ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಸಿದ್ದಿ ವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ 17 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆಪ್ಟಂಬರ್ 19 ರಿಂದ 21 ರ ವರೆಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಸರ್ವ ಬಂಟ ಸಮಾಜದ ಸಹಕಾರದಲ್ಲಿ ಬಂಟ್ಸ್ ಹಾಸ್ಟೇಲ್ ನಲ್ಲಿ ಶ್ರದ್ದಾ ಭಕ್ತಿಯಿಂದ ನಡೆಯಲಿದೆ. ಸಾರ್ವಜನಿಕ ಗಣೇಶೋತ್ಸವದ ಮೂಲಕ ಸಮಾಜ ಬಾಂಧವರನ್ನು ಒಟ್ಟು ಸೇರಿಸುವ ಕೆಲಸ ಕಾರ್ಯ ನಡೆಯಲಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೊಡಿಯಾಲ್ ಗುತ್ತು ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.
ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋರೊನಾದಿಂದ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಸಾಧ್ಯವಾಗಿಲ್ಲ. ಈ ವರ್ಷ 17 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಎಲ್ಲರನ್ನೂ ಸೇರಿಸಿ ಆಚರಿಸುತ್ತೀದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ.
ಸಮುದಾಯದ ಎಲ್ಲರನ್ನೂ ಒಂದೇ ಸೂರಿನಡಿಯಲ್ಲಿ ಸೇರಿಸಲು ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಇದಕ್ಕೆ ಸಮಿತಿ, ಉಪ ಸಮಿತಿಗಳನ್ನು ರಚಿಸಿದ್ದೇವೆ. ಆಸಕ್ತರನ್ನು ಸಮಿತಿಗಳಿಗೆ ಸೇರಿಸಿಕೊಂಡು ಕಾರ್ಯಕ್ರಮ ನಡೆಸಲಾಗುವುದು ಎಂದರು.
ಆಗೋಸ್ಟ್ 27 ರಂದು ಧಾರ್ಮಿಕ ದತ್ತಿ ಇಲಾಖೆಯಿಂದ ನೋಂದಾವಣೆಯಾದ ದಕ್ಷಿಣ ಕನ್ನಡ, ಉಡುಪಿ, ಮತ್ತು ಕಾಸರಗೋಡು ಜಿಲ್ಲೆಯ ದೇವಸ್ಥಾನಗಳಲ್ಲಿ ಇರುವ ಬಂಟ ಆಡಳಿತ ಮುಖ್ಯಸ್ಥರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿ ಸೆಪ್ಟಂಬರ್ 3 ರಂದು ಬಂಟ ಕಲೋತ್ಸವ, ಸೆಪ್ಟಂಬರ್ 10 ರಂದು ಬಂಟರ ಕ್ರೀಡೋತ್ಸವ, ಸೆಪ್ಟಂಬರ್ 16 ರಂದು ಬಂಟ ಯುವ ಸಮ್ಮೇಳನ ಜರಗಲಿದೆ ಎಂದು ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಸಮಾರಂಭದಲ್ಲಿ ಉಡುಪಿ ಜಿಲ್ಲಾ ಸಂಚಾಲಕ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಕಾಸರಗೋಡು ಜಿಲ್ಲಾ ಸಂಚಾಲಕ ಸಂಜೀವ ಶೆಟ್ಟಿ, ದ.ಕ. ಜಿಲ್ಲಾ ಸಂಚಾಲಕ ನಾಗರಾಜ ಶೆಟ್ಟಿ, ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ಸಿಎ ರಾಮಮೋಹನ್ ರೈ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೇಡಿ, ಟ್ರಸ್ಟಿಗಳಾದ ನಿಟ್ಟೆಗುತ್ತು ರವಿರಾಜ ಶೆಟ್ಟಿ, ಆಶಾಜ್ಯೋತಿ ರೈ, ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ವಸಂತ ಶೆಟ್ಟಿ, ಗಣೇಶೋತ್ಸವ ಸಮಿತಿಯ ಮಂಗಳೂರು ಸಂಚಾಲಕರಾದ ಸುಧಾಕರ ಪೂಂಜ, ಶೇಖರ ಶೆಟ್ಟಿ, ಭಾರತಿ ಶೆಟ್ಟಿ, ಅರುಣಾ ಶೆಟ್ಟಿ, ಉಪಸ್ಥಿತರಿದ್ದರು.
ಸಮಿತಿಯ ಪ್ರಮುಖರಾದ ಉಲ್ಲಾಸ್ ಶೆಟ್ಟಿ ಪೆರ್ಮುದೆ, ಸತೀಶ ಶೆಟ್ಟಿ ಕೊಡಿಯಾಲ್ ಬೈಲ್, ಮೀನಾ ಆರ್ ಶೆಟ್ಟಿ, ನಿವೇದಿತಾ ಶೆಟ್ಟಿ ಸಭೆಯಲ್ಲಿ ಮಾಹಿತಿ ನೀಡಿದರು. ಕೆ.ಎಂ. ಶೆಟ್ಟಿ ವಂದಿಸಿದರು. ಕಿರಣ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.