ಮುಂಬಯಿ ವಿಶ್ವವಿದ್ಯಾನಿಲಯ, ಕನ್ನಡ ವಿಭಾಗದ ಎಂ. ಎ. ದ್ವಿತೀಯ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಸವಿತಾ ಅರುಣ್ ಶೆಟ್ಟಿ ಅವರು ‘ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ. ಹೊರನಾಡಾದ ಮುಂಬೈಯಲ್ಲಿ ನೆಲೆಸಿ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಸಾಹಿತ್ಯವನ್ನು ವಿಭಿನ್ನ ನೆಲೆಗಳಲ್ಲಿ ಬಲಗೊಳಿಸಿದ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ಶತಮಾನೋತ್ಸವದ ನೆನಪಿಗೆ ಮುಂಬೈ ವಿಶ್ಕವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರಿಗೆ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ನೀಡುವ ನಿರ್ಧಾರಕ್ಕೆ ಬರಲಾಗಿದ್ದು, ಈ ಚೊಚ್ಚಲ ಪುರಸ್ಕಾರಕ್ಕೆ ಸವಿತಾ ಅರುಣ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರವು ನಗದು ಬಹುಮಾನ, ಕೃತಿ ಕರಂಡಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
ಸವಿತಾ ಅರುಣ್ ಶೆಟ್ಟಿ ಅವರು ಈಗಾಗಲೇ ‘ಮಿತ್ರಾ ವೆಂಕಟ್ರಾಜ್ – ಬದುಕು ಬರಹ’ ಎಂಬ ಸಂಪ್ರಬಂಧವನ್ನು ರಚಿಸಿ ವಿಶ್ವ ವಿದ್ಯಾಲಯಕ್ಕೆ ಸಾದರಪಡಿಸಿದ್ದಾರೆ. ಇದೀಗ ” ಮುಂಬೈ ಕನ್ನಡ ಲೋಕದ ಅವಲೋಕನ ” ಎಂಬ ಶೋಧ ಸಂಪ್ರಬಂಧದ ರಚನೆಯಲ್ಲಿ ನಿರತರಾಗಿದ್ದಾರೆ. ಸವಿತಾ ಅರುಣ್ ಶೆಟ್ಟಿ ಅವರು ಉತ್ತಮ ಸಾಹಿತ್ಯಾಸಕ್ತರಾಗಿದ್ದು, ಅವರು ರಚಿಸಿದ ಲಘುಪ್ರಬಂಧ, ಕವಿತೆ, ಲೇಖನಗಳು ಈಗಾಗಲೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರು ಮೂಲತಃ ಕಾರ್ಕಳ ತಾಲೂಕಿನ ಬೋಳ ಗ್ರಾಮದವರು. ಈ ಪುರಸ್ಕಾರವನ್ನು ಎಪ್ರಿಲ್ 15ರಂದು ಮುಂಬಯಿ ವಿಶ್ವ ವಿದ್ಯಾಲಯದಲ್ಲಿ ಪ್ರದಾನ ಮಾಡಲಾಗುವುದೆಂದು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಹಾಗೂ “ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ”ದ ಸಂಚಾಲಕ ಅರವಿಂದ ಬಲ್ಲಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.