ಜಾನುವಾರುಗಳಲ್ಲಿ ಕಂಡುಬರುವ ಕಂದು ರೋಗ (ಬ್ರೂಸೆಲ್ಲೋಸಿಸ್)ವನ್ನು ತಡೆಗಟ್ಟುನ ನಿಟ್ಟಿನಲ್ಲಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ ಹೆಣ್ಣು ಕರುಗಳಿಗೆ ಲಸಿಕೆ (ಬ್ರೂಸೆಲ್ಲಾ ವ್ಯಾಕ್ಸಿನ್) ಅಭಿಯಾನ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಂದು ರೋಗ ಮುಕ್ತ ಜಿಲ್ಲೆಯಾನ್ನಾಗಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ್, ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಈ ಉಚಿತ ಲಸಿಕಾ ಕಾರ್ಯಕ್ರಮ ಮೇ 31ರ ವರೆಗೆ ಹಮ್ಮಿಕೊಳ್ಳಲಾಗಿದೆ. ರೈತರು 4-8 ತಿಂಗಳೊಳಗಿನ ಹೆಣ್ಣು ಕರುಗಳಿಗೆ ಲಸಿಕೆ ಹಾಕಿಸಿ ರೋಗ ಮುಕ್ತಗೊಳಿಸಬಹುದು.
ಇದು ಬ್ಯಾಕ್ಟೀರಿಯಾದಿಂದ ಹರಡುವ ರೋಗವಾಗಿದ್ದು, ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಒಂಟೆ ಮತ್ತು ಕುದುರೆಗಳು ಈ ರೋಗಕ್ಕೆ ತುತ್ತಾಗುತ್ತವೆ. ಈ ರೋಗವನ್ನು ತಡೆಗಟ್ಟಲು ಲಸಿಕೆ ಹಾಕಿಸುವುದೊಂದೇ ಪರಿಹಾರ. ಈ ರೋಗದಲ್ಲಿ ಸಾವಿನ ಪ್ರಮಾಣಕ್ಕಿಂತ ಸಂತಾನೋತ್ಪತ್ತಿಗೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಪಶು ವೈದ್ಯರು.
ಭಾರತದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳು ಹೊರ ದೇಶಗಳಿಗೆ ರಫ್ತಾಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ನಮ್ಮಲ್ಲಿ ಉತ್ಪತ್ತಿಯಾಗುವ ಹಾಲು ರೋಗ ಮುಕ್ತ ಆಗಿಲ್ಲದಿರುವುದಿಲ್ಲ. ಆದ್ದರಿಂದ ಕೇಂದ್ರ ಸರಕಾರ ಜಾನುವಾರುಗಳಿಗೆ ಸಂಬಂಧಿಸಿದ ರೋಗಗಳನ್ನು ತಡೆ ಯುವ ನಿಟ್ಟಿನಲ್ಲಿ 2021ರಲ್ಲಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆ (ಎನ್ಎಡಿಸಿಪಿ)ಯನ್ನು ಆರಂಭಿಸಿದೆ. ಜಾನುವಾರುಗಳಿಗೆ ಸಂಬಂಧಿಸಿದ ಎಲ್ಲ ರೋಗಗಳ ನಿಯಂತ್ರಣಕ್ಕೆ ಕೆಲಸ ನಡೆಯುತ್ತದೆ.
ಕಂದು ರೋಗ ನಿಯಂತ್ರಣ ಉಚಿತ ಲಸಿಕಾ ಕಾರ್ಯಕ್ರಮ ವರ್ಷದಲ್ಲಿ ಮೂರು ಸಲ ಹಮ್ಮಿಕೊಳ್ಳಲಾಗುತ್ತದೆ. ಒಂದು ಬಾರಿ ಲಸಿಕೆ ಹಾಕಿಸಿದರೆ ಜೀವನ ಪೂರ್ತಿ ರೋಗ ಬರುವುದಿಲ್ಲ. ಜಿಲ್ಲೆಯಲ್ಲಿ ಎರಡನೇ ಸುತ್ತಿನ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು, 5-7 ಸಾವಿರ ಕರುಗಳಿಗೆ ಲಸಿಕೆ ಹಾಕಲು ಉದ್ದೇಶಿಸಲಾಗಿದೆ. ಹೆಚ್ಚಿನ ಮಾಹಿತಿಗೆ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು.
– ಡಾ| ಅರುಣ್ ಕುಮಾರ್ ಶೆಟ್ಟಿ
ಉಪ ನಿರ್ದೇಶಕರು, ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ದ.ಕ.