ಮುಂಬಯಿಯ ಪ್ರಸಿದ್ಧ ಸಮಾಜ ಸೇವಕ, ಶಿಕ್ಷಣ ತಜ್ಞ, ಬಂಟರ ಸಂಘ ಮೀರಾ- ಭಯಂದರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷ ಬಿಳಿಯೂರುಗುತ್ತು ಡಾ. ಅರುಣೋದಯ ರೈ ಅವರು ಸ್ಥಾಪಿಸಿರುವ ರೈ ಸುಮತಿ ಎಜುಕೇಶನ್ ಟ್ರಸ್ಟಿನ ಆಡಳಿತದಲ್ಲಿರುವ ಸೈಂಟ್ ಆಗ್ನೆಸ್ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ಗುರು ಪೂರ್ಣಿಮದ ದಿನದಂದು ವಿದ್ಯಾರ್ಥಿಗಳಿಗೆ ಗುರುವಿನ ಬಗ್ಗೆ ಮತ್ತು ಮಾತಾಪಿತರ ಬಗ್ಗೆ ಜ್ಞಾನ ವೃದ್ಧಿಸುವ ವಿಶೇಷ ಕಾರ್ಯಕ್ರಮ ನಡೆಯಿತು.
ಶಾಲೆಯಲ್ಲಿ ಸುಮಾರು 3000 ವಿದ್ಯಾರ್ಥಿಗಳಿದ್ದು ಗುರು ಪೂರ್ಣಿಮೆಯಂದು ಜೂನಿಯರ್ ಸೀನಿಯರ್ ಹಾಗೂ ಒಂದನೇ ತರಗತಿ ಮತ್ತು ಎರಡನೇ ತರಗತಿಯ ಸುಮಾರು 1180 ವಿದ್ಯಾರ್ಥಿಗಳಿಗೆ ಗುರುವಿನ ಮತ್ತು ಮಾತಾಪಿತರ ಮಹತ್ವದ ಅರಿವನ್ನು ಮೂಡಿಸುವುದಕ್ಕಾಗಿ ತಾಯಿಯ ಪಾದ ಪೂಜೆಯನ್ನು ಮಾಡಿಸಿ ವಿದ್ಯಾರ್ಥಿಗಳಿಗೆ ತಾಯಿಯ ಮಹತ್ವವನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅರುಣೋದಯ ರೈ ಸಾವಿರಾರು ಮಕ್ಕಳು ಹಾಗೂ ಅವರೊಂದಿಗೆ ಅಷ್ಟೇ ತಾಯಂದಿರು ಇಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ತಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಈ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗಿದೆ. ಇದೇ ರೀತಿ ಮಕ್ಕಳಿಗೆ ತಾಯಂದಿರ ಮೇಲಿನ ಪ್ರೀತಿ ಹೆಚ್ಚಾಗಲಿ ಎಂದು ಅವರು ಶುಭ ಹಾರೈಸಿದರು. 1180 ಮಕ್ಕಳು ಹಾಗೂ 1180 ತಾಯಂದಿರು ಈ ಮಾತೃ ವಂದನ ಕಾರ್ಯಕ್ರಮ ನಡೆಸಿದ್ದು ಮಕ್ಕಳು ತಾಯಂದಿರ ಕಾಲು ತೊಳೆದು, ಹೂ ಕುಂಕುಮ ಹಾಕಿ ತಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಿತು.
ವೇದಿಕೆಯಲ್ಲಿ ಡಾ. ಅರುಣೋದಯ ರೈ, ಸ್ವರ್ಣಲತಾ ಅರುಣೋದಯ ರೈ, ಜೈಕಿರಣ್ ರೈ, ಕಾವ್ಯ ಜೈಕಿರಣ್ ರೈ, ಡಾ. ಸ್ವರೂಪ ಚೇತನ್ ಶೆಟ್ಟಿ, ಚೇತನ್ ಶೆಟ್ಟಿ ಮತ್ತು ಶಾಲೆಯ ಮಥಾಯಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.