ವಿದ್ಯಾಗಿರಿ: ‘ಏಕಾಗ್ರತೆಯಿಂದ ಆಟದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಭಾರತೀಯ ಖೋ- ಖೋ ಒಕ್ಕೂಟದ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಖೋ -ಖೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ ಹೇಳಿದರು.
ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು, ಕರ್ನಾಟಕ ರಾಜ್ಯ ಖೋ -ಖೋ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಖೋ- ಖೋ ಸಂಸ್ಥೆ ಆಶ್ರಯದಲ್ಲಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡ ಖೋ -ಖೋ ಕ್ರೀಡಾಧಿಕಾರಿಗಳ ಕಾರ್ಯಾಗಾರದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.
ಖೋ -ಖೋ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮಿಂಚುತ್ತಿದೆ. ಈ ಹಿಂದೆ ಇದ್ದ ಆಟಕ್ಕೂ ಪ್ರಸ್ತುತ ಇರುವ ಆಟಕ್ಕೂ ಬಹಳ ವ್ಯತ್ಯಾಸ ಇದೆ. ಖೋ ಖೋ ಅಮೂಲಾಗ್ರವಾಗಿ ಬದಲಾಗುತ್ತಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನಾವು ಗಟ್ಟಿಗೊಳಿಸುತ್ತಾ ಮುಂದುವರಿಯಬೇಕು ಎಂದರು. ಕರ್ನಾಟಕ ರಾಜ್ಯ ಖೋ -ಖೋ ಸಂಸ್ಥೆಯ ಕಾರ್ಯದರ್ಶಿ ಆರ್. ಮಲ್ಲಿಕಾರ್ಜುನಯ್ಯ ಮಾತನಾಡಿ, ಆಟಗಾರನಿಗೆ ಆತ್ಮವಿಶ್ವಾಸ ಇರಬೇಕು. ಆದರೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಕಷ್ಟಪಟ್ಟು ಮಾಡಿದ ಕೆಲಸದಲ್ಲಿ ತೃಪ್ತಿ ಇರುತ್ತದೆ. ಸೋಲು – ಗೆಲುವು ಸಹಜ. ಯಾವುದಕ್ಕೂ ಎದೆಗುಂದದೆ ನಮ್ಮ ಕೆಲಸದ ಮೂಲಕ ಜನ ನಮ್ಮನ್ನು ಗುರುತಿಸುವಂತೆ ಮಾಡಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಖೋ ಖೋ ಖಜಾಂಚಿ ಶಿವರಾಮ್ ಸಿ. ಯೇನೆಕಲ್ ಮಾತನಾಡಿ, ಖೋ ಖೋ ಆಟಗಾರನಿಗೆ ವೇಗ, ನಿಖರತೆ, ಬುದ್ಧಿವಂತಿಕೆ, ಚುರುಕುತನ ಅತ್ಯವಶ್ಯಕ. ತಾಳ್ಮೆ ಬಹಳ ಮುಖ್ಯವಾಗಿರುತ್ತದೆ ಎಂದರು. ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕಲಿಕೆಗೆ ಅಂತ್ಯ ಇಲ್ಲ. ದಿನದಿಂದ ದಿನಕ್ಕೆ ನಾವು ಹೊಸ ವಿಚಾರಗಳನ್ನು
ಕಲಿಯುತ್ತಿರುತ್ತೇವೆ ಎಂದರು.
2021 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಖೋ ಖೋ ಕ್ರೀಡಾಧಿಕಾರಿಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ಅಧ್ಯಕ್ಷ ಕೆ. ಪಿ. ಪುರುಷೋತ್ತಮ ಇದ್ದರು. ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಮಧು ಜಿ. ಆರ್ ಸ್ವಾಗತಿಸಿ, ವಿದ್ಯಾರ್ಥಿನಿ ಅಕ್ಷಿತಾ ಎಂ. ನಿರೂಪಿಸಿ, ವರ್ಷಿಣಿ ವಂದಿಸಿದರು.
ನಿಯಮಾವಳಿ ಕಾರ್ಯಾಗಾರ
ದೈಹಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಕ್ರೀಡಾಧಿಕಾರಿಗಳಿಂದ ಖೋ ಖೋ ನಿಯಮಾವಳಿ ಬಗ್ಗೆ ಕಾರ್ಯಾಗಾರ ನಡೆಯಿತು. ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ತೀರ್ಪುಗಾರ ಮಂಡಳಿಯ ಅಧ್ಯಕ್ಷ ಬಸವರಾಜ್ ಎಸ್. ಸಿ., ಉಪಾಧ್ಯಕ್ಷ ಟಿ.ಎಸ್ಸಿ ದ್ದಲಿಂಗಮೂರ್ತಿ ಮಾಹಿತಿ ನೀಡಿದರು.