ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ಜಂಕ್ ಫುಡ್ ಅತಿದೊಡ್ಡ ಸಂಖ್ಯೆಯಲ್ಲಿ ಇದ್ದು ಈಗಿನ ಯುವಕ ಯುವತಿಯರು ಈ ಆಹಾರಕ್ಕೆ ಮಾರು ಹೋಗಿ ಅತೀ ಸಣ್ಣ ಪ್ರಾಯದಲ್ಲೇ ಮಾರಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಮನೆ ಮದ್ದು, ಮನೆ ಅಡಿಗೆ ಈಗಿನ ಯುವ ಜನಾಂಗಕ್ಕೆ ಒಗ್ಗುವುದಿಲ್ಲ ಎಂದು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮಂಗಳೂರು ಪ್ರಾಧ್ಯಾಪಕಿ ಮತ್ತು ಬಜ್ಪೆ ಮಹಿಳಾ ಬಂಟ್ಸ್ ಸಂಘದ ಅಧ್ಯಕ್ಷೆ ಪ್ರೊ. ಅಕ್ಷಯ ಆರ್. ಶೆಟ್ಟಿ ಹೇಳಿದರು. ಇವರು ಬಂಟರ ಸಂಘ (ರಿ ) ಪಡುಬಿದ್ರಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್, ಬಂಟರ ಮಹಿಳಾ ವಿಭಾಗ ಪಡುಬಿದ್ರಿ ಇದರ ಆಶ್ರಯದಲ್ಲಿ ಆಟಿದ ಕೂಟ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಡುಬಿದ್ರಿ ಬಂಟರ ಭವನದಲ್ಲಿ ನಡೆದ ಸಭೆಯಲ್ಲಿ ಇವರು ತಮ್ಮ ಆಟಿ ತಿಂಗಳ ಬಗ್ಗೆ ಮಾತನಾಡಿ ಈ ತಿಂಗಳಲ್ಲಿ ಹೆಚ್ಚು ರೋಗ ಹರಡಿ ಹೆಚ್ಚಿನ ಜನರು ರೋಗಗ್ರಸ್ತರಾಗುವ ದಿನ. ಅದಕ್ಕಾಗಿ ನಮ್ಮ ಹಿರಿಯರು ಈ ತಿಂಗಳಲ್ಲಿ ಆಟಿ ಅಮಾವಾಸ್ಯೆ ದಿನ ಕಷಾಯ, ಮೆತ್ತೆ ಗಂಜಿ ಅಲ್ಲದೆ ನಮ್ಮ ಪರಿಸರದಲ್ಲಿ ಸಿಗುವ ಅನೇಕ ಸೊಪ್ಪುಗಳು, ತರಕಾರಿಗಳು ರೋಗ ನಿರೋಧಕವಾಗಿ ನಮ್ಮ ದೇಹದಲ್ಲಿ ಕೆಲಸ ಮಾಡುತ್ತದೆ ಎಂದು ಹಿರಿಯರು ಅಡಿಪಾಯ ಹಾಕಿ ಕೊಟ್ಟಿದ್ದಾರೆ. ದುರದೃಷ್ಟವಶಾತ್ ಈ ವಿಚಾರಗಳನ್ನು ನಮ್ಮ ಮಕ್ಕಳಿಗೆ ತಿಳಿಸುವಲ್ಲಿ ನಾವು ವಿಫಲರಾಗಿದ್ದೇವೆ. ಈ ಆಧುನಿಕ ಕಾಲದಲ್ಲಿ ಯುವಕರನ್ನು ಜಾಗೃತಿಗೊಳಿಸಿ ಅರೋಗ್ಯ ರಕ್ಷಣೆ ಮಾಡುವಲ್ಲಿ ಸಹಕಾರ ಮಾಡುವ ಮೂಲಕ ಜಾಗ್ರತಿ ಮೂಡಿಸಲು ಇಂತಹ ಕಾರ್ಯಕ್ರಮ ಅನುಕೂಲಕರ ಎಂದರು.
ವೇದಿಕೆಯಲ್ಲಿ ಬಂಟರ ಸಂಘ ಪಡುಬಿದ್ರಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ. ಕೆ ಶೆಟ್ಟಿ, ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ವೈ. ಶಶಿಧರ್ ಕೆ. ಶೆಟ್ಟಿ, ಸಿರಿಮುಡಿ ದತ್ತನಿಧಿ ಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ, ಜ್ಯೋತಿ ಎಸ್ ಶೆಟ್ಟಿ, ಯುವ ಬಂಟ್ಸ್ ಸಂಘ ಅಧ್ಯಕ್ಷ ನವೀನ್ ಶೆಟ್ಟಿ, ಸಂತೋಷ್ ಶೆಟ್ಟಿ ಅದಮಾರ್ ಮೊದಲಾದವರು ಉಪಸ್ಥಿತರಿದ್ದರು.