ಮಕ್ಕಳ ಕುರಿತಾಗಿ ಅಥವಾ ಮಕ್ಕಳಿಗಾಗಿಯೇ ರಚಿಸಿದ ಸಾಹಿತ್ಯವನ್ನು ಮಕ್ಕಳ ಸಾಹಿತ್ಯ ಎಂದು ವಾಖ್ಯಾನಿಸಲಾಗಿದೆ. ವಿಸ್ತರಿಸಿ ಹೇಳುವುದಾದರೆ ಮಕ್ಕಳ ಸಾಹಿತ್ಯವು ಪ್ರಮುಖವಾಗಿ ಕಥೆ, ಕಾದಂಬರಿ, ಪದ್ಯ, ಜಾನಪದ, ವಿಜ್ಞಾನ ಮುಂತಾದ ಪ್ರಕಾರಗಳಿಂದ ರಚಿಸಲ್ಪಟ್ಟಿದ್ದು, ಮಕ್ಕಳ ಮನೋರಂಜನೆಗಾಗಿ ಮಾತ್ರವಲ್ಲದೆ ಅವರ ಬೌದ್ಧಿಕ ವಿಕಾಸಕ್ಕಾಗಿ ಮತ್ತು ಭಾಷಾ ಬೆಳವಣಿಗೆಗಾಗಿಯೇ ಇರುವ ಸಾಹಿತ್ಯವೆನ್ನಬಹುದು. ಮಕ್ಕಳು ಸಾಹಿತ್ಯ ಪಠ್ಯಗಳನ್ನು ಶಾಲಾ ಚಟುವಟಿಕೆಯ ಭಾಗವಾಗಿ ಓದುವುದು ತಮ್ಮ ವೈಯಕ್ತಿಕ ಓದಿಗಿಂತ ಹೆಚ್ಚಿನ ಸಂತೋಷವನ್ನು ನೀಡುತ್ತದೆ. ಶಾಲೆಯಲ್ಲಿ ಸಾಹಿತ್ಯದ ಓದುವಿಕೆ ಮಗುವಿನ ಮಾನಸಿಕ ಬೆಳವಣಿಗೆ, ಸ್ವ ಅನುಭವ ಹಾಗೂ ಭಾಷಾ ಪ್ರೌಢಿಮೆಯನ್ನು ವಿಸ್ತರಿಸಲು ಸಹಾಯಕವಾಗುತ್ತದಲ್ಲದೇ ಮಗುವಿನ ಕಲ್ಪನಾ ಶಕ್ತಿ ಮತ್ತು ಕಲ್ಪನಾ ಲೋಕವನ್ನು ವಿಸ್ತರಿಸಿಕೊಳ್ಳಲು ಸಹಕಾರಿ.
ಓದಿನ ಚಟುವಟಿಕೆ ಅವರ ದೈಹಿಕ, ಮಾನಸಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ. ಮಕ್ಕಳ ಸಾಹಿತ್ಯದ ಕಥಾವಸ್ತು, ಪ್ರಕಾರ ಮತ್ತು ಭಾಷೆ ಮಕ್ಕಳಿಗೆ ಇಷ್ಟವಾಗುವಂತಿರಬೇಕು. ಅಂದರೆ ಕೃತಿಯಲ್ಲಿನ ಥೀಮ್ಗಳು, ಸಂಬಂಧಗಳು ಹಾಗೂ ಅದರಲ್ಲಿನ ಭಾಷೆ ಅತ್ಯಂತ ಕ್ಲಿಷ್ಟಕರವಾಗಿದ್ದರೆ ಆ ಕೃತಿಯು ಮಕ್ಕಳ ಸಾಹಿತ್ಯ ಕೃತಿಯೆನಿಸಿಕೊಳ್ಳಲು ಯೋಗ್ಯವೆನಿಸಲಾರದು.
ಮಕ್ಕಳ ಸಾಹಿತ್ಯ ಕೃತಿಗೆ ಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ -ನೈತಿಕ ಪಾಠ. ಕೃತಿಯು ಸಮಾಜದಲ್ಲಿ ಹುದುಗಿರುವ ನೈತಿಕತೆ ಮತ್ತು ಮೌಲ್ಯಗಳನ್ನು ಹುಡುಕಲು ಮಕ್ಕಳನ್ನು ಪ್ರೇರೇಪಿಸುವಂತಿರಬೇಕು. ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಕಥಾವಸ್ತು ಪ್ರಮುಖವೆನಿಸುತ್ತದೆ. ವಿಶೇಷವಾಗಿ ಒಂದು ದೇಶ ಮತ್ತು ಕಾಲವನ್ನೂ ಒಳಗೊಂಡಿರುತ್ತದೆ ಅಥವಾ ದೇಶೀಯವಾಗಿರುತ್ತದೆ. ವಸ್ತು ಅಥವಾ ವಿಷಯಗಳ ಆಧಾರಿತ ಕೃತಿಗಳೂ ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ಸೇರ್ಪಡೆಯಾಗಿವೆ.
ಅರ್ಥಶಾಸ್ತ್ರ ಮತ್ತು ಗಣಿತ ಮುಂತಾದ ವಿಷಯಗಳನ್ನೊಳಗೊಂಡ ಕೃತಿಗಳು ಅವುಗಳದೇ ಆದ ವಸ್ತುಗಳನ್ನೊಳಗೊಂಡ ಕಾರಣ ಹಾಗೂ ಅಲ್ಲಿ ರಂಜನೆ, ಕಲ್ಪನೆ, ಭಾಷಾ ಚಮತ್ಕಾರಗಳಿಗೆ ಆಸ್ಪದ ಇಲ್ಲದಿರುವುದರಿಂದ ಅವುಗಳು ಸಾಂಪ್ರದಾಯಿಕ ಸಾಹಿತ್ಯ ಪರಿಧಿಗೆ ಒಳಪಡುವುದಿಲ್ಲ. ಇನ್ನು ಮಕ್ಕಳ ಸಾಹಿತ್ಯ ರಚನೆಯಲ್ಲಿ ಭಾಷಾ ಬಳಕೆ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.
ಹೇಳುವ ವಿಶಿಷ್ಟ ತಂತ್ರಗಾರಿಕೆ, ಸಾಹಿತ್ಯಿಕ ಭಾಷೆ, ಸನ್ನಿವೇಶಗಳು,ಭೌಗೋಳಿಕ, ಐತಿಹಾಸಿಕ, ಸಾಮಾಜಿಕ, ರಾಜಕೀಯ, ಪರಿಸ್ಥಿತಿಗಳನ್ನು ಕೂಡಿರುತ್ತವೆ. ಸೈದ್ಧಾಂತಿಕ ವಿರೋಧಾಭಾಸ, ಆಕಸ್ಮಿಕ ತಿರುವುಗಳು ಇಲ್ಲಿ ಮುಖ್ಯವಾದದ್ದು.
ಮಕ್ಕಳಿಗೆ ಕಾದಂಬರಿಗಳನ್ನು ಓದುವ ಕ್ರಮವನ್ನು ಶಾಲೆಯಲ್ಲಿಯೇ ಕಲಿಸುವುದರಿಂದ ಅವರು ಸ್ವತಂತ್ರವಾಗಿ ಕಾದಂಬರಿಗಳನ್ನು ಅರ್ಥಪೂರ್ಣವಾಗಿ ಓದುವುದರೊಂದಿಗೆ ಕಥೆಯನ್ನು ವಿಶ್ಲೇಷಿಸುವ ಹಂತಕ್ಕೂ ತಲುಪುತ್ತಾರೆ.
ಸಾಹಿತ್ಯಿಕ ಭಾಷೆ: ಭಾಷೆಯನ್ನು ಕಾದಂಬರಿಯ ಒಂದು ಕಚ್ಚಾವಸ್ತು ಎನ್ನಲಾಗುತ್ತದೆ. ಕಾದಂಬರಿ ರಚನೆಯಲ್ಲಿ ಲೇಖಕನು ಬಳಸುವ ಭಾಷಾ ಶೈಲಿ, ಶಬ್ದಗಳ ಆಯ್ಕೆ ಮತ್ತು ವಾಕ್ಯರಚನೆ ಕಥೆಯ ಯಶಸ್ಸಿಗೆ ಒಂದು ಪ್ರಮುಖ ಅಂಶವಾಗುತ್ತದೆ.
ಕಥಾ ವಸ್ತು ಮತ್ತು ಅದರ ಮೌಲ್ಯ: ಕಾದಂಬರಿಯ ಯಶಸ್ಸಿಗೆ ಕೇವಲ ಪಾತ್ರಗಳು, ಸನ್ನಿವೇಶ ಮತ್ತು ಭಾಷಾಶೈಲಿ ಮಾತ್ರವೇ ಮುಖ್ಯವಾಗುವುದಿಲ್ಲ. ಕಥಾ ವಸ್ತು ಮತ್ತು ಅದರ ಗುಣಮಟ್ಟ ಎಲ್ಲ ಅಂಶಗಳಿಗಿಂತಲೂ ಹೆಚ್ಚಿನ ಮಹತ್ವವನ್ನು ಹೊಂದಿರುತ್ತದೆ. ಉದಾ: ತ್ಯಾಗ, ಸಾಹಸ, ಪ್ರೇಮ, ರಾಷ್ಟ್ರೀಯತೆ ಮುಂತಾದ ಅಂಶಗಳನ್ನು ಕಥಾವಸ್ತುಗಳು ಎನ್ನಬಹುದು. ಕಾದಂಬರಿಕಾರನು ಈ ವಸ್ತುಗಳನ್ನು ಆಧರಿಸಿಯೇ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾನೆ. ಮಕ್ಕಳ ಸಾಹಿತ್ಯದ ಕುರಿತು ಹೇಳುವುದಾದರೆ ಆ ಕಥೆಗಳು ಸರಳತೆಯನ್ನು ಮೈಗೂಡಿಸಿಕೊಂಡಿರುತ್ತವೆ. ಅಲ್ಲದೇ ಭಾಷಾ ಕ್ಲಿಷ್ಟತೆಯು ಮಕ್ಕಳು ಕೃತಿಯೊಂದಿಗಿನ ಸಂವಹನಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಲೇಖಕನ ಆದ್ಯ ಕರ್ತವ್ಯ. ಸಾಹಿತ್ಯದ ಓದು ಮಕ್ಕಳನ್ನು ಸಂತೋಷಗೊಳಿಸುತ್ತದೆಯಲ್ಲದೆ, ಕಲ್ಪನೆಗಳನ್ನು ಉನ್ನತೀಕರಣಗೊಳಿಸುವ, ಬದುಕಿನ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳುವ ಅವಕಾಶಗಳನ್ನು ನೀಡುತ್ತದೆ. ಹೀಗಾಗಿ ಮಕ್ಕಳು ಚಿಕ್ಕಂದಿನಿಂದಲೇ ಸಾಂಸ್ಕೃತಿಕ ವಾತಾವರಣದಲ್ಲಿನ ಅನೇಕ ಸವಾಲುಗಳನ್ನು ಎದುರಿಸುವ ಮತ್ತು ಸೂಕ್ಷ್ಮತೆಗಳನ್ನು ಅರ್ಥೈಸಿಕೊಳ್ಳುವ ಶಕ್ತಿಯನ್ನು ತಮಗೆ ಅರಿವಿಲ್ಲದಂತೆಯೆ ಬೆಳೆಸಿಕೊಳ್ಳುತ್ತಾರೆ. ಅದ್ದರಿಂದ ಮಕ್ಕಳು ಸಾಹಿತ್ಯ ಕೃತಿಗಳನ್ನು ಹೆಚ್ಚಾಗಿ ಓದುವಂತೆ ಪ್ರೇರೇಪಿಸುವುದು ಎಂದಿಗಿಂತ ಇಂದು ಹೆಚ್ಚು ಪ್ರಸ್ತುತ.