ಮುಲ್ಕಿಯ ಕರ್ನಿರೆ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ 26ನೇ ವರ್ಷದ ಪುಸ್ತಕ ವಿತರಣೆಯ ಕಾರ್ಯಕ್ರಮವು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಮಾತನಾಡಿದ ಕರ್ನಿರೆ ವಿಶ್ವನಾಥ್ ಶೆಟ್ಟಿ ಅವರು ಗ್ರಾಮದ ಮಕ್ಕಳು ವಿದ್ಯಾವಂತರಾಗಬೇಕು ದೇಶದ ಉತ್ತಮ ಪ್ರಜೆಗಳಾಗಬೇಕು ಎನ್ನುವ ನಿಟ್ಟಿನಲ್ಲಿ 26 ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಗಳಿಗೆ ಪುಸ್ತಕ ನೀಡುವ ಕಾರ್ಯವನ್ನು ನಡೆಸುತ್ತಾ ಬಂದಿದ್ದೇನೆ. ವಿದ್ಯಾರ್ಥಿಗಳು ಯಾವ ಮಾಧ್ಯಮದಲ್ಲಿ ಕಲಿತಿದ್ದೇವೆ ಎನ್ನುವುದು ಮುಖ್ಯವಲ್ಲ, ನಾವು ಯಾವ ರೀತಿ ವಿದ್ಯೆಯನ್ನು ಕರಗತ ಮಾಡಿದ್ದೇವೆ ಅನ್ನೋದು ಮುಖ್ಯ, ನಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ತಪಸ್ಸಿನಂತೆ ಸಾಧನೆ ಮಾಡಬೇಕು. ಉನ್ನತ ಮಟ್ಟದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದಾಗ ಉದ್ಯೋಗಗಳು ಅಧಿಕಾರಗಳು ನಮ್ಮನ್ನು ಅರಸಿಕೊಂಡು ಬರುತ್ತದೆ, ಮಕ್ಕಳು ಗ್ರಾಮವನ್ನು ಮತ್ತು ಪಾಲಕರನ್ನು ಗೌರವದಿಂದ ಕಾಣಬೇಕು, ಪಾಲಕರು ಮಕ್ಕಳಿಗೆ ಸಂಪತ್ತನ್ನು ಮಾಡುವುದಕ್ಕಿಂತ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ನೀಡಿದರೆ ಎಲ್ಲಾ ರೀತಿಯ ಸಂಪತ್ತು ಅವರಿಗೆ ಲಭಿಸುತ್ತದೆ ಎಂದು ನುಡಿದರು.
ವೇದಿಕೆಯಲ್ಲಿ ಸಮಾಜ ಸೇವಕ ಹರಿಶ್ಚಂದ್ರ ಶೆಟ್ಟಿ ಕರ್ನಿರೆ, ಮುಂಬೈಯ ಹೋಟೆಲ್ ಉದ್ಯಮಿ ಬಿಲ್ಲವ ಚೇಂಬರ್ ಆಫ್ ಕೋಮರ್ಸ್ ಅಂಡ್ ಇಂಡಸ್ಟ್ರೀಸ್ ನ ನಿರ್ದೇಶಕ ಗಂಗಾಧರ್ ಎನ್ ಅಮೀನ್ ಕರ್ನಿರೆ, ಪ್ರಭಾಕರ್ ಶೆಟ್ಟಿ, ಪಂಚಾಯತ್ ಸದಸ್ಯ ವನಜ ಕೋಟ್ಯಾನ್, ರವೀಂದ್ರ ಶೆಟ್ಟಿ ಕರ್ನಿರೆ, ಪ್ರಕಾಶ್ ಶೆಟ್ಟಿ, ಇಸ್ಮಾಯಿಲ್ ಕನ್ಯೆ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರು ಉಪಸ್ಥರಿದ್ದರು.