ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ‘ಕಲರ್ಸ್ ಕನ್ನಡ’ ಮಾತುಕತೆ ಮಾಧ್ಯಮದಲ್ಲಿ ಎಚ್ಚರ ಅಗತ್ಯ: ರಂಜಿತ್ ವಿದ್ಯಾಗಿರಿ: ‘ನಾಲ್ಕು ಗೋಡೆ ಮಧ್ಯೆ ಕುಳಿತು ಬರೆದರೂ, ನಾಲ್ಕು ಕೋಟಿ ಜನ ನೋಡುತ್ತಾರೆ ಎಂಬ ಎಚ್ಚರವು ಮಾಧ್ಯಮದಲ್ಲಿ ಅತಿಮುಖ್ಯ’ ಎಂದು ಕಲರ್ಸ್ ಕನ್ನಡದ ಕಂಟೆಂಟ್ ಡೆವಲಪರ್ ರಂಜಿತ್ ನಿಡಗೋಡು ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ‘ಮನೋರಂಜನಾ ಮಾಧ್ಯಮ- ವ್ಯಾಪ್ತಿ ಮತ್ತು ಪ್ರವೃತ್ತಿ’ ಕುರಿತು ಅವರು ಮಾತನಾಡಿದರು.
ನಿಮ್ಮ ಬದುಕು ಹಾಗೂ ವೃತ್ತಿಯನ್ನು ಪ್ರೀತಿಸಬೇಕು. ಪರಿಸರಕ್ಕೆ ಸ್ಪಂದಿಸಬೇಕು. ಸೂಕ್ಷ್ಮವಾಗಿ ಗ್ರಹಿಸುತ್ತಿರಬೇಕು. ಓದು ನಿರಂತರವಾಗಿರಬೇಕು. ಪ್ರವೃತ್ತಿಯಲ್ಲಿ ಸೃಜನಶೀಲತೆ ಇರಬೇಕು. ವೃತ್ತಿಯನ್ನು ಸರಳ ಎಂದು ತಿಳಿದು, ಕಷ್ಟಪಟ್ಟು ಶ್ರಮಿಸಿದಾಗ ಯಶಸ್ಸು ನಿಮ್ಮೆಡೆಗೆ ಬರುತ್ತದೆ ಎಂದರು.
ಪತ್ರಿಕೋದ್ಯಮವು ಹಲವಾರು ಮಜಲುಗಳನ್ನು ದಾಟಿ ವ್ಯಾಪಿಸಿದೆ. ಪತ್ರಿಕೆ, ಟಿವಿ, ಸುದ್ದಿ, ಮನೋರಂಜನೆ, ನವಮಾಧ್ಯಮ ಹೀಗಾಗಿ ಸಾವಿರಾರು ಅವಕಾಶಗಳು ಸೃಷ್ಟಿಯಾಗಿವೆ. ಇಲ್ಲಿನ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕಾದರೆ, ಯಶಸ್ಸು,
ಪರಿಶ್ರಮ, ತಾಳ್ಮೆ ಹಾಗೂ ಸ್ಪಂದನೆ ಅತಿಮುಖ್ಯ ಎಂದರು. ಮನೋರಂಜನಾ ಮಾಧ್ಯಮದಲ್ಲಿ ಪ್ರತಿ ವಾರವೂ ಪರೀಕ್ಷೆಯೇ. ನಿಮ್ಮ ಸೃಜನಶೀಲತೆಗೆ ಮಾರುಕಟ್ಟೆಯು ಒರೆ ಹಚ್ಚುತ್ತದೆ. ಅದು ಟಿಆರ್ಪಿ ಮೂಲಕ ನಿಮಗೆ ತಲುಪುತ್ತದೆ ಎಂದ ಅವರು, ಟಿ.ವಿ
ಕಾರ್ಯಕ್ರಮಗಳು ಅನಿವಾರ್ಯವಾಗಿ ಮಾರುಕಟ್ಟೆ, ನಗರಕೇಂದ್ರಿತ ಬದುಕನ್ನು ಅವಲಂಬಿಸಿದೆ. ಯಶಸ್ಸಿನ ಹಾದಿಯನ್ನೇ ಹಿಡಿಯಬೇಕಾಗುತ್ತದೆ ಎಂದು ವಿವರಿಸಿದರು.
‘ಪತ್ರಕರ್ತ ಮೊದಲು ಓದುಗ, ಕೇಳುಗ, ನೋಡುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದ ಅವರು, ‘ಓದು, ಬರಹ, ಒಳ್ಳೆಯ ಕೆಲಸಗಳ ಆರಂಭಕ್ಕೆ ‘ಇಂದು’ ಒಳ್ಳೆಯ ದಿನ. ವಿಳಂಬ ಬೇಡ’ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಭಾಷೆ ಪಕ್ವವಾಗಿರಬೇಕು. ಆದರೆ, ಮೌನವೂ ಬಹುದೊಡ್ಡ ಭಾಷೆ. ಅದರ ಬಳಕೆಯ ಮೇಲೆ ಅವಲಂಬಿಸಿದೆ ಎಂದರು. ಅತ್ಯುತ್ತಮ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಿದ ರಂಜಿತ್, ಎಲ್ಲ ವಿದ್ಯಾರ್ಥಿಗಳಿಗೂ ಸಿಹಿ ನೀಡಿದರು. ‘ಬದುಕು ಚಿಕ್ಕದು. ಸರಳವಾಗಿ, ಸಿಹಿಯಾಗಿ ಆನಂದಿಸಿ’ ಎಂದರು.
ತಮ್ಮ ಚಾಲನ್ನ ಬಿಗ್ಬಾಸ್, ಮಿಥುನರಾಶಿ, ಕನ್ನಡತಿ, ಲಕ್ಷಣ, ಸಿನಿಮಾ, ಮಜಾ ಟಾಕೀಸ್, ಗಿಚ್ಚಿಗಿಲಿಗಿಲಿ, ಫ್ಯಾಮಿಲಿ
ಪವರ್ ಮತ್ತಿತರ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು. ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಹಾಗೂ ಉಪನ್ಯಾಸಕ ರವಿ ಶೆಣೈ, ಹಿರಿಯ ವಿದ್ಯಾರ್ಥಿ ವೆನಿಷಾ ರೋಡ್ರಿಗಸ್ ಇದ್ದರು.