ನಾವು ನಿಂತ ತುಂಡು ನೆಲ ನಮ್ಮದಾಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಅದು ಆತ್ಮಕಂಟಿದ ತಪನೆ! ಆ ಕನಸುಗಳು ನಸಾಗುವಾಗ ಆ ಕುಟುಂಬದವರ ಕಣ್ಣಲ್ಲಿ ಆನಂದ ಭಾಷ್ಪ! ಅವರ ನೆಮ್ಮದಿಯ ನಿಟ್ಟುಸಿರು ಹೊರ ಹಾಕುವ ಆಶಿರ್ವಾದದ ಭಾವವೇ ನಮ್ಮ ನೆತ್ತಿಕಾಯುತ್ತದೆ.
ಕೋಡಿ ಕನ್ಯಾನ ಮತ್ತು ಹೊಸಬೆಂಗ್ರೆಯ ಜನರ ಭೂಮಿ ಹಕ್ಕಿನ ಕನಸು ಮೊನ್ನೆ ನನಸಾಯಿತು. ಒಟ್ಟು ನೂರಾ ಎಪ್ಪತ್ತೆರಡು ಕುಟುಂಬದ ಕೈಗೆ ಹಕ್ಕು ಪತ್ರಗಳು ದಕ್ಕಿದವು. ಆ ನೆಲದ ಪಹಣಿಯಲ್ಲಿ ಮೊನ್ನೆ ಮೊನ್ನೆ ತನಕ ಸರ್ಕಾರ ಎಂದಿದ್ದರೆ ನಾಳೆಯಿಂದ ಆಯಾ ಕುಟುಂಬದ ಸದಸ್ಯರ ಹೆಸರಿರುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿ. ಅದೆಲ್ಲದಕ್ಕೂ ಕಾರಣವಾದದ್ದು ಕುಂದಾಪುರದ ಶಾಸಕ ಹಾಲಾಡಿ. ಮತ್ತು ಸಚಿವ ಕೋಟ. ಈ ಶ್ರೀನಿವಾಸ ಧ್ವಯರಿಗೆ ಅಭಿಮಾನದ ನಮಸ್ಕಾರಗಳು.
ಹಿಂದೆ 1993 ರಲ್ಲೇ ಉಡುಪಿ ಪಡುಕರೆಯ ಜನತೆಯ ಬೂಮಿ ಹಕ್ಕಿನ ಬಗ್ಗೆ ಕಾರ್ಯನಿರತರಾಗಿ ಅದರಲ್ಲಿ ಯಶ ಕಂಡವರು ಉಡುಪಿ ಜಿಲ್ಲೆ ಕಂಡ ಮತ್ತೊಬ್ಬ ಅದ್ಭುತ ರಾಜಕಾರಣಿ ಯು.ಆರ್.ಸಭಾಪತಿ. ಮುಂದೆ ಸಭಾಪತಿಯವರನ್ನ ಜಿಲ್ಲೆಯೇ ಮರೆತು ಬಿಟ್ಟದ್ದು ವಿಷಾದ. ಅದರ ಅಂಗೀಕಾರವಾದದ್ದು ತೀರ ಮೊನ್ನೆ ಮೊನ್ನೆ ಜಾಮದಾರ್ ಅವಧಿಯಲ್ಲಿ, ಆಗ ಶಾಸಕರು ರಘುಪತಿ ಭಟ್ಟರು. ಕುಂದಾಪುರ ವಿದಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಕೋಡಿ ಕನ್ಯಾನ ಮತ್ತು ಹೊಸ ಬೆಂಗ್ರೆ ಜನತೆಯ ಈ ಭೂಮಿ ಹಕ್ಕಿನ ಬಗ್ಗೆ ದಶಕಗಳಿಂದಲೂ ಹಲವು ಮಾದರಿಯಲ್ಲಿ ಹೋರಾಟಗಳು ನಡೆದಿದ್ದವು, ಆ ಕಾರಣಕ್ಕಾಗಿಯೇ ಚುನಾವಣಾ ಬಹಿಷ್ಕಾರವೂ ನಡೆಯಿತು, ಮಂತ್ರಿಗಳು, ಶಾಸಕರು, ಅಧಿಕಾರಿಗಳು ಎಲ್ಲರೂ ಬಂದು ಭರವಸೆಯನ್ನೂ ಕೊಟ್ಟು ಹೋದರು.
ಅಂತಿಮವಾಗಿ ಅದರ ಹಿಂದೆ ಬಿದ್ದದ್ದು ಮೂಡುಗಿಳಿಯಾರು ಜನಸೇವಾ ಟ್ರಸ್ಟ್! ಗೆಳೆಯ ಪ್ರವೀಣ್ ಯಕ್ಷಿಮಠ ಅದೊಂದು ದಿವಸ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಹೇಳುತ್ತಾ ಅಲ್ಲಿ ನಾನೂರಕ್ಕೂ ಹೆಚ್ಚು ಮನೆಗಳಿವೆ, ಯಾರ ಹೆಸರಲ್ಲೂ ರೆಕಾರ್ಡ್ ಇಲ್ಲ, ಅವರಿಗೆಲ್ಲ ನ್ಯಾಯ ದಕ್ಕಬೇಕು ಎಂದರು. ನ್ಯಾಯ ಸಿಗಬೇಕಿದ್ದರೆ ಆಂದೋಲನದ ಮಾದರಿಯಲ್ಲಿ ಸರ್ಕಾರದ, ಅಧಿಕಾರಿಗಳ, ಆಳುವವರ ಬೆನ್ನು ಬೀಳಬೇಕು, ಇದು ಸಾಮಾಜಿಕ ಜಾಲತಾಣದಿಂದ ಆಗುವುದಲ್ಲ ಎಂದು ತಿಳಿದವರೇ ನಾವು ಅದರ ಬೆನ್ನು ಬಿದ್ದೆವು. ಪರಿಸರದ ಜನರ ನಿಯೋಗದೊಂದಿಗೆ ಸಚಿವ ಸುನಿಲ್ ಕುಮಾರ್, ಉಸ್ತುವಾರಿ ಸಚಿವ ಅಂಗಾರ ಬಾಗಿಲು ಬಡಿದಿದ್ದೆವು, ಅದೇನು ನಿರೀಕ್ಷಿತ ಫಲ ನೀಡಿರಲಿಲ್ಲ. ಕುಂದಾಪುರದ ಶಾಸಕರಲ್ಲಿ ದುಂಬಾಲು ಬಿದ್ದೆವು. ಅದೊಂದು ದಿವಸ ಶಾಸಕರು ಅದಕ್ಕಾಗಿ ಮಾಡಿದ ಹೋರಾಟದ ಪೈಲು ಹರವಿ ಕೂತರು, ನಿರಂತರವಾಗಿ ಸರ್ಕಾರದ ಜೊತೆಗೆ ಸಂಪರ್ಕವಿದ್ದ ಬಗ್ಗೆ ಮಾಹಿತಿ ಕೊಟ್ಟರು, ಮೇಲಿನ ಅಧಿಕಾರಿಗಳ ಅಸಹಕಾರದ ಬಗ್ಗೆ ನೊಂದು ನುಡಿದರು, ಈ ಸಾರಿ ಕೊನೆಯ ಪ್ರಯತ್ನ ಮಾಡುವೆ ಎಂದು ಭರವಸೆಯನ್ನೂ ಕೊಟ್ಟರು, ಅದರ ನಂತರವೇ ಹೋರಾಟಕ್ಕೆ ಹೊಸ ಕಾವು-ಕಾಯ ದೊರೆತದ್ದು.
ಹಾಲಾಡಿ ಕಡತದ ಹಿಂದೆ ಬಿದ್ದರು!
ಎಲ್ಲಾ ದಾಖಲೆಗಳ ಸಂಗ್ರಹದ ಮೂಲಕ ಶಾಸಕರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೆವಿನ್ಯೋ ಅಧಿಕಾರಿಗಳು ಮತ್ತು ಸಿ.ಆರ್.ಝಡ್ ಅಧಿಕಾರಿಗಳ ಸಭೆ ನಡೆಸಿ ಸಿ.ಆರ್.ಝಡ್ ಅಧಿಕಾರಿಗಳು ನಮ್ಮ ಅಭ್ಯಂತರವಿಲ್ಲ ಎಂದು ಪತ್ರಕೊಡುವಂತೆ ಆಗ್ರಹಿಸಿದರು. ಅಲ್ಲಿಂದ ಮತ್ತೆ ಕಡತವನ್ನ ಬೆಂಗಳೂರಿಗೆ ಒಯ್ದು ಸಚಿವಾಲಯದ ಹಿಂದೆ ಬಿದ್ದರು. ಕಂದಾಯ ಮಂತ್ರಿ ಆರ್.ಅಶೋಕ್ ಕೈಗೆ ಸಿಗುವ ಸಚಿವರಲ್ಲ ಬಿಡಿ! ಶಾಸಕರು ಪಟ್ಟು ಬಿಡದೆ ಪ್ರತೀ ಸಾರಿ ಮೀಟಿಂಗಿಗೆ ಹೋಗುವಾಗಲೂ ಆ ಕಡತದೊಂದಿಗೇ ಅಲೆದರು, ನಾವೂ ನಿರಂತರವಾಗಿ ಶಾಸಕರ ಬಳಿ ಏನಾಯ್ತು ಸಾರ್, ಅದೊಂದು ಮಾಡಿಸಿ ಸಾರ್ ಎನ್ನುತ್ತಿದ್ದೆವು. ವಿದಾನಸೌಧದ ಆಮೆವೇಗದ ಕೆಲಸದ ಬಗ್ಗೆ ನಮಗೇನು ಗೊತ್ತಿದೆ? ಆಗಾಗ ಶಾಸಕರು ಸಿಡಿಮಿಡಿಗೊಂಡದ್ದೂ ಇದೆ! ಇಲ್ಲಿ ಯಾರಿಗೂ ಸ್ವಾರ್ಥವಿರಲಿಲ್ಲ. ಕೋಡಿ ಜನರ ಕೆಲಸವಾಗಬೇಕು ಎನ್ನುವುದಷ್ಟೇ ನಮಗಿದ್ದ ಮಹದಾಸೆ. ಕೊನೆಗೂ ವಿದಾನಸೌಧದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ ಸಭೆಗೆ ದಿನಾಂಕವನ್ನ ನಿಗಧಿಪಡಿಸಿದರು. ಜಿಲ್ಲಾಧಿಕಾರಿಗಳನ್ನ ಬೆಂಗಳೂರಿಗೆ ಕರೆಯಿಸಿಕೊಂಡು ಸಭೆ ಮಾಡುವ ಅಧಿಕಾರವಿರುವುದು ಮಂತ್ರಿಗಳಿಗೆ ಮಾತ್ರ.
ಕೋಟ ಶ್ರೀನಿವಾಸ ಪೂಜಾರಿಯವರು ತಕ್ಷಣವೇ ಸಭೆ ಕರೆದರು, ಆ ಕಾರಣಕ್ಕೆ ಆ ಭಾಗದ ಜನರು ಸಚಿವರಿಗೆ ಋಣಿಯಾಗ ಬೇಕು. ಸಚಿವರು-ಶಾಸಕರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಿತು, ಅದಕ್ಕೆ ಸಂಬಂಧ ಪಟ್ಟ ನಕ್ಷೆಯನ್ನ ಮಾಡಿಸಿದ್ದು ಜಿ.ಶಂಕರ್. ಅವರ ಸಮಾಜ ಬಂಧುಗಳ ಕುಟುಂಬಗಳೇ ಹೆಚ್ಚು ಸಮಸ್ಯೆಯಲ್ಲಿ ಇದ್ದ ಕುರಿತೋ, ಕೋಡಿ ಎನ್ನುವುದು ಜಿ.ಶಂಕರ್ ಅವರ ಹುಟ್ಟೂರು ಎನ್ನುವ ಕಾರಣಕ್ಕೋ ಇರಬಹುದು.ಏನಿಲ್ಲವೆಂದರೂ ಅದಕ್ಕೆ ಅಂದಾಜು ಹದಿನೈದು ಲಕ್ಷ ರೂಪಾಯಿ ತಗುಲುತ್ತದೆ. ಈ ಕಾರಣಕ್ಕೆ ಜಿ ಶಂಕರರಿಗೂ ಅಭಿನಂದನೆಗಳು, ಅಂದಿನ ಸಭೆಯಲ್ಲಿ ನಮ್ಮ ಟೀಮ್ ಅಭಿಮತದ ಸಂಚಿಲ್ ಶೆಟ್ಟಿ ಕೂಡ ಇದ್ದರು! ಆ ದಿನ ಶಾಸಕರು ಅಧಿಕಾರಿಗಳ ಜೊತೆಗೆ ವಾದಿಸಿದ್ದು, ಕಂದಾಯ ಇಲಾಖೆಯ ಕಾನೂನು ಪರಿಮಿತಿಗಳ ಬಗ್ಗೆ ಉಲ್ಲೆಖಿಸಿದ್ದು, ಜನರ ಪರವಾಗಿ ವಾದ ಮಾಡಿದ್ದು ಎಲ್ಲವೂ ನಮಗೆ ಗೊತ್ತಿದೆ. ಆದರೆ ಈ ಸಾರಿ ಆಗಬೇಕು ಆಗದೇ ಹೋದರೆ ಇನ್ನು ಆಗುವುದು ಸಾಧ್ಯವಿಲ್ಲ ಎನ್ನುವ ಸಂದರ್ಭ ಸೃಷ್ಠಿಯಾಗಿತ್ತು. ಕೊನೆಗೂ ಪ್ರಜಾಪ್ರಭುತ್ವ ಗೆದ್ದಿದೆ.
ಶಾಸಕರಿಗೆ, ಸಚಿವರಿಗೆ ಮತ್ತು ಆ ಜನರ ಪರವಾಗಿ ಹೋರಾಡಿದ ಎಲ್ಲರಿಗೂ ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ನಮಿಸುತ್ತದೆ, ಅಭಿನಂದನೆ ಹೇಳುತ್ತದೆ, ಕೋಡಿಕನ್ಯಾನ ಮತ್ತು ಹೊಸ ಬೆಂಗ್ರೆ ಜನರ ಕಣ್ಣಲ್ಲಿ ಭರವಸೆಯ ಬೆಳಕು ಹರಿದಿದೆ. ಕಡಲ ಮಕ್ಕಳು ಖುಶಿಯಲ್ಲಿರಲಿ, ನಮಗೆ ಅವರ ತೃಪ್ತ ಭಾವವೇ ಸಾರ್ಥಕತೆ, ನಾವು ಇನ್ನೊಂದು ಹೋರಾಟದ ಕಡೆಗೆ ಮುಖ ಮಾಡಿದ್ದೇವೆ. ಹೊಸ ವಿಷಯದೊಂದಿಗೆ ಮತ್ತೆ ಬರುತ್ತೇವೆ ನಮಸ್ಕಾರಗಳು.
ವಸಂತ್ ಗಿಳಿಯಾರ್