೈಗರ್ ಹಿಲ್ಸ್ ಪ್ರದೇಶ ಬಳಿಯ ಸ್ಯಾಂಡೋನಾಳದಲ್ಲಿ ನಡೆಯಿತು. ಶತ್ರುಗಳ ಬಂಕರ್ಗಳನ್ನು ನಾಶ ಮಾಡಿದೆವು. ಇದೇ ವೇಳೆ ಟೈಗರ್ ಹಿಲ್ಸ್ ಪ್ರದೇಶದಲ್ಲಿಯೂ ಯುದ್ಧ ನಡೆಯುತ್ತಿತ್ತು. ಅಲ್ಲಿಯೂ ನಮ್ಮವರೇ ಮುಂಚೂಣಿಯಲ್ಲಿದ್ದು, ವಿಜಯದ ಪತಾಕೆ ಹಾರಿಸಿದೆವು.
16 ವರ್ಷ ಸೇನೆಯಲ್ಲಿ :
1997ರ ಡಿಸೆಂಬರ್ನಲ್ಲಿ ತಮ್ಮ 17ನೇ ವಯಸ್ಸಿನಲ್ಲಿ ಸೇನೆಗೆ ಸೇರ್ಪಡೆಯಾದ ಪ್ರವೀಣ್ ಸುಮಾರು 16 ವರ್ಷಗಳ ಕಾಲ ಸೇವೆ ಸಲ್ಲಿಸಿ 2013ರಲ್ಲಿ ನಿವೃತ್ತರಾದರು. ಕಾರ್ಗಿಲ್ ಯುದ್ಧದ ಆಪರೇಷನ್ ವಿಜಯ್ನ “ಸ್ಟಾರ್ ಪದಕ” ವನ್ನು ಪಡೆದಿರುವ ಅವರು ಪ್ರಸ್ತುತ ಮಂಗಳೂರಿನ ಕೆನರಾ ಬ್ಯಾಂಕ್ನ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ನಿ, ಮೂವರು ಮಕ್ಕಳೊಂದಿಗೆ ಪಿಲಾರಿನಲ್ಲಿ ವಾಸವಾಗಿದ್ದಾರೆ.
-40 ಡಿಗ್ರಿ ತಾಪಮಾನ :
ಯುದ್ಧದಲ್ಲಿ ನಡೆದ ಎಲ್ಲಾ ಸ್ಥಳಗಳಲ್ಲಿ ತಾಪಮಾನ ಮೈನಸ್ ಡಿಗ್ರಿ ಇತ್ತು. ಕೊರೆಯುವ ಚಳಿಯಲ್ಲೇ ಯುದ್ಧ ಮಾಡಿ, ಶತ್ರು ಸೇನೆಯನ್ನು ಸೋಲಿಸಿದ್ದೇವೆ. ಮಂದ್ರಾಸ್ನಲ್ಲಿ -34 ಡಿಗ್ರಿ ಸೆಲ್ಸಿಯಸ್, ಟೈಗರ್ ಹಿಲ್ನಲ್ಲಿ -45 ಡಿಗ್ರಿ ಸೆಲ್ಸಿಯಸ್ ಇತ್ತು. ಇದು ಜಗತ್ತಿನ ಗರಿಷ್ಠ ಶೀತ ಪ್ರದೇಶಗಳಲ್ಲಿ 2ನೇ ಸ್ಥಾನ ಪಡೆದಿರುವ ಪ್ರದೇಶವಾಗಿದ್ದು, ಇಲ್ಲಿ ಮಾಡಿರುವ ಹೋರಾಟ ಅವಿಸ್ಮರಣೀಯ.
16 ದಿನ ಊಟವಿಲ್ಲ :
ಯುದ್ಧ ನಡೆದ 16 ದಿನಗಳೂ ಊಟ ಮಾಡಿಲ್ಲ. ಕಾರಣ ಊಟಕ್ಕೆ ತಟ್ಟೆ ಹಿಡಿದುಕೊಂಡು ಕೂತರೆ ಶೆಲ್ಗಳ ಧೂಳು ಬಂದು ತಟ್ಟೆಗೆ ಬೀಳುತ್ತಿತ್ತು. ಆದ್ದರಿಂದ ಊಟದ ಬದಲು ಸಜ್ಜಿಗೆಯಿಂದ ಮಾಡಿದ ಹಲ್ವವನ್ನೇ ಸೇವಿಸುತ್ತಿದ್ದೆವು. ಕುಡಿಯಲು ಗುಡ್ಡದ ಮೇಲಿನಿಂದ ಶಿಲೆಗಳ ಎಡೆಯಿಂದ ಬರುತ್ತಿದ್ದ ನೀರು ಮಾತ್ರ ಇತ್ತು. ಸ್ನಾನವಂತೂ ಮಾಡಿಯೇ ಇರಲಿಲ್ಲ.
ನೆಲಬಾಂಬ್ ಸ್ಫೋಟ :
ಯುದ್ಧ ಮುಗಿಸಿ ಕೆಲವು ದಿನಗಳ ಅನಂತರ ವಾಪಾಸ್ ಬರುತ್ತಿದ್ದಾಗ ಉರಿ ಸೆಕ್ಟರ್ ಫಹಲ್ಗನ್ ಪ್ರದೇಶಲ್ಲಿ ನೆಲಬಾಂಬ್ ಸಿಡಿದು ನಮ್ಮ ವಾಹನದಲ್ಲಿದ್ದ ಏಳು ಮಂದಿಯ ಪೈಕಿ ಐವರು ಹುತಾತ್ಮರಾದರು. ನಾನು ಇನ್ನೊಬ್ಬರು ಮಾತ್ರ ಉಳಿದೆವು. ನನ್ನ ಹೆಗಲು, ಕಿವಿ ಮೂಗಿಗೆ ತೀವ್ರ ಗಾಯವಾಗಿತ್ತು. ಬಾರಾ ಮುಲ್ಲಾದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾದೆ ಎಂದರು ಪ್ರವೀಣ್.