ಮೊನ್ನೆ ಉಡುಪಿಯ ಕಾರ್ ಶೋರೂಮ್ ಗೆ ಹೋಗಿದ್ದೆ, ಮುಂದಿನ ವರ್ಷ ಒಂದೊಳ್ಳೆ ಕಾರ್ ತಗೋಳ್ಳೋ ಪ್ಲಾನ್ ಹಾಕುತಿದ್ದೆ. ಟೆಸ್ಟ್ ಡ್ರೈವ್ ಮಾಡಿ ರೇಟ್ ಕೇಳಿ, ಲೋನ್ ಬಗ್ಗೆ ಮಾತಾಡಿದ್ದೆ. ಕೊನೆಗೆ ಅಡ್ರೆಸ್, ಫೋನ್ ನಂಬರ್ ಕೇಳಿದ್ದರು. ತಕ್ಷಣ ಆ ಅಜ್ಜಿ ನೆನಪಾಗಿದ್ದರು.
ಉಡುಪಿಯ ಇಂದಿರಾನಗರದ ಆ ಒಂಟಿ ಅಜ್ಜಿ ಕೆಳೆದ 25 ವರ್ಷ ಗಳಿಂದ ಬಿಟ್ಟು ಹೋಗಿದ್ದ ಮಗನಿಗಾಗಿ ಶಬರಿಯಂತೆ ಕಾಯುತಿದ್ದರು. ಅವರಲ್ಲಿ ಚಿಕ್ಕ ಮೊಬೈಲ್ ಒಂದಿತ್ತು. ಅಜ್ಜಿ ಆವತ್ತು ಬೇಸರದಿಂದ ಹೇಳಿದ್ದು ನೆನಪು ಒಂದೇ ಒಂದು ಕಾಲ್ ಬರುವುದಿಲ್ಲ ಮಗ, ನಾನಂತು ಪ್ರತಿದಿನ ಮಗ, ಸಂಬಂಧಿಗಳ ಕಾಲ್ ಬರಬಹುದೆಂದು ಕಾಯುತ್ತಿರುತ್ತೇನೆ ಎನ್ನುವಾಗ ಅವರ ಒಂಟಿತನದ ನೋವುಗಳುಳ್ಳ ಕಣ್ಣುಗಳು ಮಂಜಾಗಿ ಹನಿದಿದ್ದವು. ಅವರಿಗೆ ಕಿವಿ ಸ್ವಲ್ಪ ಕೇಳುತ್ತಿರಲಿಲ್ಲ. ಅವರ ಫೋನ್ ನಂಬರ್ ಅಲ್ಲಿ ಹಾಕಿ ಬಂದೆ. ಒಂದೆರಡು ದಿನ ಬಿಟ್ಟು ಅಜ್ಜಿ ಮನೆಗೆ ಹೊದೆ. ಈ ಬಾರಿ ಅಜ್ಜಿ ಬಾರಿ ಖುಷಿಯಲ್ಲಿದ್ದರು.. “ಏನಜ್ಜಿ ಬಾರಿ ಖುಷಿಯಲ್ಲಿದ್ದೀರಿ?” … ಎಂದೆ. “ಏನಿಲ್ಲ ಮಗ ಮೊನ್ನೆ ತನಕ ನನ್ನ ಮೊಬೈಲ್ಗೆ ಒಂದೂ ಕಾಲ್ ಬರ್ತಿರ್ಲಿಲ್ಲ ಅಂತ ಕೊರಗ್ತಾ ಇದ್ದೆ. ಈಗ ದಿನಕ್ಕೆ 8,10 ಕಾಲ್ ಬರ್ತಿದೆ”.. ಸಂಬಂಧದವರದ್ದು. ಹಾಗಾಗಿ ಖುಷಿ ಎಂದಾಗ ಆಶ್ಚರ್ಯವಾಗಿತ್ತು ನನಗೆ. ಮತ್ತೆ ರಿಂಗ್ ಆಗಿತ್ತು ಮೊಬೈಲ್… ಅವರ ಸಂಭಾಷಣೆ ಹೀಗಿತ್ತು….
ಅಜ್ಜಿ… ಹಲೋ
ಕಾಲ್…. ಹಲೋ… ನಾವು ಕಾರ್ ಷೋರೂಮ್ ನವರು.. ನಿಮ್ಮ ಮೊಮ್ಮಗ ಎಲ್ಲಿ, ಕಾರ್ ಯಾವಾಗ ತಗೋತೀರಾ?
ಅಜ್ಜಿ(ಕಿವಿ ಕೇಳುವುದಿಲ್ಲ).. ಒಹೋ ಹೌದ ಮೊಮ್ಮಗ ಮಾತಾಡೋದ ಹೇಗಿದ್ದಿ ಮಗ, ನಿನ್ ಸ್ವರ ಯಾಕೆ ಸೊರಗಿ ಹೋಗಿದೆ, ಊಟ ಸರಿಯಾಗಿ ಮಾಡ್ತಿಲ್ವ..?
ಕಾಲ್… ಅಜ್ಜಿ.. ನಾನು ಮೊಮ್ಮಗ ಅಲ್ಲಾ ಕಾರ್ ನವ್ರು ಕಾರ್ನವ್ರು( ಸ್ವಲ್ಪ ಸಿಟ್ಟಲ್ಲಿ )
ಅಜ್ಜಿ…ಯಾಕೆ ಕಾಯೋದು ಊಟ ಮಾಡು ಮಗ… ಕರೆಕ್ಟ್ ಟೈಂಗೆ ಊಟ ಮಾಡಬೇಕು.
ಕಾಲ್… ಅಯ್ಯೋ ಕರೀರಿ ನಿಮ್ ಮೊಮ್ಮಗನ(ಸಿಟ್ಟಲ್ಲಿ )
ಅಜ್ಜಿ… ಮೊಮ್ಮಗ ನೀನೇ ಅಂತ ಗೊತ್ತು ಮಗ ನಂಗೆ.
ಕಾಲ್… ನಮ್ಮ ಕರ್ಮ… ಕಟ್ ಮಾಡಿದ(ಸಿಟ್ಟು )
ಅಜ್ಜಿ… ಹೌದ ಮಗ ಮತ್ತೆಂತ (ಕಾಲ್ ಕಟ್ ಆದ್ರೂ 10 ನಿಮಿಷ ಮಾತಾಡಿ ಆಮೇಲೆ ಫೋನ್ ಇಟ್ಟಿದ್ರು ಅಜ್ಜಿ.. ಕಿವಿ ಸ್ವಲ್ಪಾನು ಕೇಳ್ತಿರ್ಲಿಲ್ಲ )
ಆದ್ರೂ ಫೋನ್ ಇಟ್ಟಾಗ ಏನೋ ಫ್ರೆಶ್ ಆಗಿ ಕಾಣುತಿದ್ರು ಅಜ್ಜಿ. ಮತ್ತೆ ಫೋನ್ ಚೆಕ್ ಮಾಡಿದೆ, ಷೋರೂಮ್ ನಿಂದ 8 ಕಾಲ್, ಬ್ಯಾಂಕ್ ಮ್ಯಾನೇಜರ್ ದು 4 ಕಾಲ್, ಕಂಪೆನಿ ಇಂದ 6 ಕಾಲ್,18 ಮೆಸೇಜ್ ಗಳು ಅಬ್ಬಾ… ನಿಜಕ್ಕೂ ಅಜ್ಜಿಗೆ ಒಳ್ಳೆ ಟೈಮ್ ಪಾಸ್ ಎಂದು ಕೊಂಡು ಅಲ್ಲೇ ಫೋನ್ ಇಟ್ಟೆ.
ಒಬ್ಬ ಪಾಪದ ವ್ಯಕ್ತಿ ಮನೆ ಕಟ್ಟಲು ಸಾಲ ಕೇಳಿದರೆ ನೂರೆಂಟು ಬಾರಿ ಸುತ್ತಾಡಿಸಿ ಕೊನೆಗೆ ಸಾಲ ಕೊಡದೆ ನಿರಾಸೆಗೊಳಿಸುವ ಈ ಬ್ಯಾಂಕ್ ಗಳು, ಅದೇ ಕಾರ್ ಲೋನ್ ಬಗ್ಗೆ ಶ್ರೀಮಂತನೊಬ್ಬ ಒಮ್ಮೆ ವಿಚಾರಿಸಿದರೆ ಸಾಕು ಸಂಜೆ ಒಳಗೆ ಲೋನ್ ತಂದು ಅವನ ಮನೆ ಬಾಗಿಲಿಗೆ ಬರುವ ಕಾರ್ ಕೊಳ್ಳಿ, ಆ ಆಫರ್ ಈ ಆಫರ್ ಎಂದು ನೂರೆಂಟು ಕಾಲ್ ಮಾಡಿ ಇರಿಟೇಟ್ ಮಾಡುವ ಈ ಷೋರೂಮ್ ನ ಮಂದಿಯ ಈ ಇರಿಟೇಟ್ ನಿಂದ ತಪ್ಪಿಸಲು ಇದು ಒಳ್ಳೆಯ ಉಪಾಯ ಎಂದು ಏನಿಸಿತ್ತು ನನಗೆ.
ಅಜ್ಜಿ ಈಗಷ್ಟೇ ಬಂದ ಕಾಲ್ ಅಲ್ಲಿ ಬ್ಯಾಂಕ್ ಮ್ಯಾನೇಜರ್ ನನ್ನು ತನ್ನ ಮೊಮ್ಮಗನ ರೂಪದಲ್ಲಿ ಮಾತಾಡುತಿದ್ದರು. ಮೊಮ್ಮಗನಿಗೆ ಅಕ್ಕರೆಯ ಮಾತಲ್ಲಿ ಅಡ್ವೈಸ್ ಮಾಡುತಿದ್ದರು. ಫೋನ್ ಮಾಡಿದ್ದ ಬ್ಯಾಂಕ್ ಮ್ಯಾನೇಜರ್ ತನ್ನ ಮೂಲ ಉದ್ದೇಶವನ್ನೇ ಮರೆತು ಬಿಟ್ಟಿದ್ದ.
✍🏿️ಡಾ ಶಶಿಕಿರಣ್ ಶೆಟ್ಟಿ, ಉಡುಪಿ (9945130630)