ಬೆಂಗಳೂರು ಪ್ರಾದೇಶಿಕ ಕಛೇರಿ ವ್ಯಾಪ್ತಿಯ ತುಮಕೂರು ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಸಭೆಯು ತುಮಕೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಈ ಸಭೆಯನ್ನು ಉಪಾಧ್ಯಕ್ಷರಾದ ಶ್ರೀ ಅಮರನಾಥ ಶೆಟ್ಟಿ ಕೆಂಜೂರು ಮನೆಯವರು ದೀಪ ಬೆಳಗಿಸಿ ಚಾಲನೆ ನೀಡಿದರು. ಸಭೆಗೆ ಆಗಮಿಸಿದ ಎಲ್ಲಾ ಗಣ್ಯರನ್ನು ಜಿಲ್ಲಾ ನಿರ್ದೇಶಕರಾದ ಶ್ರೀಮತಿ ದಯಾಶೀಲ ಇವರು ಸ್ವಾಗತ ಮಾಡಿದರು. ಇದುವರೆಗೂ ತುಮಕೂರು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಇತ್ತೀಚಿಗೆ ನಿಧನರಾದ ಶ್ರೀ ಪ್ರೆಸ್ ರಾಜಣ್ಣ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಶೀನಪ್ಪ ಸರ್ ಇವರು ಕ್ರಿಯಾ ಯೋಜನೆ ಅನುಷ್ಠಾನದ ಕುರಿತು ಜನಜಾಗೃತಿ ಕಾರ್ಯಕ್ರಮಗಳಾದ ಮಧ್ಯವರ್ಜನ ಶಿಬಿರ, ನವ ಜೀವನ ಸಮಿತಿ ಬಲಪಡಿಸುವಿಕೆ, ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ, ತಂಬಾಕು ವಿರೋಧಿ ದಿನಾಚರಣೆ, ಮಾದಕ ವಸ್ತು ವಿರೋಧಿ ದಿನಾಚರಣೆ, ಗಾಂಧಿ ಜಯಂತಿ ಕಾರ್ಯಕ್ರಮ, ಇನ್ನಿತರ ಜನಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾಮಟ್ಟದಲ್ಲಿ ಉತ್ತಮ ರೀತಿಯಲ್ಲಿ ನಡೆಸುವಂತೆ ತಿಳಿಸಿದರು.
ಸಭೆಯ ಕೊನೆಯಲ್ಲಿ ತುಮಕೂರು ಜಿಲ್ಲಾ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಶ್ರೀ ಅಮರನಾಥ ಶೆಟ್ಟಿ ಕೆಂಜೂರು ಮನೆ ಮತ್ತು ಉಪಾಧ್ಯಕ್ಷರಾಗಿ ಶ್ರೀ ಗಣೇಶ್ ಪ್ರಸಾದ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ನೂತನ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ದಯಾಶೀಲ, ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿ ಶ್ರೀ ತಿಮ್ಮಯ್ಯ ನಾಯಕ್, ಜಿಲ್ಲಾ ವ್ಯಾಪ್ತಿಯ ವೇದಿಕೆಯ ಪದಾಧಿಕಾರಿಗಳು ಮತ್ತು ಜಿಲ್ಲಾ ವ್ಯಾಪ್ತಿಯ ಯೋಜನೆಯ ಯೋಜನಾಧಿಕಾರಿಗಳು, ಜನಜಾಗೃತಿ ಮೇಲ್ವಿಚಾರಕರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ವೇದಿಕೆಯ ಪದಾಧಿಕಾರಿಗಳಿಗೆ ಸಂಪೂರ್ಣ ಸುರಕ್ಷಾ ಕಾರ್ಡ್ ಅನ್ನು ವಿತರಿಸಲಾಯಿತು.