ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ. ಭುಜಂಗ ಶೆಟ್ಟಿ (69) ಅವರು ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಡಾ.ಭುಜಂಗ ಶೆಟ್ಟಿ ಅವರಿಗೆ ಸಂಜೆ ಮನೆಯಲ್ಲಿ ತೀವ್ರ ಹೃದಯಾಘಾತವಾಗಿದೆ. ಕೂಡಲೇ ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಡಾ.ಭುಜಂಗ ಶೆಟ್ಟಿ ನಿಪುಣ ಕಣ್ಣಿನ ಪೊರೆ ಮತ್ತು ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿದ್ದರು. 1978 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿದ ಅವರು 1982 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ಆಪ್ತಾಲ್ಮಿಕ್ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರದ ರೆಸಿಡೆನ್ಸಿ ಮಾಡಿದ್ದರು. ಅವರು ಎಂಬತ್ತರ ದಶಕದಲ್ಲಿ ಸಣ್ಣ ಕ್ಲಿನಿಕ್ನಲ್ಲಿ ನೇತ್ರಶಾಸ್ತ್ರವನ್ನು ಪ್ರಾರಂಭಿಸಿದರು. ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಿದ್ದರು.