ಜಾನಪದ ಜನಜೀವನದ ಜೀವಾಳವಾಗಿದೆ : ಚಂದ್ರಹಾಸ ಕೆ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.16: ಜನಜೀವನದಲ್ಲಿ ಜಾನಪದ ಜೀವಾಳವಾಗಿದೆ. ಜಾನಪದದ ವಿಶೇಷತೆ ಸಾಂಸ್ಕೃತಿಕವಾಗಿ ರೂಪುಗೊಂಡಿದೆ. ಜಾನಪದ ಅನ್ನೋದು ಮನುಕುಲದ ಜೀವನವಾಗಿದೆ. ಆದರೆ ಕಾಲಕ್ರಮೇಣ ಇದರ ಅರಿವು ಕ್ಷಿಣಿಸುತ್ತಿರುವುದು ಸಮಂಜಸವಲ್ಲ. ಇಂತಹ ಸಮಯದಲ್ಲಿ ಈ ಜಾನಪದ ಪರಿಷತ್ತು ಜನರೆಲ್ಲರನ್ನೂ ಒಗ್ಗೂಡಿಸಿ ಜಾನಪದ ಸೊಡಗನ್ನು ನವಜನಾಂಗಕ್ಕೆ ಪರಿಚಯಿಸಿ ಬೆಳೆಸುತ್ತಿರುವ ಕಾಯಕ ಶ್ಲಾಘನೀಯವಾಗಿದೆ. ಇದೊಂದು ಉತ್ತಮ ಸೇವೆಯಾಗಿದೆ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು (ರಿ.) ಬೆಂಗಳೂರು ಇದರ ಮಹಾರಾಷ್ಟ್ರ ಘಟಕವು ಇಂದಿಲ್ಲಿ ಭಾನುವಾರ ಅಪರಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದ ಕಂಬಿಹಳ್ಳಿ ಶ್ರೀಮತಿ ಅಪ್ಪಿ ಕೃಷ್ಣ ಶೆಟ್ಟಿ ವೇದಿಕೆಯಲ್ಲಿ ಸುವರ್ಣ ಕರುನಾಡ ಸನಾತನ ಸಂಸ್ಕೃತಿಯ ಮೇರು ಕಲಾಪ್ರಕಾರಗಳ ಚಿಂತನ-ಮಂಥನ-ಗಾಯನ-ನರ್ತನ-ಸಮಗ್ರ ಸಂಗಮಗಳ ಜಾನಪದ ಕಲಾ ಮಹೋತ್ಸವ ಸಂಭ್ರಮಿಸಿದ್ದು ದೀಪ ಬೆಳಗಿಸಿ ಮಹೋತ್ಸವಕ್ಕೆ ಚಾಲನೆಯನ್ನಿತ್ತು ಚಂದ್ರಹಾಸ ಶೆಟ್ಟಿ ಮಾತನಾಡಿದರು.
ಕರ್ನಾಟಕ ಜಾನಪದ ಪರಿಷತ್ತು, ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ತುಳು ಕೂಟ ಬರೋಡ (ಗುಜರಾತ್) ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ಗೌರವ ಅತಿಥಿಯಾಗಿ ಸೈಂಟ್ ಆಗ್ನೇಸ್ ಹೈಸ್ಕೂಲು ಮೀರಾರೋಡ್ ಇದರ ಕಾರ್ಯಾಧ್ಯಕ್ಷ ಡಾ| ಅರುಣೋದಯ ಎಸ್.ರೈ ವೇದಿಕೆಯನ್ನಲಂಕರಿಸಿದ್ದರು.
ಶಶಿಧರ ಶೆಟ್ಟಿ ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ ಜಾನಪದ ಅಂದರೆ ಹಿಂದಿನ ಜೀವನ ಶೈಲಿಯ ನೆನಪಿಸುವುದು ಸಹಜವಾಗಿದೆ. ಮೇರಾ ಗಾಂವ್ ಮೇರಾ ದೇಶ್ ಎಂಬಂತೆ ಕನ್ನಡದಲ್ಲಿ ಜಾನಪದ ನೃತ್ಯ, ಹಾಡುಗಳು, ಇನ್ನಿತರ ಕಲೆಗಳು ಜೀವನಾಲಂಬಿತವಾಗಿದೆ. ಇದೆಲ್ಲವೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡಿದೆ. ಇಂತಹ ಕಲೆಗಳ ಉಳಿವು ಷೋಷಣೆಗಾಗಿ ಅಸ್ತಿತ್ವಕ್ಕೆ ಬಂದಿರುವ ಈ ಸಂಸ್ಥೆಯ ಬೆಳವಣಿಗೆ ನಮ್ಮನಿಮ್ಮೆಲ್ಲರ ಪರಮ ಕರ್ತವ್ಯವಾಗಬೇಕು. ಹಳೆಕಾಲದಲ್ಲಿ ಮನೋರಂಜನೆಯ ಒಂದು ಭಾಗವೇ ಜಾನಪದವಾಗಿದೆ. ಆದ್ದರಿಂದ ಜಾನಪದವು ಅರ್ಥಪೂರ್ಣವಾದ ಕಲಾರಾಧನೆಯ ಭಾಗವಾಗಿದೆ. ಇದನ್ನು ನಮ್ಮ ಜೀವನದಲ್ಲಿ ಉಪಯೋಗಿಸಿ ಕೊಂಡಾಗ ನಮ್ಮ ಬದುಕು ಸಾರ್ಥಕವಾಗ ಬಲ್ಲದು ಎಂದರು.
ಸಂಸ್ಥೆಯ ಸಮರ್ಥ ಮುನ್ನಡೆಗೆ ದಕ್ಷ ನಾಯಕತ್ವದ ಸಾರಥಿಯ ಅಗತ್ಯವಿದ್ದು ಈ ಜಾನಪದ ಪರಿಷತ್ತುಗೆ ಡಾ| ಆರ್.ಕೆ ಶೆಟ್ಟಿ ಅವರಂತಹ ಸೂಕ್ತ ನಾಯಕ ದೊರೆತಿದ್ದಾರೆ. ಉತ್ತಮ ನಾಯಕತ್ವ ದೊರೆತಲ್ಲಿ ಒಂದು ಸಂಸ್ಥೆಯ ಬೆಳವಣಿಗೆ ಸುಸಾಂಗವಾಗಿ ಸಾಗುವುದು. ಭಾರತೀಯ ಜಾನಪದದ ವಿಸ್ತಾರತ್ವಕ್ಕೆ ಇಂತಹ ವೇದಿಗೆ ಸೂಕ್ತವಾಗಿದೆ ಎಂದು ಅರುಣೋದಯ ರೈ ತಿಳಿಸಿದರು.
ಮೇಧಾವಿಗಳಿಂದ ನಾನು ಜಾನಪದವನ್ನು ಅರ್ಥೈಸಿರುವೆನು. ಹಳೆ ಕಾಲದಲ್ಲಿನ ಪ್ರೀತಿ, ವಾತ್ಸಲ್ಯ, ಪರಸ್ಪರ ಗೌರವ ಇವೆಲ್ಲರ ಮಧ್ಯೆ ಜಾನಪದವು ಸಾಂಸ್ಕೃತಿಕ ರೂಪವಾಗಿ ನೆಲೆಯಾಗಿದೆ ಅನ್ನೋದು ನನ್ನ ಅಭಿಮತ. ಇಂತಹ ಜಾನಪದ ಅನಾವರಣ, ಭಾವೀ ಜನಾಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಶ್ರಮಿಸುತ್ತಿದೆ. ನಮಗೆ ಕರ್ನಾಟಕ ಸರಕಾರವು ಜಾನಪದ ಪರಿಷತ್ತು ಮೂಲಕ ಕೊಟ್ಟಿರುವ ಜವಾಬ್ದಾರಿ ನಿಭಾಯಿಸುವ ಪ್ರಯತ್ನ ನಮ್ಮದಾಗಿದೆ. ಹೊರನಾಡ ಮಹಾರಾಷ್ಟ್ರದ ಮಣ್ಣಿನಲ್ಲಿ ಉಳಿಸಿ ಈ ಕಲೆಯನ್ನು ಬೆಳೆಸಬೇಕು. ಕಲಾವಿದರನ್ನು ಪ್ರೊತ್ಸಾಹಿಸಬೇಕು ಅನ್ನೋದೇ ನಮ್ಮ ಉದ್ದೇಶವಾಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಆರ್.ಕೆ ಶೆಟ್ಟಿ ನುಡಿದರು.
ಕಜಾಪಮ ಘಟಕದ ಗೌ| ಪ್ರ| ಕಾರ್ಯದರ್ಶಿ ಅಶೋಕ್ ಪಕ್ಕಳ, ಗೌರವ ಕೋಶಾಧಿಕಾರಿ ಗಣೇಶ್ ಜಿ.ನಾಯ್ಕ್, ಜತೆ ಕೋಶಾಧಿಕಾರಿ ಕುಸುಮ ಸಿ.ಪೂಜಾರಿ, ಮಹಿಳಾಧ್ಯಕ್ಷೆ ಅನಿತಾ ಯು.ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಜಾಪಮ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರು, ಸಲಹಾಸಮಿತಿ ಸದಸ್ಯರು ಮತ್ತು ಸದಸ್ಯರನೇಕರು ಹಾಜರಿದ್ದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಾರಾಷ್ಟ್ರದ ಹೆಸರಾಂತ ಕಲಾ ತಂಡಗಳು ವೈವಿಧ್ಯಪೂರ್ಣ ಕರ್ನಾಟಕ ಜಾನಪದ ನೃತ್ಯ (ಸ್ಪರ್ಧೆ), ನಾಡಾ ಗೀತಾ ಗುಂಜನ, ವಿಶೇಷ ಆಮಂತ್ರಿತ ಕಲಾವಿದರು ವಿವಿಧ ಜಾನಪದ ವಿನೋದಾವಳಿಗಳನ್ನು ಪ್ರಸುತ ಪಡಿಸಿದರು.
ಪ್ರಶಾಂತಿ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಶ್ರೀನಿವಾಸ ಪಿ.ಸಾಫಲ್ಯ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಫಗುಪ್ಚ, ಸ್ಮರಣಿಕೆಗಳನ್ನೀಡಿ ಗೌರವಿಸಿದರು. ಕರ್ನೂರು ಮೋಹನ್ ರೈ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಕಜಾಪಮ ಘಟಕವು ಪ್ರಥಮ ವಾರ್ಷಿಕ ಸಂಭ್ರಮ ಆಚರಿಸಿತು.