ಬಂಟರ ಸಂಘ ಪುತ್ತಿಗೆ ನೇತೃತ್ವದಲ್ಲಿ ‘ಆಟಿದ ಕೂಟ’ ಕಾರ್ಯಕ್ರಮವು ಪುತ್ತಿಗೆ ಎಜೆಬಿ ಶಾಲಾ ವಠಾರದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಹೇರಂಬ ಇಂಡಸ್ಟ್ರಿಸ್ ಮುಂಬಯಿ ಇದರ ಸಿಎಂಡಿ ಸದಾಶಿವ ಶೆಟ್ಟಿ ಕನ್ಯಾನ ಅವರು ಮಾತನಾಡಿ, ತುಳುನಾಡಿನ ಸಾಂಸ್ಕೃತಿಕತೆಯನ್ನು ಈ ಆಟಿದ ಕೂಟದಲ್ಲಿ ಅನಾವರಣ ಮಾಡಿದ್ದು, ತುಂಬಾ ಸಂತಸದ ವಿಚಾರವಾಗಿದೆ. ಬಂಟ ಸಮಾಜವನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಬಂಟರ ಸಂಘ ಬಹುಮುಖ್ಯವಾಗಿದೆ ಎಂದರು.
ಇದೇ ವೇಳೆ ಬಂಟ ಸಮುದಾಯದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಗ್ರಾಮದ ಅಜಲು ದೈವ ನರ್ತಕರಿಂದ ‘ಆಟಿ ಕಳಂಜ’ ನರ್ತನ ನಡೆದಿದ್ದು, ಇದು ಕಾರ್ಯಕ್ರಮದ ಸೊಗಡನ್ನು ಮತ್ತಷ್ಟು ಹೆಚ್ಚಿಸಿದೆ. ಈ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.