ಇತ್ತೀಚೆಗೆ ಬಹರೈನ್ ದೇಶಕ್ಕೆ ಆಗಮಿಸಿ ಅಧಿಕಾರ ವಹಿಸಿಕೊಂಡ ಭಾರತದ ನೂತನ ನಿಯೋಜಿತ ರಾಯಭಾರಿ ಘನತೆವೆತ್ತ ಶ್ರೀ ವಿನೋದ್ ಕೆ. ಜೇಕಬ್ ಅವರನ್ನು ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಅಮರನಾಥ್ ರೈ ಹಾಗೂ ಪದಾಧಿಕಾರಿಗಳು ಭೇಟಿಯಾಗಿ ಅಭಿನಂದಿಸಿದರು. ಅಧ್ಯಕ್ಷ ಶ್ರೀ ಅಮರನಾಥ್ ರೈಯವರು ರಾಯಭಾರಿಯವರಿಗೆ ಹೂಗುಚ್ಛ, ಸ್ಮರಣಸಂಚಿಕೆ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.
ಬಳಿಕ ಶ್ರೀ ರೈಯವರು ಕನ್ನಡ ಸಂಘವು ನಡೆದು ಬಂದ ಹಾದಿ, ಕನ್ನಡ ಭವನ ನಿರ್ಮಾಣದ ಕುರಿತು ವಿಸ್ತೃತವಾಗಿ ವಿವರಿಸಿದರು. ಜೊತೆಗೆ ಇದೇ ಸೆಪ್ಟೆಂಬರ್ ನಲ್ಲಿ ನಡೆಯುವ ಪದಗ್ರಹಣ ಸಮಾರಂಭಕ್ಕೆ ಅತಿಥಿಗಳಾಗಿ ಬರುವಂತೆ ಆಹ್ವಾನಿಸಿದರು. ಘನತೆವೆತ್ತ ಶ್ರೀ ವಿನೋದ್ ಕೆ. ಜೇಕಬ್ ರವರು ಕನ್ನಡ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿದು ಸಂಘಟನೆಯನ್ನು ಶ್ಲಾಘಿಸಿದರು. ತಾವು ಕನ್ನಡ ಭವನವನ್ನು ಸಂದರ್ಶಿಸುವದರೊಂದಿಗೆ ಮುಂದಿನ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಭಾರತೀಯ ದೂತಾವಾಸದ ಶ್ರೀ ಇಜ಼ಾಸ್ ಅಸ್ಲಂ, ದ್ವಿತೀಯ ಕಾರ್ಯದರ್ಶಿ (ರಾಜಕೀಯ, ಪತ್ರಿಕಾ, ಮಾಹಿತಿ ಮತ್ತು ಸಂಸ್ಕೃತಿ) ಉಪಸ್ಥಿತರಿದ್ದರು.